ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ವಸತಿ ಮತ್ತು ವಕ್ಫ್ ಖಾತೆ ಸಚಿವ ಜಮೀರ್ ಅಹಮ್ಮದ್ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ರಾಜ್ಯ ಒಕ್ಕಲಿಗರ ಮಹಾಸಭಾ ಆಗ್ರಹಿಸಿದೆ.ರಾಜಕೀಯ ಟೀಕೆ ಟಿಪ್ಪಣಿಗಳು ಏನೇ ಇದ್ದರೂ ಕರ್ನಾಟಕ ಈಗಲೂ ದೇಶಕ್ಕೆ ಮಾದರಿಯಾದ ರಾಜ್ಯವಾಗಿದೆ. ಶಾಂತಿ, ಸೌಹಾರ್ದತೆ, ಸಹಬಾಳ್ವೆಗೆ ಹೆಸರುವಾಸಿಯಾಗಿರುವ ಕರುನಾಡಿನಲ್ಲಿ ಜನಾಂಗೀಯ ನಿಂದನೆ ಮಾಡಿರುವ ಜಮೀರ್ ಅಂಥವರನ್ನು ಸಂಪುಟದಲ್ಲಿ ಮುಂದುವರೆಸಿದರೆ ಅದು ಯಾವುದೇ ಸರ್ಕಾರಕ್ಕೆ ಇಲ್ಲವೇ ರಾಜಕೀಯ ಪಕ್ಷಕ್ಕೆ ಶೋಭೆ ತರುವುದಿಲ್ಲ ಎಂದು ಬಿಜೆಪಿ ಮುಖಂಡರೂ ಆಗಿರುವ ಮಹಾಸಭಾದ ಅಧ್ಯಕ್ಷ ಎ.ಎಚ್.ಆನಂದ್ ತೀವ್ರವಾಗಿ ಖಂಡಿಸಿದ್ದಾರೆ.ಜಮೀರ್ ಅವರ ಹೇಳಿಕೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟು ಒಂದು ಸಮುದಾಯದ ಜನರನ್ನು ಪ್ರಚೋದಿಸುವ ಹೇಳಿಕೆಯಾಗಿದೆ. ಅವರ ಬಾಯಲ್ಲಿ ಬಂದಿರುವ ಈ ದ್ವೇಷದ ಮಾತುಗಳು ಅಕ್ಷಮ್ಯ ಅಪರಾಧವಾಗಿದೆ. ಯಾವ ಕಾರಣಕ್ಕಾಗಿ ಇನ್ನು ಸಂಪುಟದಲ್ಲಿ ಮುಂದುವರೆಸಿದ್ದಾರೆಂದು ಅವರು ಪ್ರಶ್ನಿಸಿದ್ದಾರೆ.ರಾಜಕೀಯ ವ್ಯತ್ಯಾಸಗಳು ಏನೇ ಇದ್ದರೂ ಈಗಲೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಒಕ್ಕಲಿಗ ಸಮುದಾಯದ ನಾಯಕರು. ಅಂಥವರ ಬಗ್ಗೆ ಇಷ್ಟು ಲಘುವಾಗಿ ಮಾತನಾಡಿರುವ ಜಮೀರ್ ಸಾರ್ವಜನಿಕ ಜೀವನದಲ್ಲಿರಲು ಅನರ್ಹರು. ಜಮೀರ್ ಇದೇ ರೀತಿ ನಾಲಿಗೆ ಹರಿಬಿಟ್ಟರೆ ಸ್ವಾಭಿಮಾನಿ ಒಕ್ಕಲಿಗರು ಬೀದಿಗಿಳಿಯಬೇಕಾಗುತ್ತದೆ ಎಂದು ಆನಂದ್ ಅವರು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.