ಸಾರಾಂಶ
ಲಾಲ್‌ಬಾಗ್ ರಸ್ತೆಯ ಕೆ.ಸಿ.ಗಾರ್ಡನ್‌ನ ಕೊಳಗೇರಿಯ ಸುಮಾರು 1,500ಕ್ಕೂ ಅಧಿಕ ಮನೆಗಳಿಗೆ ಕುಡಿಯುವ ನೀರಿನೊಂದಿಗೆ ಕೊಳಚೆ ನೀರು ಹರಿದು ಬರುತ್ತಿರುವುದರಿಂದ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಲಾಲ್‌ಬಾಗ್ ರಸ್ತೆಯ ಕೆ.ಸಿ.ಗಾರ್ಡನ್‌ನ ಕೊಳಗೇರಿಯ ಸುಮಾರು 1,500ಕ್ಕೂ ಅಧಿಕ ಮನೆಗಳಿಗೆ ಕುಡಿಯುವ ನೀರಿನೊಂದಿಗೆ ಕೊಳಚೆ ನೀರು ಹರಿದು ಬರುತ್ತಿರುವುದರಿಂದ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಪ್ರತಿ ಎರಡ್ಮೂರು ತಿಂಗಳಿಗೊಮ್ಮೆ ಈ ರೀತಿ ಸಮಸ್ಯೆ ಉಂಟಾಗುತ್ತಿದ್ದು, ಸಮಸ್ಯೆ ಉಂಟಾದಾಗ ಜಲಮಂಡಳಿ ಸಿಬ್ಬಂದಿ ಬಂದು ತಾತ್ಕಾಲಿಕ ಪರಿಹಾರ ಮಾಡಿ ಹೋಗುತ್ತಾರೆ. ಆ ಬಳಿ ಮತ್ತೆ ಅದೇ ಸಮಸ್ಯೆ ಆಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೊಳಚೆ ನೀರು ಹರಿಯುವ ಚೇಂಬರ್‌ನಲ್ಲಿಯೇ ಕುಡಿಯುವ ನೀರಿನ ಕೊಳವೆ ಅಳವಡಿಕೆ ಮಾಡಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಸುಧಾಮನಗರದ ಜಲಮಂಡಳಿಯ ಸಹಾಯಕ ಎಂಜಿನಿಯರ್ ಸುಶಾಸ್, ಕೆ.ಸಿ.ಗಾರ್ಡ್‌ನ್‌ನ ನಿವಾಸಿಗಳು ಮೋಟರ್ ಹಾಕಿ ನೀರು ಎಳೆಯುತ್ತಿದ್ದಾರೆ. ನೀರಿನ ಪ್ರಮಾಣ ಕಡಿಮೆಯಾದ ಸಂದರ್ಭದಲ್ಲಿ ಕೊಳಚೆ ನೀರನ್ನು ಮೋಟರ್‌ಗಳು ಎಳೆಯುತ್ತವೆ. ಕುಡಿಯುವ ನೀರಿನ ಕೊಳವೆಯನ್ನು ಜಲಮಂಡಳಿಯ ಅನುಮತಿ ಇಲ್ಲದೇ ಬೇಕಾಬಿಟ್ಟಿ ಸಂಪರ್ಕ ಪಡೆಯುತ್ತಾರೆ. ಇದರಿಂದ ಕೊಳಚೆ ನೀರು ಕುಡಿಯುವ ನೀರಿನ ಕೊಳವೆ ಒಳಗೆ ಹೋಗುತ್ತಿದೆ. ಈ ಬಗ್ಗೆ ಸ್ಥಳೀಯರಿಗೆ ಸಾಕಷ್ಟು ಬಾರಿ ಹೇಳಿದರೂ ಪ್ರಯೋಜನವಾಗುತ್ತಿಲ್ಲ. ಹಾಗಾಗಿ, ಈ ರೀತಿ ಸಮಸ್ಯೆ ಪದೇ ಪದೆ ಕೇಳಿ ಬರುತ್ತಿದೆ. ಕಳೆದ ಎರಡ್ಮೂರು ದಿನದಿಂದ ಮತ್ತೆದೇ ಸಮಸ್ಯೆ ಉಂಟಾಗಿತ್ತು. ಮಂಗಳವಾರ ಜಲಮಂಡಳಿಯ ಸಿಬ್ಬಂದಿ ಭೇಟಿ ನೀಡಿ ಪರಿಹಾರ ಮಾಡಿದ್ದಾರೆ ಎಂದು ತಿಳಿಸಿದರು.