ಸಂಡೂರು ಸಮೀಕ್ಷೆ : ಕಾಂಗ್ರೆಸ್ ಭದ್ರ ಕೋಟೆ ಉಳಿಯುತ್ತಾ, ಬಿಜೆಪಿ ಬಾವುಟ ಹಾರುತ್ತಾ?

| Published : Nov 09 2024, 06:18 AM IST / Updated: Nov 09 2024, 06:19 AM IST

Congress BJP Flags

ಸಾರಾಂಶ

ಲಗಾಯ್ತಿನಿಂದಲೂ ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಗಣಿನಾಡು ಸಂಡೂರಲ್ಲಿ ಉಪ ಚುನಾವಣಾ ಕಣ ರಂಗೇರಿದೆ. ಬಿರುಸಿನ ಪ್ರಚಾರದ ಭರಾಟೆಯಿಂದಾಗಿ ಈ ಕ್ಷೇತ್ರ ದಿನೇ ದಿನೇ ಜಿದ್ದಾಜಿದ್ದಿಯ ಅಖಾಡವಾಗಿ ಬದಲಾಗುತ್ತಿದೆ.

ಮಂಜುನಾಥ ಕೆ.ಎಂ.

 ಬಳ್ಳಾರಿ : ಲಗಾಯ್ತಿನಿಂದಲೂ ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಗಣಿನಾಡು ಸಂಡೂರಲ್ಲಿ ಉಪ ಚುನಾವಣಾ ಕಣ ರಂಗೇರಿದೆ. ಬಿರುಸಿನ ಪ್ರಚಾರದ ಭರಾಟೆಯಿಂದಾಗಿ ಈ ಕ್ಷೇತ್ರ ದಿನೇ ದಿನೇ ಜಿದ್ದಾಜಿದ್ದಿಯ ಅಖಾಡವಾಗಿ ಬದಲಾಗುತ್ತಿದೆ.

ಸಂಡೂರು ವಿಧಾನಸಭಾ ಎಸ್ಟಿ ಮೀಸಲು ಕ್ಷೇತ್ರದಿಂದ ಈ ಬಾರಿ ಹಾಲಿ ಸಂಸದ ಈ.ತುಕಾರಾಂ ಪತ್ನಿ ಅನ್ನಪೂರ್ಣಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡದಲ್ಲಿದ್ದರೆ, 2018ರ ಚುನಾವಣೆಯಲ್ಲಿ ಬಿಜೆಪಿ ಬಂಡಾಯವಾಗಿ ಕಣಕ್ಕಿಳಿದು ಕೇವಲ 7,191 ಮತಗಳನ್ನಷ್ಟೇ ಪಡೆದಿದ್ದ ಬಂಗಾರು ಹನುಮಂತು ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಾ ಅವರು ಪತಿ ಈ.ತುಕಾರಾಂ ಅವರ ಪರ ಈ ಹಿಂದೆ ಪ್ರಚಾರದಲ್ಲಿ ಭಾಗಿಯಾಗಿದ್ದು ಬಿಟ್ಟರೆ ಚುನಾವಣಾ ಅಖಾಡ ಅವರ ಪಾಲಿಗೆ ಹೊಸದು. ಇನ್ನು ಬಿಜೆಪಿ ಅಭ್ಯರ್ಥಿ ಒಮ್ಮೆ ಪಕ್ಷೇತರರಾಗಿ ಚುನಾವಣೆ ಎದುರಿಸಿ ಸೋಲುಂಡಿದ್ದಾರೆ.

ಅಸಮಾಧಾನದ ಹೊಗೆ ಇತ್ತು: ಕಾಂಗ್ರೆಸ್‌ನಲ್ಲಿ ಹತ್ತಾರು ಹೆಸರು ಕೇಳಿಬಂದಿತ್ತಾದರೂ ಕೊನೆಗೆ ಹಾಲಿ ಸಂಸದ ತುಕಾರಾಂ ಅವರ ಪತ್ನಿ ಅನ್ನಪೂರ್ಣಾ ಅವರ ಹೆಸರು ಘೋಷಣೆಯಾಗುತ್ತಿದ್ದಂತೆ ಪಕ್ಷದಲ್ಲಿ ಒಂದಷ್ಟು ಬಂಡಾಯದ ಸುಳಿವು ಇತ್ತು. ತುಕಾರಾಂ ಈಗಾಗಲೇ 4 ಬಾರಿ ಕ್ಷೇತ್ರದ ಶಾಸಕರಾಗಿ ಅಧಿಕಾರ ಉಂಡಿದ್ದಾರೆ. ಕಳೆದ ವರ್ಷ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೂ ಸ್ಪರ್ಧಿಸಿ ಗೆದ್ದಿದ್ದಾರೆ. ಅವರಿಂದ ತೆರವಾಗಿದ್ದ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಇದೀಗ ಮತ್ತೆ ಪತ್ನಿಗೆ ಟಿಕೆಟ್ ಕೊಟ್ಟಿರುವುದು ಎಷ್ಟು ಸರಿ? ಎಂಬ ಕೂಗು ಆರಂಭದಲ್ಲಿ ಬಲವಾಗಿಯೇ ಕೇಳಿ ಬಂದಿತ್ತು. ಆದರೆ ಸಚಿವ ಸಂತೋಷ್‌ ಲಾಡ್ ಆ ಬಂಡಾಯ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಮೊದಲು ಸಾರ್ವಜನಿಕ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದ್ದ ಕುಟುಂಬ ರಾಜಕಾರಣದ ಚರ್ಚೆ ಈಗ ಮೂಲೆಸೇರಿದೆ.

ಇನ್ನು ಕಮಲ ಪಕ್ಷದಲ್ಲೂ ಟಿಕೆಟ್‌ ವಿಚಾರದಲ್ಲಿ ಅಸಮಾಧಾನದ ಹೊಗೆ ಹರಡಿತ್ತು. ಕಳೆದ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಸ್ಥಾಪಿತ ಕೆಆರ್‌ಪಿಪಿಯಿಂದ ಸಂಡೂರಲ್ಲಿ ಕೆ.ಎಸ್.ದಿವಾಕರ್ 31,299 ಮತಗಳನ್ನು ಪಡೆದು ಗಮನ ಸೆಳೆದಿದ್ದರು. ಜನಾರ್ದನ ರೆಡ್ಡಿ ಬಿಜೆಪಿ ಗೂಡಿಗೆ ಮರಳಿ ಬಂದಿದ್ದರಿಂದ ಈ ಬಾರಿ ಟಿಕೆಟ್‌ ಕೆ.ಎಸ್.ದಿವಾಕರ್‌ಗೇ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಕೊನೇ ಗಳಿಗೆಯಲ್ಲಿ ಬಂಗಾರು ಹನುಮಂತು ಅವರಿಗೆ ಟಿಕೆಟ್ ನೀಡಲಾಯಿತು. ಇದರಿಂದ ಕುಪಿತಗೊಂಡ ದಿವಾಕರ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಘೋಷಿಸಿದ್ದರು. ಕೊನೆಗೆ ಚುನಾವಣೆ ಸಾರಥ್ಯ ವಹಿಸಿರುವ ಜನಾರ್ದನ ರೆಡ್ಡಿ ಅವರೇ ಶಿಷ್ಯನನ್ನು ಸಮಾಧಾನಪಡಿಸಿ ಪ್ರಚಾರ ಕಾರ್ಯದಲ್ಲಿ ತೊಡಗುವಂತೆ ಮಾಡಿದ್ದಾರೆ.

ಅಹಂದ ಮತಗಳೇ ಸವಾಲು: ಸಂಡೂರು ಕ್ಷೇತ್ರ ಗೆಲ್ಲಲೇಬೇಕು ಎಂದು ಹಠತೊಟ್ಟಿರುವ ಬಿಜೆಪಿಗೆ ಅಹಿಂದ ಮತಗಳನ್ನು ಒಗ್ಗೂಡಿಸುವುದೇ ದೊಡ್ಡ ಸವಾಲು. ಕಾಂಗ್ರೆಸ್‌ ಪಕ್ಷಕ್ಕಿರುವ ಸಾಂಪ್ರದಾಯಿಕ ವೋಟ್‌ ಬ್ಯಾಂಕ್ ಮೇಲೆ ದೃಷ್ಟಿ ನೆಟ್ಟಿರುವ ಬಿಜೆಪಿ ನಾಯಕರು, ನಿರ್ಣಾಯಕ ಮತಗಳಾದ ದಲಿತ, ಮುಸ್ಲಿಂ, ಕುರುಬ, ಇತರೆ ಹಿಂದುಳಿದ ಸಮಾಜದವರ ಮನವೊಲಿಕೆಗೆ ನಾನಾ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ.

2 ಬಾರಿಯಷ್ಟೇ ಕೈಗೆ ಸೋಲು: ಕ್ಷೇತ್ರದ ಇತಿಹಾಸದಲ್ಲಾದ 17 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿದ್ದು ಎರಡೇ ಬಾರಿ. 15 ಬಾರಿ ಗೆದ್ದು ಬೀಗಿರುವ ಕಾಂಗ್ರೆಸ್‌ ಈ ಉಪ ಚುನಾವಣೆಯಲ್ಲೂ ಗೆಲ್ಲುವ ವಿಶ್ವಾಸದಲ್ಲಿದೆ. ಬಿಜೆಪಿ ನಾಯಕರು ಅದೇನೇ ಚುನಾವಣೆ ತಂತ್ರ ರೂಪಿಸಿದರೂ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಿಂದಾಗಿ ನಮ್ಮ ಮತದಾರ ಪ್ರಭು ಕೈಬಿಡಲ್ಲ ಎಂಬ ವಿಶ್ವಾಸ ಕಾಂಗ್ರೆಸಿಗರದ್ದು.

ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಗೊಂಡು ಬಳಿಕ ಸಂಸದರಾಗಿಯೂ ಚುನಾಯಿತಗೊಂಡಿರುವ ಈ.ತುಕಾರಾಂ ಕ್ಷೇತ್ರದ ನಾಡಿಮಿಡಿತವನ್ನು ಚೆನ್ನಾಗಿ ಬಲ್ಲವರು. ಕ್ಷೇತ್ರದಲ್ಲಿ ಬಿಗಿಹಿಡಿತ ಹೊಂದಿರುವ ಸಚಿವ ಸಂತೋಷ್‌ ಲಾಡ್ ಅವರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಲಿದೆ ಎಂಬ ಲೆಕ್ಕಾಚಾರ ಪಕ್ಷದ ಕಾರ್ಯಕರ್ತರಲ್ಲಿದೆ.

ತುಕಾರಾಂ ಸತತ ನಾಲ್ಕು ಬಾರಿ ಶಾಸಕರಾಗಿದ್ದರೂ ಕ್ಷೇತ್ರ ಅಭಿವೃದ್ಧಿ ಕಂಡಿಲ್ಲ. ಸಂಡೂರಿನ ಬಸ್ ನಿಲ್ದಾಣ ನೋಡಿದರೆ ಸಾಕು. ಈ ಊರು ಎಷ್ಟರ ಮಟ್ಟಿಗೆ ಉದ್ಧಾರವಾಗಿದೆ ಎಂಬುದು ಗೊತ್ತಾಗುತ್ತದೆ. ಡಿಎಂಎಫ್‌, ಸಿಎಸ್ಸಾರ್, ಕೆಎಂಆರ್‌ಇಸಿ ಅನುದಾನ ಸಮರ್ಪಕವಾಗಿ ಬಳಕೆ ಮಾಡುವಲ್ಲಿ ತುಕಾರಾಂ ವಿಫಲರಾಗಿದ್ದಾರೆ. ಗಣಿಗಾರಿಕೆಯಿಂದ ಹೆಚ್ಚಿನ ತೆರಿಗೆ ಸರ್ಕಾರಕ್ಕೆ ಸಂದಾಯವಾದರೂ ಇಲ್ಲಿನ ಕಾರ್ಮಿಕರ ಬದುಕು ಬದಲಾಗಿಲ್ಲ ಎಂದು ಆರೋಪಿಸುತ್ತಿರುವ ಬಿಜೆಪಿ, ತುಕಾರಾಂ ವಿರೋಧಿ ಮತಗಳು ಈ ಬಾರಿ ಕಮಲ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಿವೆ ಎಂಬ ವಿಶ್ವಾಸದಲ್ಲಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ವಾಪಸ್‌ ಬಿಜೆಪಿ ಬಂದಿರುವುದು ಬಿಜೆಪಿ ಪಾಲಿಗೆ ಪ್ಲಸ್‌.

ಹೆಚ್ಚಿದ ಪ್ರಚಾರದ ಕಾವು: ಈಗಾಗಲೇ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರದ ಕಾವು ಜೋರಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಘಟಾನುಘಟಿ ನಾಯಕರು ಈಗಾಗಲೇ ಮತದಾರರ ಮನವೊಲಿಕೆಗೆ ಮುಂದಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಾದಿಯಾಗಿ ಸಚಿವರು, ಶಾಸಕರು ಕಾಂಗ್ರೆಸ್‌ ಪರ ಪ್ರಚಾರ ಕಾರ್ಯ ನಡೆಸಿದ್ದಾರೆ. ಕಾಂಗ್ರೆಸ್‌ನ ಅನೇಕ ನಾಯಕರು ಸಂಡೂರಿನಲ್ಲಿಯೇ ವಾಸ್ತವ್ಯ ಹೂಡಿದ್ದು, ಮನೆಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಸಚಿವರಿಗೆ ಜಿಪಂ ಕ್ಷೇತ್ರವಾರು, ಶಾಸಕರಿಗೆ ಹೋಬಳಿ, ಗ್ರಾಪಂವಾರು ಜವಾಬ್ದಾರಿ ನೀಡಲಾಗಿದೆ. ಇದೇ ವೇಳೆ ಜಾತಿವಾರು ಸಮೀಕರಣ ಕಾರ್ಯವೂ ನಡೆದಿದೆ. ಆಯಾ ಜಾತಿ ನಾಯಕರನ್ನು ಪ್ರಚಾರಕ್ಕೆ ಬಳಸಿಕೊಂಡು ಮತಗಳ ಕ್ರೋಢೀಕರಿಸುವ ತಂತ್ರ ನಡೆದಿದೆ.

ಈ ವಿಚಾರದಲ್ಲಿ ಬಿಜೆಪಿಯೂ ಹಿಂದೆ ಬಿದ್ದಿಲ್ಲ. ಕಾಂಗ್ರೆಸ್‌ ಪಡೆಯ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಿರುವ ಕಮಲ ಪಾಳಯವೂ ಭರ್ಜರಿ ಮತಬೇಟೆ ನಡೆಸುತ್ತಿದೆ. ವೀರಶೈವ ಲಿಂಗಾಯತ, ವಾಲ್ಮೀಕಿ, ಬ್ರಾಹ್ಮಣ, ವೈಶ್ಯ, ಜೈನ ಸಮುದಾಯದ ಮತಗಳ ಮೇಲೆ ಕಣ್ಣಟ್ಟಿರುವ ಬಿಜೆಪಿ, ಕಾಂಗ್ರೆಸ್‌ನ ಸಂಪ್ರದಾಯಿಕ ಮತಗಳನ್ನೂ ಸೆಳೆಯಲು ಕಸರತ್ತು ಶುರು ಮಾಡಿದೆ. ಮಹಿಳಾ ಮತಗಳನ್ನು ಸೆಳೆಯಲು ಎರಡೂ ಪಕ್ಷಗಳು ಪ್ರತ್ಯೇಕ ಮಹಿಳಾ ತಂಡಗಳನ್ನು ರಚಿಸಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿವೆ.

ಅಖಾಡದಲ್ಲಿ 6 ಅಭ್ಯರ್ಥಿಗಳು

ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅನ್ನಪೂರ್ಣಾ, ಬಿಜೆಪಿಯ ಬಂಗಾರು ಹನುಮಂತು ಸೇರಿ ಒಟ್ಟು 6 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕರ್ನಾಟಕ ಜನತಾ ಪಕ್ಷದ ಎನ್.ಅಂಜಿನಪ್ಪ, ಪಕ್ಷೇತರರಾದ ಟಿ.ಎಂ.ಮಾರುತಿ, ಟಿ.ಎರ್ರಿಸ್ವಾಮಿ ಹಾಗೂ ಎನ್.ವೆಂಕಣ್ಣ ಇತರೆ ಅಭ್ಯರ್ಥಿಗಳು.

---

ಮತದಾರರ ವಿವರ

ಪುರುಷರು: 1,17,739

ಮಹಿಳೆಯರು: 1,18,279

ತೃತೀಯ ಲಿಂಗಿ: 29

ಒಟ್ಟು: 2,36,047

---

ಜಾತಿವಾರು ಮತಗಳ ಅಂದಾಜು

ಪರಿಶಿಷ್ಟ ಜಾತಿ- 63,220

ಪರಿಶಿಷ್ಟ ಪಂಗಡ- 46,350

ಕುರುಬರು- 27,550

ಮುಸ್ಲಿಂ- 23,680

ಲಿಂಗಾಯತ- 30,600

ಹಿಂ.ವರ್ಗ 29,000

ಇತರೆ- 15,647

2023ರ ಚುನಾವಣೆ ಫಲಿತಾಂಶ

ಈ.ತುಕಾರಾಂ (ಕಾಂಗ್ರೆಸ್) ಪಡೆದ ಮತಗಳು: 85,223

ಶಿಲ್ಪಾ ರಾಘವೇಂದ್ರ (ಬಿಜೆಪಿ) ಪಡೆದ ಮತಗಳು: 49,701

ಕೆ.ಎಸ್. ದಿವಾಕರ (ಕೆಆರ್‌ಪಿಪಿ) ಪಡೆದ ಮತಗಳು: 31,375

ಸಂಡೂರಿನ ಮತದಾರರು ಈ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಕೈ ಹಿಡಿದು ನಡೆಸಿದ್ದಾರೆ. ಈ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಅತ್ಯಧಿಕ ಮತಗಳನ್ನು ನೀಡಿ ಆಶೀರ್ವದಿಸಲಿದ್ದಾರೆ ಎಂಬ ಪೂರ್ಣ ವಿಶ್ವಾಸವಿದೆ.

- ಅನ್ನಪೂರ್ಣಾ, ಕಾಂಗ್ರೆಸ್ ಅಭ್ಯರ್ಥಿ, ಸಂಡೂರು ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ ಆಡಳಿತದಿಂದ ರೋಸಿ ಹೋಗಿರುವ ಸಂಡೂರಿನ ಮತದಾರರು ಈ ಬಾರಿ ಆ ಪಕ್ಷವನ್ನು ತಿರಸ್ಕರಿಸಲಿದ್ದಾರೆ. ಬಿಜೆಪಿ ಈ ಬಾರಿ ಭಾರೀ ಬಹುಮತದ ಗೆಲುವಿನೊಂದಿಗೆ ಐತಿಹಾಸಿಕ ಸಾಧನೆ ಮಾಡುತ್ತದೆ.

- ಬಂಗಾರು ಹನುಮಂತು, ಬಿಜೆಪಿ ಅಭ್ಯರ್ಥಿ, ಸಂಡೂರು ವಿಧಾನಸಭಾ ಕ್ಷೇತ್ರ