ಸಾರಾಂಶ
ಇತ್ತೀಚೆಗೆ ನಡೆದ ರಾಜ್ಯ ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆಯಲ್ಲಿ ಬೆಂಗಳೂರು ಪೂರ್ವ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಮಪ್ರಸಾದ್ ಹೆಸರಿನ ಅಭ್ಯರ್ಥಿಯು ನಾಮಪತ್ರ ಸಲ್ಲಿಕೆ ವೇಳೆ ನಕಲಿ ದಾಖಲೆಗಳನ್ನು ಸಲ್ಲಿಸಿರುವುದಾಗಿ ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ನಡೆದ ರಾಜ್ಯ ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆಯಲ್ಲಿ ಬೆಂಗಳೂರು ಪೂರ್ವ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಮಪ್ರಸಾದ್ ಹೆಸರಿನ ಅಭ್ಯರ್ಥಿಯು ನಾಮಪತ್ರ ಸಲ್ಲಿಕೆ ವೇಳೆ ನಕಲಿ ದಾಖಲೆಗಳನ್ನು ಸಲ್ಲಿಸಿರುವುದಾಗಿ ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ದಾಖಲಾಗಿದೆ.ಸ್ಥಳೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಈ ಸಂಬಂಧ ದೂರು ದಾಖಲಿಸಿದ್ದು, ರಾಮಪ್ರಸಾದ್ ಹೆಸರಿನ ಅಭ್ಯರ್ಥಿಯು ತನ್ನ ಅಸಲಿ ಹೆಸರು, ಜನ್ಮದಿನಾಂಕದ ಬಗ್ಗೆ ಸುಳ್ಳು ಮಾಹಿತಿ ಸಲ್ಲಿಸಿದ್ದಾರೆ. ಅವರ ಅಸಲಿ ಹೆಸರು ಎಲ್.ರಾಮಚಂದ್ರ, ತಂದೆಯ ಹೆಸರು ಲಕ್ಷ್ಮಣ. ಆದರೆ, ಬೇರೊಬ್ಬ ವ್ಯಕ್ತಿಯ ಮತದಾರರ ಗುರುತಿನ ಚೀಟಿಯನ್ನು ದುರುಪಯೋಗಪಡಿಸಿಕೊಂಡು ರಾಮಪ್ರಸಾದ್ ಎಂಬ ಹೆಸರಿನಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಅಲ್ಲದೆ, ನಾಮಪತ್ರ ಸಲ್ಲಿಕೆ ವೇಳೆ ತನ್ನ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಇರುವ ಪ್ರಕರಣಗಳ ಬಗ್ಗೆಯೂ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡದೆ ಮುಚ್ಚಿಟ್ಟು ಅಕ್ರಮ ಎಸಗಿದ್ದಾರೆ ಎಂದು ದೂರಲಾಗಿದೆ.
ಇದು ಸ್ಪಷ್ಟ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು ಬೆಂ.ಪೂರ್ವ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಗೆಲುವು ಸಾಧಿಸಿರುವ ರಾಮಪ್ರಸಾದ್ (ರಾಮಚಂದ್ರ) ಅವರನ್ನು ಆ ಸ್ಥಾನದಿಂದ ಕೂಡಲೇ ಅನರ್ಹಗೊಳಿಸಬೇಕೆಂದು ಸ್ಥಳೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ದೂರಿನಲ್ಲಿ ಆಯೋಗಕ್ಕೆ ಮನವಿ ಮಾಡಿದ್ದಾರೆ. ತಮ್ಮ ಆರೋಪಗಳಿಗೆ ಪೂರಕವಾಗಿ ರಾಮಚಂದ್ರ ಅವರ ಶೈಕ್ಷಣಿಕ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ.