ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ವಿಚಾರ ಸಿನಿಮೀಯ ರೀತಿಯಲ್ಲಿ ಚರ್ಚೆಯಾಗುತ್ತಿದೆ. ‘ಮತ್ತೊಂದು ಡಿಸಿಎಂ ಹುದ್ದೆ ಸೃಷ್ಟಿಯ ಪ್ರಸ್ತಾಪ ಇಲ್ಲ’ ಎಂದು ಹೇಳುವ ಮೂಲಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಡಿಸಿಎಂ ಆಗ್ರಹ ವಿಚಾರವನ್ನು ತೆರೆಮರೆಗೆ ಸರಿಸಲು ಯತ್ನಿಸಿದ್ದಾರೆ. ಆದರೆ ಸಚಿವ ಕೆ.ಎನ್. ರಾಜಣ್ಣ ಡಿಸಿಎಂ ಆಗ್ರಹ ನಿರಂತರವಾಗಿ ಇರುತ್ತದೆ ಎಂದು ಪುನರುಚ್ಚರಿಸಿದ್ದಾರೆ.
ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸುರ್ಜೇವಾಲ ಅವರು, ಹೆಚ್ಚುವರಿ ಡಿಸಿಎಂ ವಿಚಾರ ಪಕ್ಷದ ಮುಂದೆ ಇಲ್ಲ. ಜನರ ಬಳಿಗೆ ನಮ್ಮ ಆಡಳಿತವನ್ನು ತೆಗೆದುಕೊಂಡು ಹೋಗಬೇಕು ಜೊತೆಗೆ ಜನರನ್ನು ಆಡಳಿತದಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಲೋಕಸಭೆ ಚುನಾವಣೆಯಲ್ಲಿ ನಾವು ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ಇದಕ್ಕೆ ಅಗತ್ಯ ತಯಾರಿ ಬಗ್ಗೆ ಮಾತ್ರ ಚರ್ಚೆಯಿದೆ. ಡಿಸಿಎಂ ಬಗ್ಗೆ ಇಲ್ಲ ಎಂದು ಹೇಳಿದರು.
ರಾಜಣ್ಣ ತಿರುಗೇಟು: ಇದೇ ವೇಳೆ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ ತಮ್ಮ ಡಿಸಿಎಂ ಆಗ್ರಹ ವಾದವನ್ನು ಪುನರುಚ್ಚರಿಸಿದರು. ಸುರ್ಜೇವಾಲಾ ಹೇಳಿಕೆಗೂ ಪ್ರತಿಕ್ರಿಯಿಸಿದ ಅವರು, ‘ಸುರ್ಜೆವಾಲ ಅವರು ಹೇಳಿದ್ದು ಸರಿ ಇದೆ ಅಂತ ಹೇಳೋಕಾಗಲ್ಲ, ಸರಿ ಇಲ್ಲ ಅಂತಲೂ ಹೇಳೋಕಾಗಲ್ಲ. ಆದರೆ ಸಮುದಾಯವಾರು ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಉತ್ತಮ ಫಲಿತಾಂಶ ಬರುತ್ತದೆ’ ಎಂದು ಹೇಳಿದರು.
ಜತೆಗೆ, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸಿದರೆ ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳನ್ನೂ ಗೆಲ್ಲಬಹುದು. ಕನಿಷ್ಠ 20 ಕ್ಷೇತ್ರಗಳನ್ನಾದರೂ ಗೆಲ್ಲದಿದ್ದರೆ ನಮಗೆ ಯಾವ ನೈತಿಕತೆ ಇರುತ್ತದೆ ಎಂದು ಪ್ರಶ್ನಿಸಿದರು.
ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರೋಧವಿದೆಯಂತಲ್ಲ ಎಂಬ ಪ್ರಶ್ನೆಗೆ, ‘ಡಿ.ಕೆ ಶಿವಕುಮಾರ್ ವಿರೋಧ ಇದ್ದಾರೆ ಅಂತ ಯಾರು ತಿಳಿದುಕೊಳ್ಳಬೇಡಿ. ಯಾರೋ ಹೇಳಿಕೊಟ್ಟು ನನ್ನ ಬಾಯಲ್ಲಿ ಈ ವಿಚಾರ ಹೇಳಿಸುತ್ತಿದ್ದಾರೆ ಅನ್ನೋ ಊಹಾಪೋಹಗಳು ಬೇಡ. ನಮಗ್ಯಾರು ಹೇಳಿಕೊಟ್ಟೂ ಇಲ್ಲ, ಡಿ.ಕೆ.ಶಿವಕುಮಾರ್ ಅವರ ವಿರೋಧವೂ ಇಲ್ಲ’ ಎಂದರು.
ಹೆಚ್ಚುವರಿ ಡಿಸಿಎಂ ಮಾಡಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ‘ಅವರು ಆ ರೀತಿ ಹೇಳಿಲ್ಲ. ಅಂತಹ ಪ್ರಸ್ತಾಪ ನಮ್ಮ ಹಂತದವರೆಗೂ ಬಂದಿಲ್ಲ ಎಂದು ಖರ್ಗೆ ಹೇಳಿರೋದು. ಲೋಕಸಭೆ ಚುನಾವಣೆ ಸಮಯದಲ್ಲಿ ಗೊಂದಲ ಮಾಡೋದು ಬೇಡ ಅಂತ ಹೇಳಿದ್ದಾರೆ. ಅಷ್ಟಕ್ಕೂ ನಾವಿನ್ನೂ ಈ ವಿಚಾರವನ್ನು ಖರ್ಗೆ ಅವರ ಗಮನಕ್ಕೆ ತೆಗೆದುಕೊಂಡು ಹೋಗಿಲ್ಲ’ ಎಂದರು.
ಸುರ್ಜೇವಾಲ ಹೇಳಿದ್ದು ಸರಿ ಇದೆ ಅಂತ ಹೇಳೋಕಾಗಲ್ಲ, ಸರಿ ಇಲ್ಲ ಅಂತಲೂ ಹೇಳೋಕಾಗಲ್ಲ. ಜಾತಿವಾರು ಡಿಸಿಎಂ ಹುದ್ದೆ ನೀಡಿದರೆ ಲೋಕಸಭೆ ಚುನಾವಣೆಯಲ್ಲಿ ಲಾಭವಿದೆ. ಕನಿಷ್ಠ 20 ಸ್ಥಾನ ಗೆಲ್ಲದಿದ್ದರೆ ನಮಗೆ ಯಾವ ನೈತಿಕತೆ ಇರುತ್ತದೆ? ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು.