ಸಾರಾಂಶ
ನನಗೂ ಆಸೆ ಇದೆ. ಆದರೆ, ಸದ್ಯ ಸಿಎಂ ಸ್ಥಾನದ ರೇಸ್‌ನಲ್ಲಿ ನಾನಿಲ್ಲ. ನಾನು ಸಿಎಂ ಆಗುವ ವಿಚಾರ ಮುಂದೆ ನೋಡೋಣ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಎಲ್ಲರಿಗೂ ಸಿಎಂ ಆಗುವ ಆಸೆ ಇದ್ದೇ ಇರುತ್ತದೆ. ಹಾಗೆಯೇ ನನಗೂ ಆಸೆ ಇದೆ. ಆದರೆ, ಸದ್ಯ ಸಿಎಂ ಸ್ಥಾನದ ರೇಸ್‌ನಲ್ಲಿ ನಾನಿಲ್ಲ. ನಾನು ಸಿಎಂ ಆಗುವ ವಿಚಾರ ಮುಂದೆ ನೋಡೋಣ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.ಸುವರ್ಣ ವಿಧಾನಸೌಧದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಈಗ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ನಮ್ಮ ಪಕ್ಷದವರು ಹೇಳಿದ್ದಾರೆ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ನಾನಂತೂ ಈಗಾಗಲೇ ಸಿದ್ದರಾಮಯ್ಯನವರಿಗೆ ಬೆಂಬಲ ನೀಡಿದ್ದೇನೆ. ನಾನು ಸಿಎಂ ಆಗುವ ಸಂಬಂಧ ಅಗತ್ಯ ತಯಾರಿ ಮಾಡುತ್ತಿದ್ದೇನೆ. ಆದರೆ, ಅದು ಈಗಲ್ಲ. ಸದ್ಯ ನಾನು ಸಿಎಂ ಸ್ಥಾನದ ರೇಸ್‌ನಲ್ಲಿ ಇಲ್ಲ. ನಾನು ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೂ ಅಲ್ಲ ಎಂದರು.
ಈಗಾಗಲೇ ನಮ್ಮ ಪಕ್ಷದ ಅನೇಕರು ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ನಮ್ಮಲ್ಲಿ ಸೀನಿಯರ್, ಜೂನಿಯರ್ ಎಂಬ ಪ್ರಶ್ನೆಯೇನಿಲ್ಲ. ಇದರಲ್ಲಿ ಗುದ್ದಾಟ, ಕುಸ್ತಿ ಮಾಡುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಅಂತಹ ಯಾವುದೇ ಸನ್ನಿವೇಶ ಇಲ್ಲವೇ ಇಲ್ಲ ಎಂದು ಹೇಳಿದರು.