ಉದ್ಯೋಗ ನೀಡದೆ ವಂಚಿಸಿದ ಬಿಜೆಪಿ ತಿರಸ್ಕರಿಸಿ

| Published : Mar 04 2024, 01:15 AM IST

ಸಾರಾಂಶ

ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಬಡವರ, ರೈತರ ಸಾಲ ಮನ್ನಾ ಮಾಡಿಲ್ಲ ಬದಲಾಗಿ ಶ್ರೀಮಂತರ ೧೦ ಲಕ್ಷ ಕೋಟಿ ರು. ಸಾಲವನ್ನು ಮನ್ನಾ ಮಾಡುವ ಮೂಲಕ ಕೇಂದ್ರ ಸರ್ಕಾರ ಬಡವರ ಪರವಲ್ಲ ಬಂಡವಾಳಶಾಹಿಗಳ ಪರ ಎಂಬುದನ್ನು ಸಾಬೀತು ಮಾಡಿದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಪ್ರತಿವರ್ಷ ೨ ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿ ಕೊಡಲಾಗುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಕೊಟ್ಟ ಮಾತಿನಂತೆ ನಡೆಯದೆ ನಿರುದ್ಯೋಗಿಗಳನ್ನು ಯಾಮಾರಿಸಿದ್ದಾರೆ. ಇಂತಹ ವಚನ ಭ್ರಷ್ಟ ಬಿಜೆಪಿ ಸರ್ಕಾರವನ್ನು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಡಿ ಎಂದು ಶಾಸಕ ಎಸ್.ಎನ್ .ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಮೊದಲನೇ ಬಾರಿ ಮೋದಿ ಪ್ರಧಾನಿಯಾದಾಗ ವಿದೇಶಗಳಲ್ಲಿರುವ ಕಪ್ಪು ಹಣವನ್ನು ತಂದು ದೇಶದ ಎಲ್ಲಾ ನಾಗರೀಕರ ಖಾತೆಗೆ ತಲಾ ೧೫ ಲಕ್ಷ ರು. ಹಾಕಲಾಗುವುದೆಂದು ಭರವಸೆ ನೀಡಿದ್ದರು,ಆದರೆ ಅದೂ ಸಾಧ್ಯವಾಗಲಿಲ್ಲ ಎಂದು ಟೀಕಿಸಿದರು.

ಶ್ರೀಮಂತರ ಸಾಲ ಮನ್ನಾ

ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಬಡವರ, ರೈತರ ಸಾಲ ಮನ್ನಾ ಮಾಡಿಲ್ಲ ಬದಲಾಗಿ ಶ್ರೀಮಂತರ ೧೦ ಲಕ್ಷ ಕೋಟಿ ರು. ಸಾಲವನ್ನು ಮನ್ನಾ ಮಾಡುವ ಮೂಲಕ ಕೇಂದ್ರ ಸರ್ಕಾರ ಬಡವರ ಪರವಲ್ಲ ಬಂಡವಾಳಶಾಹಿಗಳ ಪರ ಎಂಬುದನ್ನು ಸಾಬೀತು ಮಾಡಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ೫ ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಮಾತಿನಂತೆ ಈಡೇರಿಸಿದೆ ಎಂದರು.

ವಿಪಕ್ಷದವರು ೫ ಗ್ಯಾರಂಟಿಗಳನ್ನು ಕಾಂಗ್ರೆಸ್ ಕೈಯಲ್ಲಿ ಈಡೇರಿಸಲು ಸಾಧ್ಯವಿಲ್ಲವೆಂದು ಟೀಕಿಸುತ್ತಿದ್ದರು, ಆದರೆ ಈಗ ಅವರ ಬಾಯಿಗೆ ಬೀಗ ಹಾಕಲಾಗಿದೆ. ವರ್ಷಕ್ಕೆ ಒಂದು ಕುಟುಂಬಕ್ಕೆ ಗ್ಯಾರಂಟಿಗಳ ಮೂಲಕ ೪೫ ಸಾವಿರ ಹಣ ವರ್ಗಾವಣೆಯಾಗುತ್ತಿದೆ, ಇಷ್ಟೆಲ್ಲಾ ಬಡವರ ಪರ ಕಾಳಜಿ ವಹಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರು ಬರುವ ಎಲ್ಲಾ ಚುನಾವಣೆಗಳಲ್ಲಿ ರಾಜಕೀಯ ಶಕ್ತಿ ತುಂಬಲು ಬೆಂಬಲವಾಗಿರಬೇಕು ಎಂದರು ಮನವಿ ಮಾಡಿದರು.

ಗ್ಯಾರಂಟಿ ರದ್ದು

ಚುನಾವಣೆ ವೇಳೆ ಬಿಜೆಪಿಗರ ಬೆಣ್ಣೆ ಮಾತಿಗೆ ಬೆರಗಾಗಿ ಬಿಜೆಪಿಗೆ ಮತಹಾಕಿದರೆ ೫ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು, ಗ್ಯಾರಂಟಿ ಯೋಜನೆಗಳು ಬೇಕಾ ಇಲ್ಲ ಬೆಣ್ಣೆ ಮಾತುಗಳನ್ನಾಡುವವರು ಬೇಕಾ ಎಂದು ನೀವೆ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದರು.ಸಭೆಗೆ ಅಧಿಕಾರಿಗಳ ಗೈರು

ಸಾರ್ವಜನಿಕರಿಗೆ ೫ ಗ್ಯಾರಂಟಿ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡುವ ಸಮಾವೇಶಕ್ಕೆ ಅಧಿಕಾರಿಗಳು ಪ್ರಚಾರ ಮಾಡಿ ಜನರನ್ನು ಸೇರಿಸದೆ ಕಡೆಗಣಿಸಿದ್ದಕ್ಕೆ ಶಾಸಕರು ಅಧಿಕಾರಿಗಳ ವರ್ತನೆ ವಿರುದ್ಧ ಗರಂ ಆಗಿ ವೇದಿಕೆ ಮೇಲೆಯೇ ತರಾಟೆಗೆ ತೆಗೆದುಕೊಂಡರು. ಬೆಳಗ್ಗೆ ೧೦.೩೦ಕ್ಕೆ ಸಮಾವೇಶ ನಿಗದಿಯಾಗಿತ್ತು, ಆದರೆ ೧೨ ಗಂಟೆಯಾದರೂ ಸಾರ್ವಜನಿಕರೇ ಬಾರದೆ ಇದ್ದಿದ್ದನ್ನು ಹಾಗೂ ಅಧಿಕಾರಿಗಳೂ ಗೈರಾಗಿದ್ದನ್ನು ನೋಡಿ ಕೆರಳಿದರು. ಹಾಗೆಯೇ ಪುರಸಭೆ ಸದಸ್ಯರೂ ತಮ್ಮ ವಾರ್ಡುಗಳಿಂದಲೂ ಜನರನ್ನು ಕರೆತರದೆ ಇದ್ದಿದ್ದನ್ನೂ ಗಮನಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಸಮಾವೇಶದಲ್ಲಿ ತಹಸೀಲ್ದಾರ್ ರಶ್ಮಿ, ತಾಪಂ ಇಒ ರವಿಕುಮಾರ್, ಪುರಸಭೆ ಸಿಒ ಎಂ.ಮೀನಾಕ್ಷಿ, ಬಿಇಒ ಸುಕನ್ಯ, ಮುಖಂಡರಾದ ಎಸ್.ಎ. ಪಾರ್ಥಸಾರಥಿ, ಎಂ.ಚಂದು, ಗೋಪಾಲಗೌಡ, ಶಂಸುದ್ದಿನ್ ಬಾಬು, ಅ.ನಾ. ಹರೀಶ್, ಪುರಸಭೆ ಸದಸ್ಯರಾದ ವೆಂಕಟೇಶ್, ಶಫಿ,ಶಾರದ, ಗೋವಿಂದ ಮತ್ತಿತರು ಇದ್ದರು.