ಆರ್‌ಎಸ್‌ಎಸ್‌ನಿಂದಲೇ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ : ಸಿಎಂ ಹೇಳಿಕೆ, ಕೋಲಾಹಲ

| N/A | Published : Mar 18 2025, 01:47 AM IST / Updated: Mar 18 2025, 04:24 AM IST

ಸಾರಾಂಶ

‘ಆರ್‌ಎಸ್‌ಎಸ್‌ನಿಂದಲೇ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಆರ್‌ಎಸ್‌ಎಸ್‌ನವರ ದ್ವೇಷ ರಾಜಕಾರಣ, ಹಿಂಸಾ ರಾಜಕಾರಣವೇ ಗಲಭೆ ಹಾಗೂ ಅಪರಾಧಗಳಿಗೆ ಕಾರಣ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಂಭೀರ ಆರೋಪವು ಸೋಮವಾರ ವಿಧಾನಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು.

 ವಿಧಾನಸಭೆ : ‘ಆರ್‌ಎಸ್‌ಎಸ್‌ನಿಂದಲೇ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಆರ್‌ಎಸ್‌ಎಸ್‌ನವರ ದ್ವೇಷ ರಾಜಕಾರಣ, ಹಿಂಸಾ ರಾಜಕಾರಣವೇ ಗಲಭೆ ಹಾಗೂ ಅಪರಾಧಗಳಿಗೆ ಕಾರಣ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಂಭೀರ ಆರೋಪವು ಸೋಮವಾರ ವಿಧಾನಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು.

ಆರ್‌ಎಸ್‌ಎಸ್‌ ಕುರಿತ ಮುಖ್ಯಮಂತ್ರಿ ಅವರ ಹೇಳಿಕೆಯನ್ನು ಕಡತದಿಂದ ತೆಗೆಯಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರೆ, ‘ನನ್ನ ಮಾತಿಗೆ ನಾನು ಬದ್ಧ. ಆರ್‌ಎಸ್‌ಎಸ್‌ನವರಿಗೆ ಹೆದರುವ ಪ್ರಶ್ನೆಯೇ ಇಲ್ಲ. ಅವರನ್ನು ಎದುರಿಸಲು ಸಿದ್ಧ’ ಎಂದು ಸಿದ್ದರಾಮಯ್ಯ ಸವಾಲು ಎಸೆದರು.

ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು, ‘ಮುಖ್ಯಮಂತ್ರಿಗಳಿಗೆ ವಯಸ್ಸಾಗಿದೆ. ಹೀಗಾಗಿ ನೆನಪಿನ ಶಕ್ತಿ ಕಳೆದುಕೊಂಡು ಮಾತನಾಡಿದ್ದಾರೆ. ಅವರ ಹೇಳಿಕೆ ಕಡತದಿಂದ ತೆಗೆಯಬೇಕು’ ಎಂದು ಒತ್ತಾಯಿಸಿದರು. ಇದೇ ವೇಳೆ ‘ಕಾಂಗ್ರೆಸ್‌ ಪಾಕಿಸ್ತಾನ ಏಜೆಂಟ್‌, ಜೈ ಶ್ರೀರಾಮ್‌, ಆರ್‌ಎಸ್‌ಎಸ್‌ ಜಿಂದಾಬಾದ್‌’ ಎಂದು ಘೋಷಣೆಗಳನ್ನು ಕೂಗಿದರು.

ಇದರಿಂದ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ತಾರಕಕ್ಕೇರಿ ಕಲಾಪವನ್ನು ಹತ್ತು ನಿಮಿಷಗಳ ಕಾಲ ಮುಂದೂಡಲಾಯಿತು. ಬಳಿಕವೂ ಜಗ್ಗದ ಸಿದ್ದರಾಮಯ್ಯ ಅವರು, ‘ಯಾವುದೇ ಕಾರಣಕ್ಕೂ ಆರ್‌ಎಸ್‌ಎಸ್‌ ಕುರಿತ ಹೇಳಿಕೆ ಹಿಂಪಡೆಯುವುದಿಲ್ಲ. ನಾನು ಇರುವುದನ್ನೇ ಹೇಳಿದ್ದೇನೆ’ ಎಂದು ಪಟ್ಟು ಹಿಡಿದ ಕಾರಣ ಮತ್ತೊಮ್ಮೆ ಕಲಾಪ ಮುಂದೂಡಿ ಸಂಧಾನಸಭೆ ನಡೆಸಲಾಯಿತು.

ನಂತರ ಸ್ಪೀಕರ್‌ ಯು.ಟಿ. ಖಾದರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್‌ಎಸ್‌ಎಸ್‌ ಕುರಿತ ಹೇಳಿಕೆ ಹಾಗೂ ಕಾಂಗ್ರೆಸ್‌ ಪಾಕಿಸ್ತಾನ್‌ ಏಜೆಂಟ್‌ ಎಂಬ ಪದಗಳನ್ನು ಕಡತದಿಂದ ತೆಗೆಯುವುದಾಗಿ ಹೇಳಿ ಕಲಾಪ ಸುಗಮವಾಗಿ ನಡೆಸಲು ಸಹಕರಿಸುವಂತೆ ಕೋರಿದರು. ಇದರಿಂದ ವಿವಾದ ತಣ್ಣಗಾಯಿತು.

ನಿಮ್ಮಿಂದಲೇ ಅಪರಾಧ ಪ್ರಕರಣ ಹೆಚ್ಚಳ- ಸಿಎಂ:

ಮೊದಲಿಗೆ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂಬ ರಾಜ್ಯಪಾಲರ ಮಾತು ಸರಿಯಿದೆ. ಕಳೆದ ಸರ್ಕಾರದ ಅವಧಿಗಿಂತ ಕೊಲೆ, ಕೊಲೆ ಯತ್ನ, ದರೋಡೆ, ಕಳ್ಳತನ, ಅತ್ಯಾಚಾರ ಎಲ್ಲಾ ಪ್ರಕರಣಗಳೂ ನಮ್ಮ ಸರ್ಕಾರದ ಅವಧಿಯಲ್ಲಿ ಕಡಿಮೆಯಾಗಿವೆ ಎಂದು 2022 ಹಾಗೂ 2024 ನೇ ಸಾಲಿನ ಅಪರಾಧ ಪ್ರಕರಣಗಳನ್ನು ಅಂಕಿ-ಅಂಶಗಳ ಸಹಿತ ಬಿಚ್ಚಿಟ್ಟರು.

ಅಲ್ಲದೆ ಮಂಗಳೂರಿನಲ್ಲಿ 75 ಕೋಟಿ ರು. ಡ್ರಗ್ಸ್‌ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದೇವೆ. ನೀವೇ ನಮ್ಮ ಪೊಲೀಸರಿಗೆ ಅಭಿನಂದನೆ ಹೇಳಿದ್ದೀರಿ. ನಾವು ಅಧಿಕಾರಕ್ಕೆ ಬಂದ ಮೇಲೆ ಅಪರಾಧಗಳನ್ನು ಎಷ್ಟು ತಗ್ಗಿಸಲು ಸಾಧ್ಯವೋ ಅಷ್ಟು ಮಾಡಿದ್ದೇವೆ. ಹಾಗಂತ ನಮಗಿನ್ನೂ ತೃಪ್ತಿಯಾಗಿಲ್ಲ. ಇನ್ನೂ ಇಳಿಕೆ ಮಾಡುವ ಉದ್ದೇಶವಿದೆ. ಆದರೆ ಅಪರಾಧಗಳನ್ನು ಮಾಡುವುದೇ ನೀವು. ನಿಮ್ಮ ಆರ್‌ಎಸ್‌ಎಸ್‌ನವರಿಂದಲೇ ಅಪರಾಧಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು.

ವಾಪಸ್‌ ಪಡೆಯಿರಿ:

ಇದಕ್ಕೆ ಬಿಜೆಪಿ ಸದಸ್ಯರು, ‘ನೀವು ಗಡಿ ದಾಟಿ ಮಾತನಾಡುತ್ತಿದ್ದೀರಿ. ನಿಮಗೆ ಮೆಮೋರಿ ಲಾಸ್‌ ಆದಂತಿದೆ. ಇದು ಸರಿಯಲ್ಲ ಹೇಳಿಕೆ ಹಿಂಪಡೆಯಿರಿ’ ಎಂದು ಒತ್ತಾಯಿಸಿದರು.ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಅವರು, ‘ನಾನೂ ಕೂಡ ಆರ್‌ಎಸ್‌ಎಸ್‌ನವನೇ. ಆರ್‌ಎಸ್‌ಎಸ್‌ ದೇಶ ಕಟ್ಟಿದರೆ ನೀವು ದೇಶ ಒಡೆದಿದ್ದೀರಿ. ನಿನ್ನೆ ಮೊನ್ನೆ ಬಂದವರೆಲ್ಲಾ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಿದರೆ ಹೇಗೆ?’ ಎಂದರು.

ತಿರುಗೇಟು ನೀಡಿದ ಸಿದ್ದರಾಮಯ್ಯ, ಹೇ ಅಶೋಕ ನೀನು ಎಲ್ಲಿ ಆರ್‌ಎಸ್‌ಎಸ್‌ಗೆ ಹೋಗಿದ್ದೀಯ. ಕಬಡ್ಡಿ ಆಡಿಕೊಂಡು ಇದ್ದೆ. ನೀನು ಯಾವ ಆರ್‌ಎಸ್‌ಎಸ್‌ ಸಭೆಗೂ ಹೋಗಿಲ್ಲ ಕುಳಿತ್ಕೊ. ನಾನು ನಿನ್ನೆ ಮೊನ್ನೆ ಬಂದವನಲ್ಲ ನಿನಗಿಂತ ಮೊದಲೇ ವಿಧಾನಸಭೆಗೆ ಬಂದವನು. ನಿಮಗೆ ಎದ್ದು ನಿಂತು ಗಲಾಟೆ ಮಾಡಲು ಹೇಳಿಕೊಟ್ಟಿದ್ದು ಯಾರು ಎಂಬುದು ಕೂಡ ಗೊತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.ನೀವೆಲ್ಲಾ ಆರ್‌ಎಸ್‌ಎಸ್‌ ಶಾಸಕರು ದ್ವೇಷ ರಾಜಕಾರಣ, ಹಿಂಸಾ ರಾಜಕಾರಣ, ಅಸೂಯೆ ಮಾಡಿಕೊಂಡು ಬಂದವರು. ಆರ್‌ಎಸ್ಎಸ್‌ನವರು ನಮ್ಮ ವೈರಿಗಳು. ಈ ಹೇಳಿಕೆಗೆ ನಾನು ಬದ್ಧವಾಗಿದ್ದೇನೆ. ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರೇ ಆರ್‌ಎಸ್‌ಎಸ್‌ ಅನ್ನು ನಿಷೇಧಿಸಿದ್ದರು ಎಂದು ಹೇಳಿದರು.ನಿಮ್ಮ ಮಕ್ಕಳು ಆರ್‌ಎಸ್‌ಎಸ್‌ಗೆ ಹೋಗುತ್ತಾರಾ?- ಪ್ರಿಯಾಂಕ್‌:

ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಈ ಶಾಸಕರ ಮಕ್ಕಳು ಆರ್‌ಎಸ್‌ಎಸ್‌ಗೆ ಹೋಗುತ್ತಾರಾ? ಇವರ ಮಕ್ಕಳೆಲ್ಲಾ ಉದ್ಯೋಗ, ಉದ್ಯಮಗಳಿಗಾಗಿ ವಿದೇಶಕ್ಕೆ ಹೋಗಬೇಕು. ದಲಿತರು, ಓಬಿಸಿಗಳು ಮಾತ್ರ ಆರ್‌ಎಸ್‌ಎಸ್‌ಗೆ ಸೇರಬೇಕು. ಇವರ ಎಷ್ಟು ಜನ ಮಕ್ಕಳು ಸಗಣಿ ತಿನ್ನುತ್ತಾರೆ? ಗೋಮೂತ್ರ ಕುಡಿಯುತ್ತಾರೆ. ನಾನು ಸತ್ತರೂ ನಮ್ಮ ಮಕ್ಕಳನ್ನು ಆರ್‌ಎಸ್‌ಎಸ್‌ಗೆ ಕಳುಹಿಸುವುದಿಲ್ಲ. ನಾರಾಯಣ ಗುರುಗಳ ಆದರ್ಶಗಳನ್ನು ಹೇಳಕೊಡುತ್ತೇವೆ ಎಂದರು.

ಬಿಜೆಪಿ ಸದಸ್ಯ ಸುನಿಲ್‌ಕುಮಾರ್‌, ಇವರ ಮಕ್ಕಳು ಯಾವ ದಲಿತ ಕೇರಿಯಲ್ಲಿದ್ದಾರೆ ಉತ್ತರಿಸಲಿ. ಇವರು ಸದಾಶಿವನಗರದಲ್ಲಿದ್ದಾರಾ ಅಥವಾ ದಲಿತರ ಕೇರಿಯಲ್ಲಿದ್ದಾರಾ? ಹೇಳಲಿ ಎಂದು ಪ್ರಶ್ನಿಸಿದರು.

ಇದಕ್ಕೆ ಸಿದ್ದರಾಮಯ್ಯ, ಹಾಗಾದರೆ ದಲಿತರ ಕೇರಿಯಲ್ಲಿರುವವರು ದಲಿತ ಕೇರಿಯಲ್ಲೇ ಇರಬೇಕಾ? ಅವರು ಮುಖ್ಯವಾಹಿನಿಗೆ ಬರಬಾರದಾ? ಖರ್ಗೆ ಅವರು ದಲಿತ ಕೇರಿಯಲ್ಲೇ ಇರಬೇಕಾ? ಅವರು ಸದಾಶಿವನಗರದ ಮನೆಯಲ್ಲಿ ಇದ್ದರೆ ನಿಮಗೇನು ಸಮಸ್ಯೆ? ಎಂದು ಟೀಕಿಸಿದರು.

--ಸಿಎಂ ಹೇಳಿಕೆ ಸಂವಿಧಾನಬಾಹಿರವಲ್ಲ: ಸ್ಪೀಕರ್‌ ಸ್ಥಾನದಲ್ಲಿದ್ದ ಶಿವಲಿಂಗೇಗೌಡ

ಇದಕ್ಕೂ ಮೊದಲು ಸ್ಪೀಕರ್‌ ಸ್ಥಾನದಲ್ಲಿ ಕುಳಿತಿದ್ದ ಶಿವಲಿಂಗೇಗೌಡ, ಮುಖ್ಯಮಂತ್ರಿ ಅವರು ಆರ್‌ಎಸ್‌ಎಸ್‌ ಬಗ್ಗೆ ಬಳಸಿರುವ ಪದ ಸಂವಿಧಾನಬಾಹಿರ ಪದ ಅಲ್ಲ. ಅವರ ವೈಯಕ್ತಿಕ ಅಭಿಪ್ರಾಯವನ್ನು ಹೇಳಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ಆರ್‌ಎಸ್‌ಎಸ್‌ ಕುರಿತ ಹೇಳಿಕೆ ಕಡತದಿಂದ ತೆಗೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಮತ್ತೊಂದೆಡೆ ಪಾಕಿಸ್ತಾನದ ಕುರಿತ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿ, ಇನ್ನೊಂದು ದೇಶಕ್ಕೆ ಅವಮರ್ಯಾದೆ ಮಾಡುವುದು ಈ ಸದನದ ಉದ್ದೇಶವಲ್ಲ ಎಂದು ಹೇಳಿದರು. ಗಲಾಟೆ ತೀವ್ರವಾದ ಹಿನ್ನೆಲೆ ಬಳಿಕ ಸ್ಪೀಕರ್‌ ಸ್ಥಾನಕ್ಕೆ ಬಂದ ಯು.ಟಿ. ಖಾದರ್‌ ಆಕ್ಷೇಪ ವ್ಯಕ್ತವಾದ ಪದಗಳನ್ನು ಕಡತದಿಂದ ತೆಗೆಸಿದರು.

ಆರೆಸ್ಸೆಸ್ಸಿಂದ ಅಪರಾಧ

ರಾಜ್ಯದಲ್ಲಿ ನಾವು ಅಪರಾಧಗಳನ್ನು ಎಷ್ಟು ತಗ್ಗಿಸಲು ಸಾಧ್ಯವೋ ಅಷ್ಟು ಮಾಡಿದ್ದೇವೆ. ಇದು ತೃಪ್ತಿ ತಂದಿಲ್ಲ. ಇನ್ನೂ ಇಳಿಕೆ ಮಾಡುವ ಉದ್ದೇಶವಿದೆ. ನಿಮ್ಮ ಆರ್‌ಎಸ್‌ಎಸ್‌ನವರಿಂದಲೇ ಅಪರಾಧಗಳು ಹೆಚ್ಚಾಗುತ್ತಿವೆ.

- ಸಿದ್ದರಾಮಯ್ಯ, ಸಿಎಂ

ನೀವು ದೇಶ ವಿಭಜಕರು

ನಾನೂ ಕೂಡ ಆರ್‌ಎಸ್‌ಎಸ್‌ನವನೇ. ಆರ್‌ಎಸ್‌ಎಸ್‌ ದೇಶ ಕಟ್ಟಿದರೆ ನೀವು ದೇಶ ಒಡೆದಿದ್ದೀರಿ. ನಿನ್ನೆ ಮೊನ್ನೆ ಬಂದವರೆಲ್ಲಾ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಿದರೆ ಹೇಗೆ? ನಿಮ್ಮ ಹೇಳಿಕೆ ಹಿಂಪಡೆಯಿರಿ.

- ಆರ್‌, ಅಶೋಕ್‌, ಪ್ರತಿಪಕ್ಷ ನಾಯಕ