ಸಾರಾಂಶ
ಬಿಜೆಪಿಯಲ್ಲಿನ ಗುಂಪುಗಾರಿಕೆಯ ಲಾಭಪಡೆದು ವಿಪಕ್ಷ ನಾಯಕರಾಗಿರುವ ಆರ್.ಅಶೋಕ್ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪದೇ ಪದೇ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಅನಾವಶ್ಯಕ ಆರೋಪ, ಪ್ರತಿಭಟನೆಯ ದಾರಿ ಅನುಸರಿಸುತ್ತಿದ್ದಾರೆ
ಬೆಂಗಳೂರು : ಬಿಜೆಪಿಯಲ್ಲಿನ ಗುಂಪುಗಾರಿಕೆಯ ಲಾಭಪಡೆದು ವಿಪಕ್ಷ ನಾಯಕರಾಗಿರುವ ಆರ್.ಅಶೋಕ್ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪದೇ ಪದೇ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಅನಾವಶ್ಯಕ ಆರೋಪ, ಪ್ರತಿಭಟನೆಯ ದಾರಿ ಅನುಸರಿಸುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಶೋಕ್ ಅವರು ಸಂಸದ ಡಾ। ಕೆ.ಸುಧಾಕರ್ ಅವರೊಂದಿಗೆ ಬಲೇ ಜೋಡಿ ರೂಪದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ರಾಜ್ಯದ ಜನತೆಗೆ ಮನರಂಜನೆ ನೀಡುತ್ತಿದ್ದಾರೆ. ತಮ್ಮ ಮೇಲಿರುವ ಅನೇಕ ಆರೋಪಗಳಿಗೆ ಉತ್ತರ ಕೊಡಲಾಗದವರಿಗೆ ರಾಜ್ಯ ಸರ್ಕಾರವನ್ನು ಟೀಕಿಸುವ ನೈತಿಕತೆ ಇಲ್ಲ. ಇಬ್ಬರು ನಾಯಕರ ವಿರುದ್ಧದ ಭ್ರಷ್ಟಾಚಾರ, ಹಗರಣಗಳಿಗೆ ಸಂಬಂಧಿಸಿದಂತೆ ಕೆಪಿಸಿಸಿ 10 ಪ್ರಶ್ನೆಗಳನ್ನು ಕೇಳುತ್ತಿದ್ದು, ಸಾರ್ವಜನಿಕವಾಗಿ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.
ಕೋವಿಡ್ ಹಗರಣದಲ್ಲಿ ಮೈಕಲ್ ಕುನ್ಹಾ ಆಯೋಗದ ವರದಿಗೆ ಅನುಗುಣವಾಗಿ ತನಿಖೆ ಅಥವಾ ಕಾನೂನು ಕ್ರಮಕ್ಕೆ ಸಮ್ಮಿತಿಸುವಿರಾ? ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಬಿಟ್ ಕಾಯಿನ್ ಹಗರಣ, ಹೊಳಲ್ಕೆರೆಯಲ್ಲಿ ರಾಜ್ಯ ಸರ್ಕಾರಕ್ಕೆ ಸೇರಿದ ಅಮೃತ್ ಕಾವಲ್ ಪ್ರದೇಶದಲ್ಲಿ ಸುಮಾರು 1,000 ಎಕರೆ ಭೂಮಿ ಕಾನೂನುಬಾಹಿರ ಹಂಚಿಕೆ, ತಮ್ಮದೇ ಪಕ್ಷದ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ರವರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧ ಮಾಡಿರುವ ನೀರಾವರಿ ಇಲಾಖೆಯಲ್ಲಿ 20,000 ಕೋಟಿ ರು. ಅಕ್ರಮ ಆರೋಪ, ಸರ್ಕಾರವನ್ನು ಉರುಳಿಸಲು ಒಂದು ಸಾವಿರ ಕೋಟಿ ರು. ಹಣ ಶೇಖರಣೆ ಆರೋಪಗಳ ಬಗ್ಗೆ ತನಿಖೆ ಮಾಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸುವರೇ? ಎಂದು ಪ್ರಶ್ನಿಸಿದ್ದಾರೆ.