ಕೋಲಾರ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಇನ್ನೂ ಕಗ್ಗಂಟು

| Published : Mar 30 2024, 12:52 AM IST / Updated: Mar 30 2024, 09:06 AM IST

ಸಾರಾಂಶ

ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ಪ್ರತಿಷ್ಠೆಯಿಂದ ಪರಿಶಿಷ್ಟ ಜಾತಿಗಳ ಒಳಗೆ ಎಡ-ಬಲಗಳ ಗುಂಪುಗಾರಿಕೆಗೆ ಮತ್ತಷ್ಟು ಪುಷ್ಠಿ ಸಿಕ್ಕಿ ದಲಿತ ಒಳಪಂಗಡಗಳ ಒಡಕಿಗೆ ನಾಂದಿ ಹಾಡಿದಂತಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರ

ಲೋಕಸಭಾ ಚುನಾವಣೆಗೆ ಆಕಾಂಕ್ಷಿ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸುತ್ತಿದ್ದಾರೆ. ಇನ್ನೇನು ನಾಲ್ಕೈದು ದಿನಗಳಲ್ಲಿ ನಾಮಪತ್ರ ಸಲ್ಲಿಕೆ ಕಾರ್ಯಪ್ರಾರಂಭವಾಗಿದ್ದರೂ ಸಹ ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. 

ಮೊನ್ನೆಯಷ್ಟೇ ಕಾಂಗ್ರೆಸ್ ಪಕ್ಷದ ಎರಡು ಗುಂಪುಗಳ ಭಿನ್ನಮತ ಜಗಜ್ಜಾಹೀರಾಗಿ, ಟಿಕೆಟ್‌ಗಾಗಿ ಕಿತ್ತಾಟ ನಡೆಸುತ್ತಿದ್ದು, ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆಸಿದ ಮನವೊಲಿಸುವ ಪ್ರಯತ್ನಗಳೆಲ್ಲಾ ಮಂಜಿನಂತೆ ಕರಗಿಹೋಯಿತು.

ಒಳಪಂಗಡಗಳ ಒಡಕಿಗೆ ನಾಂದಿ: ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ಪ್ರತಿಷ್ಠೆಯಿಂದ ಪರಿಶಿಷ್ಟ ಜಾತಿಗಳ ಒಳಗೆ ಎಡ-ಬಲಗಳ ಗುಂಪುಗಾರಿಕೆಗೆ ಮತ್ತಷ್ಟು ಪುಷ್ಠಿ ಸಿಕ್ಕಿ ಅದು ಒಂದೇ ಸಮುದಾಯದ ಜನರೊಳಗೇ ಎಡ-ಬಲ-ಚಿಕ್ಕ-ದೊಡ್ಡ ಎಂಬ ಗುರುತುಗಳ ಆಧಾರದಲ್ಲಿ ಉಪಜಾತಿ ಒಡಕುಗಳಿಗೆ ನಾಂದಿ ಹಾಡಿದಂತಾಗಿದೆ.

ಕಾಂಗ್ರೆಸ್ ಟಿಕೆಟ್‌ಗಾಗಿ ಕೆ.ಹೆಚ್.ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ, ರಮೇಶ್ ಕುಮಾರ್ ಬೆಂಬಲಿತ ಹಿರಿಯ ಪತ್ರಕರ್ತ ಸಿ.ಎಂ.ಮುನಿಯಪ್ಪ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಹೆಸರುಗಳು ಅಂತಿಮವಾಗಿತ್ತು. 

ಆದರೆ, ಕೊನೆ ಗಳಿಗೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕೋಲಾರ ಮೀಸಲು ಕ್ಷೇತ್ರವನ್ನು ಎಡಗೈ ಸಮುದಾಯಕ್ಕೆ ನೀಡಲು ತೀರ್ಮಾನಿಸಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದ ಬೆನ್ನಲ್ಲೇ ಬಣ ರಾಜಕೀಯ ಗರಿಗೆದರಿದೆ.

ಕೆಎಚ್ಚೆಂ ಕುಟುಂಬಕ್ಕೆ ನೀಡಬೇಡಿ: ಗುರುವರ ಸಂಜೆ ಸಿ.ಎಂ. ಹಾಗೂ ಡಿ.ಸಿ.ಎಂ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಎರಡೂ ಗುಂಪಿನ ಮುಖಂಡರಿದ್ದರೂ ಕೆ.ಹೆಚ್.ಮುನಿಯಪ್ಪ ಗೈರು ಹಾಜರಾದರು. 

ಜಿಲ್ಲೆಯ ಘಟಬಂಧನ್ ನೇತೃತ್ವದ ರಮೇಶ್ ಕುಮಾರ್ ತಮ್ಮೊಂದಿಗೆ ಗುರುತಿಸಿಕೊಂಡಿರುವ ಬಲಗೈ ಸಮುದಾಯದ ಸಿ.ಎಂ.ಮುನಿಯಪ್ಪಗೆ ಟಿಕೆಟ್ ನೀಡಬೇಕು. 

ಕೆ.ಹೆಚ್.ಮುನಿಯಪ್ಪ ಆಗಲೀ ಅಥವಾ ಅವರು ಸೂಚಿಸುವ ಅವರ ಕುಟುಂಬ ವರ್ಗದವರಿಗೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದರು. ಉಳಿದಂತೆ ಹೈಕಮಾಂಡ್ ಯಾರಿಗೇ ನೀಡಿದರೂ ಗೆಲ್ಲಿಸಿಕೊಳ್ಳುತ್ತೇವೆ ಎಂದು ಪಟ್ಟು ಹಿಡಿದರು. 

ಮತ್ತೊಂದೆಡೆ ಕೆ.ಹೆಚ್. ಮುನಿಯಪ್ಪ ಬಣದ ಮುಖಂಡರು ಕೆ.ಹೆಚ್.ಮುನಿಯಪ್ಪ ಸೂಚಿಸುವ ಯಾವುದೇ ಅಭ್ಯರ್ಥಿಯನ್ನು ನಾವು ಒಗ್ಗಟ್ಟಿನಿಂದ ಕೆಲಸ ಮಾಡಿ ಗೆಲ್ಲಿಸಿಕೊಳ್ಳುತ್ತೇವೆ ಅಥವಾ ಹೈಕಮಾಂಡ್ ಯಾರಿಗೇ ಟಿಕೆಟ್ ನೀಡಿದರೂ ಕೆಲಸ ಮಾಡುತ್ತೇವೆ ಎಂದು ಹೇಳುವ ಮೂಲಕ ತಮ್ಮ ಬೆಂಬಲ ಚಿಕ್ಕಪೆದ್ದಣ್ಣನವರಿಗೆ ಎಂಬುದನ್ನು ಪರೋಕ್ಷವಾಗಿ ಪ್ರಕಟಿಸಿದರು. 

ಉಭಯ ಬಣಗಳ ಅಭಿಪ್ರಾಯ ಸಂಗ್ರಹಿಸಿದ ಸಿ.ಎಂ. ಮತ್ತು ಡಿ.ಸಿ.ಎಂ. ಇವರಿಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಗುಂಪುಗಾರಿಕೆ ಶಮನ ಅಸಾಧ್ಯವಾಗಲಿದೆ ಎಂದು ಅರಿತು, ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಎಲ್ಲರೂ ಭಿನ್ನಾಭಿಪ್ರಾಯ ಬಿಟ್ಟು ಕೆಲಸ ಮಾಡಬೇಕೆಂದು ಹೇಳಿ ಸಭೆ ಮುಗಿಸಿದ್ದಾರೆ.

ಮೂರನೇ ಅಭ್ಯರ್ಥಿಯತ್ತ ಕಣ್ಣು: ಆದರೆ, ಅತ್ತ ಸಿ.ಎಂ. ಮತ್ತು ಡಿ.ಸಿ.ಎಂ. ಇದಕ್ಕೆ ಕೊನೆ ಹಾಡುವ ನಿಟ್ಟಿನಲ್ಲಿ ಇಬ್ಬರಿಗೂ ನೀಡದೆ ಬೆಂಗಳೂರಿನ ಮಾಜಿ ಮೇಯರ್ ಹಾಗೂ ಹಾಲಿ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಪುತ್ರ ಗೌತಮ್ ಕುಮಾರ್, ಶಿಕ್ಷಣ ತಜ್ಞ ನಾರಾಯಣಸ್ವಾಮಿ ಹಾಗೂ ಚಿಕ್ಕಬಳ್ಳಾಪುರದ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪನವರ ಹೆಸರುಗಳನ್ನು ಹೈಕಮಾಂಡ್‌ಗೆ ಶಿಫಾರಸ್ಸು ಮಾಡಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. 

ಇದರಿಂದ ಇಬ್ಬರ ಜಗಳ ಮೂರನೇಯವನಿಗೆ ಲಾಭವೆಂಬಂತೆ ಗೌತಮ್ ಕುಮಾರ್, ನಾರಾಯಣಸ್ವಾಮಿ, ಎಸ್.ಎಂ. ಮುನಿಯಪ್ಪ ಹೆಸರುಗಳು ಹೊಸದಾಗಿ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಿಕ್ಕಪೆದ್ದಣ್ಣ ಅವರ ಹೆಸರನ್ನು ಅಂತಿಮಗೊಳಿಸಿದ್ದು ಅದನ್ನೇ ಅಧಿಕೃತವಾಗಿ ಪ್ರಕಟಿಸಬೇಕು.

ಹೊಸದಾಗಿ ಯಾರನ್ನಾದರೂ ಸೇರ್ಪಡೆ ಮಾಡಿದರೆ ಚೆನ್ನಾಗಿರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಈ ಟಿಕೆಟ್ ಕಗ್ಗಂಟು ಏಪ್ರಿಲ್ ೩ನೇ ತಾರೀಖಿನವರೆಗೂ ಮುಂದುವರೆಯುವ ಸಾಧ್ಯತೆಯಿದ್ದು, ಕೊನೆಯ ಗಳಿಗೆಯಲ್ಲಿ ಟಿಕೆಟ್ ಪ್ರಕಟಣೆ ಮಾಡುವುದರಿಂದ ಜಿಲ್ಲೆಯ ಜನತೆ ಗೊಂದಲಕ್ಕೀಡಾಗಿ, ಚುನಾವಣೆಯಲ್ಲಿ ಭಾಗವಹಿಸುವ ಉತ್ಸಾಹವನ್ನೇ ಕಳೆದುಕೊಳ್ಳುವ ಭೀತಿ ಎದುರಾಗಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಸಮಸ್ಯಾತ್ಮಕ ಸವಾಲಾಗಿ ಪರಿಣಮಿಸಲಿದೆ.