ಸಾರಾಂಶ
ಬೆಂಗಳೂರು/ಕೊಪ್ಪಳ : ಅರ್ಕಾವತಿ ಬಡಾವಣೆ ವಿಚಾರದಲ್ಲಿ ನಾನು ರೀಡೂ ಮಾಡಿರುವುದಲ್ಲ, ಅದು ಸುಪ್ರೀಂಕೋರ್ಟ್ ಹೇಳಿರುವುದು. ರಾಜ್ಯಪಾಲರು ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಷನ್ ಸಂಬಂಧ ಕೆಂಪಣ್ಣ ಆಯೋಗದ ವರದಿ ಮಂಡಿಸುವಂತೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಸರ್ಕಾರಕ್ಕೆ ಬರೆದಿರುವ ಪತ್ರದ ಸಂಬಂಧ ಅವರು ಪ್ರತಿಕ್ರಿಯಿಸಿದ್ದಾರೆ.
ಭಾನುವಾರ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಈ ಕುರಿತು ಪತ್ರ ಕಳುಹಿಸಿರುವುದು ಗೊತ್ತಿಲ್ಲ. ನಾನಿನ್ನೂ ನೋಡಿಲ್ಲ. ಆದರೆ ಅರ್ಕಾವತಿ ರೀಡೂ ನಾನು ಮಾಡಿರುವುದಲ್ಲ. ಅದು ಸುಪ್ರೀಂಕೋರ್ಟ್ ಸೂಚನೆ. ಅಷ್ಟೂ ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ ಎಂದು ಕಿಡಿ ಕಾರಿದರು.
ಅರ್ಕಾವತಿ ಬಡಾವಣೆಗಾಗಿ ಭೂಸ್ವಾಧೀನಪಡಿಸಿಕೊಂಡಿದ್ದ ಒಟ್ಟು ಜಮೀನಿನ ಪೈಕಿ 541 ಎಕರೆಯನ್ನು ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದರು ಎಂದು ಬಿಜೆಪಿ ಆರೋಪಿಸಿತ್ತು.
ಈ ಬಗ್ಗೆ ರಚಿಸಿದ್ದ ಎಚ್.ಎಸ್.ಕೆಂಪಣ್ಣ ನೇತೃತ್ವದ ವಿಚಾರಣೆ ಆಯೋಗವು 2017ರಲ್ಲಿ 1,861 ಪುಟಗಳ ವರದಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ಚಿಟ್ ನೀಡಿತ್ತು. ಆದರೆ ವರದಿಯನ್ನು ಸರ್ಕಾರ ವಿಧಾನಮಂಡಲದಲ್ಲಿ ಮಂಡನೆ ಮಾಡಿರಲಿಲ್ಲ.
ಬಳಿಕ ಅಧಿಕಾರಕ್ಕೆ ಬಂದಿದ್ದ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ವರದಿ ಮಂಡಿಸುವುದಾಗಿ ಹೇಳಿದ್ದರು. ಅಲ್ಲದೆ 8 ಸಾವಿರ ಕೋಟಿ ರು. ಹಗರಣ ನಡೆದಿದೆ ಎಂದು ಆರೋಪಿಸಿದ್ದರು. ಆದರೂ ವರದಿ ಮಂಡನೆಯಾಗಿರಲಿಲ್ಲ.
ಹೀಗಾಗಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಕೆಂಪಣ್ಣ ಆಯೋಗದ ವರದಿಯನ್ನು ಮಂಡಿಸಬೇಕು ಎಂದು ಪತ್ರ ಬರೆದಿದ್ದರು.
ಇದರ ಆಧಾರದ ಮೇಲೆ ರಾಜ್ಯಪಾಲರು ಸರ್ಕಾರದಿಂದ ವರದಿ ಕೇಳಿದ್ದರು. ಹೀಗಾಗಿ ರಾಜ್ಯಪಾಲರು ನೀಡಿರುವ ನಿರ್ದೇಶನದಂತೆ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಎಚ್.ಎಸ್.ಕೆಂಪಣ್ಣ ವಿಚಾರಣೆ ಆಯೋಗದ ವರದಿ ಮತ್ತು ದಾಖಲೆಗಳನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಲ್ಲಿಸಿದ್ದಾರೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು 2024ರ ಸೆ.20ರಂದು ಅನಧಿಕೃತ ಟಿಪ್ಪಣಿ ಹೊರಡಿಸಿದೆ ಎಂದು ತಿಳಿದುಬಂದಿದೆ.
ತನ್ಮೂಲಕ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಮುಡಾ ಪ್ರಕರಣ, ಎಚ್.ಡಿ.ಕುಮಾರಸ್ವಾಮಿ ಗಣಿ ಪ್ರಕರಣ, ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದ ಬಳಿಕ ಇದೀಗ ಅರ್ಕಾವತಿ ಪ್ರಕರಣವೂ ಚರ್ಚೆಯಾಗುತ್ತಿದೆ.
ರಾಜಭವನದಿಂದಲೇ ಯಾಕೆ ಮಾಹಿತಿ ಲೀಕ್ ಆಗಿರಬಹುದು: ಸಿಎಂ
ಲೋಕಾಯುಕ್ತ ಸಂಸ್ಥೆ ಹಾಗೂ ರಾಜ್ಯಪಾಲರ ಭವನದ ನಡುವೆ ನಡೆದ ಪತ್ರ ವ್ಯವಹಾರ ಸೋರಿಕೆ ಕುರಿತು ಸ್ಪಷ್ಟನೆ ಕೋರಿ ರಾಜ್ಯಪಾಲರು ಸರ್ಕಾರಕ್ಕೆ ಬರೆದಿರುವ ಪತ್ರದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪತ್ರದ ಸೋರಿಕೆ ರಾಜಭವನದಲ್ಲಿಯೇ ಯಾಕೆ ಆಗಿರಬಾರದು? ನಮ್ಮ ಕಡೆಯಿಂದ ಆಗಿದೆ ಎಂದು ಯಾಕೆ ಹೇಳುತ್ತಾರೆ? ಈ ಬಗ್ಗೆ ತನಿಖೆ ಮಾಡಿಸಿದರೆ ಎಲ್ಲಿ ಸೋರಿಕೆಯಾಗಿದೆ ಎನ್ನುವುದು ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.