ಸಾರಾಂಶ
ಬೆಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‌ಎಸ್) ಶತಾಬ್ದಿ ವರ್ಷದಲ್ಲಿ ಸಂಘದ ಕಾರ್ಯ ವಿಸ್ತರಣೆ, ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಪುನರ್ ಜಾಗೃತಿಯ ಗುರಿ ಹೊಂದಲಾಗಿದೆ ಎಂದು ಆರ್‌ಎಸ್‌ಎಸ್‌ನ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ.
ಮಾಗಡಿ ರಸ್ತೆಯ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದ ಆವರಣದಲ್ಲಿ ನಡೆದ ಮೂರು ದಿನಗಳ ಅಖಿಲ ಭಾರತೀಯ ಪ್ರತಿನಿಧಿಗಳ ಸಭೆಯ ಕೊನೆಯ ದಿನವಾದ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2025ರ ವಿಜಯದಶಮಿ ದಿನ ಸಂಘವು ನೂರು ವರ್ಷ ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಈ ಒಂದು ವರ್ಷಗಳ ಕಾಲ ಸಂಘವು ತನ್ನ ಕೆಲಸದ ವಿಸ್ತರಣೆ ಮತ್ತು ಬಲಗೊಳಿಸುವಿಕೆಯತ್ತ ದೃಷ್ಟಿ ಕೇಂದ್ರೀಕರಿಸಲಿದೆ ಎಂದರು.
ಸಂಘವು ಈ ಹಿಂದೆ 25, 50, 75 ವರ್ಷ ಪೂರೈಸಿದಾಗ ಸಂಭ್ರಮದ ರೀತಿಯಲ್ಲಿ ಆಚರಿಸಿಲ್ಲ. ಹೀಗಾಗಿ ನೂರನೇ ವರ್ಷವೂ ನಮಗೆ ಒಂದು ವರ್ಷ ಅಷ್ಟೇ. ಆದರೆ, ಇದು ಆತ್ಮಾವಲೋಕನ ಮಾಡಲು, ಸಂಘದ ಕೆಲಸಕ್ಕೆ ಸಮಾಜ ಬೆಂಬಲ ಹೆಚ್ಚಿಸಲು, ಸಮಾಜ ಸಂಘಟಿಸಲು ನಮ್ಮನ್ನು ಪುನರ್ ಸಮರ್ಪಿಸಿಕೊಳ್ಳುವ ಸಮಯವಾಗಿದೆ. ಶತಮಾನದ ವರ್ಷದಲ್ಲಿ ನಾವು ಎಚ್ಚರಿಕೆಯಿಂದ ಗುಣಾತ್ಮಕ ಮತ್ತು ಸಮಗ್ರವಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಮೂರು ದಿನಗಳ ಕಾಲ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಬಾಂಗ್ಲಾದೇಶದ ಹಿಂದೂಗಳನ್ನು ಬೆಂಬಲಿಸಿ ಕೈಗೊಂಡಿರುವ ಒಂದು ನಿರ್ಣಯದ ಹೊರತಾಗಿ ಸಂಘದ ನೂರು ವರ್ಷಗಳ ಬಗ್ಗೆ ಸಂಕಲ್ಪ ಕೈಗೊಂಡಿದೆ. ಸಂಘದ ಸಂಸ್ಥಾಪಕ ಡಾ.ಕೇಶವ ಬಲಿರಾಮ್ ಹೆಡಗೇವಾರ್ ಹೇಳಿದಂತೆ ಸಂಘವು ಯಾವುದೇ ಹೊಸ ಕಾರ್ಯ ಪ್ರಾರಂಭಿಸಿಲ್ಲ. ಹಲವು ಶತಮಾನಗಳಿಂದ ನಡೆಯುತ್ತಿರುವ ಕಾರ್ಯ ಮುಂದುವರೆಸುತ್ತಿದೆ ಎಂದರು.
ಸ್ವಯಂ ಸೇವಕರ ಕಾರ್ಯಕ್ರಮಗಳ ಆಯೋಜನೆ : 2025ರ ವಿಜಯದಶಮಿ ದಿನ ಆರಂಭವಾಗುವ ಸಂಘದ ಶತಾಬ್ಧಿ ಸಮಯದಲ್ಲಿ ನಿರ್ದಿಷ್ಟ ಚಟುವಟಿಕೆಗಳ ಮೇಲೆ ಗಮನ ಕೇಂದ್ರೀಕರಿಸಲಾಗುತ್ತದೆ. ಆ ದಿನ ಸರಸಂಘಚಾಲಕರು ಪ್ರತಿ ವರ್ಷದಂತೆ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮುಂದಿನ ವರ್ಷ ದೇಶಾದ್ಯಂತ ಮಂಡಲ ಹಾಗೂ ನಗರಮಟ್ಟದಲ್ಲಿ ಗಣವೇಷಧಾರಿ ಸ್ವಯಂ ಸೇವಕರ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಮನೆ-ಮನೆ ಸಂಪರ್ಕ ಅಭಿಯಾನ:
‘ಪ್ರತಿ ಗ್ರಾಮ-ಪ್ರತಿ ವಸತಿ-ಪ್ರತಿ ಮನೆ’ ಎಂಬ ಘೋಷಣೆಯೊಂದಿಗೆ 2025ರ ನವೆಂಬರ್‌ನಿಂದ 2026ರ ಜನವರಿ ವರೆಗೆ ಬೃಹತ್ ಪ್ರಮಾಣದ ಮನೆ-ಮನೆ ಸಂಪರ್ಕ ಅಭಿಯಾನ ನಡೆಯಲಿದೆ. ಈ ವೇಳೆ ಸಂಘ ಕುರಿತ ಮುದ್ರಿತ ಸಾಹಿತ್ಯ ವಿತರಿಸಲಾಗುತ್ತದೆ. ಈ ಅಭಿಯಾನವನ್ನು ಸ್ಥಳೀಯ ಸಂಘದ ಘಟಕಗಳು ಮುನ್ನಡೆಸಲಿವೆ ಎಂದರು.
ಹಿಂದೂ ಸಮ್ಮೇಳನಗಳ ಆಯೋಜನೆ:
ಸಂಘದ ಎಲ್ಲಾ ಮಂಡಲ ಅಥವಾ ವಸತಿಗಳಲ್ಲಿ ಹಿಂದೂ ಸಮ್ಮೇಳನಗಳನ್ನು ಆಯೋಜಿಸಲಾಗುವುದು. ದೈನಂದಿನ ಜೀವನದಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯ, ರಾಷ್ಟ್ರದ ಕಾರಣಕ್ಕಾಗಿ ಎಲ್ಲ ಕೊಡುಗೆ ಮತ್ತು ಪಂಚ ಪರಿವರ್ತನ ಕಾರ್ಯದಲ್ಲಿ ಪ್ರತಿಯೊಬ್ಬರ ಭಾಗವಹಿಸುವಿಕೆಯ ಸಂದೇಶ ನೀಡುವುದಾಗಿ ತಿಳಿಸಿದರು.
ಸಾಮಾಜಿಕ ಸದ್ಭಾವ ಸಭೆಗಳು:
ಮಂಡಲ/ನಗರ ಮಟ್ಟದಲ್ಲಿ ಸಾಮಾಜಿಕ ಸದ್ಭಾವ ಸಭೆಗಳನ್ನು ಆಯೋಜಿಸುವ ಮುಖಾಂತರ ಸಾಮರಸ್ಯದ ಬದುಕಿನ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಸಂಸ್ಕೃತಿ ಬೇರುಗಳನ್ನು ಮತ್ತು ಹಿಂದೂ ಗುಣವನ್ನು ಕಳೆದುಕೊಳ್ಳದೆ ಆಧುನಿಕ ಜೀವನ ನಡೆಸುವುದರ ಬಗ್ಗೆ ಈ ಸಭೆಗಳು ಬೆಳಕು ಚೆಲ್ಲಲಿವೆ. ಇದಕ್ಕೆ ಇತ್ತೀಚೆಗೆ ನಡೆದ ಮಹಾಕುಂಭಮೇಳವೇ ಸಾಕ್ಷಿ ಎಂದರು.
ನಾಗರಿಕರ ಸಂವಾದ-ಗೋಷ್ಠಿಗಳು:
ದೇಶದ ಎಲ್ಲಾ ಜಿಲ್ಲಾಮಟ್ಟದಲ್ಲಿ ಪ್ರಮುಖ ನಾಗರಿಕರ ಸಂವಾದಗೋಷ್ಠಿಗಳನ್ನು ಆಯೋಜಿಸಲಾಗುವುದು. ಈ ಗೋಷ್ಠಿ-ಸಂವಾದಗಳು ರಾಷ್ಟ್ರೀಯ ವಿಷಯಗಳ ಮೇಲೆ ಸರಿಯಾದ ದೃಷ್ಟಿಕೋನ ಮೂಡಿಸುವುದು ಮತ್ತು ಸಮಾಜದಲ್ಲಿ ಇರುವ ತಪ್ಪು ಕಲ್ಪ ಕಥನಗಳನ್ನು ಸರಿಪಡಿಸುವ ಮೇಲೆ ಕೇಂದ್ರೀಕೃತವಾಗಿರುತ್ತವೆ ಎಂದರು.
ಯುವಕರಾಗಿ ವಿಶೇಷ ಕಾರ್ಯಕ್ರಮ: ಯುವಕರಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. 15ರಿಂದ 30 ವರ್ಷದೊಳಗಿನ ಯುವಕರಿಗಾಗಿ ರಾಷ್ಟ್ರ ನಿರ್ಮಾಣ ಚಟುವಟಿಕೆಗಳು, ಸೇವಾ ಚಟುವಟಿಕೆಗಳು ಮತ್ತು ಪಂಚ ಪರಿವರ್ತನೆಯ ಮೇಲೆ ಕೇಂದ್ರೀಕರಿಸುವ ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು. ಕಾರ್ಯಕ್ರಮ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ಪ್ರಾಂತದ ಘಟಕಗಳೇ ತಮ್ಮ ಅಗತ್ಯಕ್ಕೆ ತಕ್ಕಂತೆ ಯೋಜಿಸುತ್ತವೆ ಎಂದು ತಿಳಿಸಿದರು.