ಸಾರಾಂಶ
ಮುಂದಿನ ಒಂದೂವರೆ ವರ್ಷಗಳ ಕಾಲ ವಿಜಯೇಂದ್ರ ಅವರನ್ನೇ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸಲಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಮಾರ್ಮಿಕವಾಗಿ ಹೇಳಿದ್ದಾರೆ.
ಬೆಂಗಳೂರು : ಮುಂದಿನ ಒಂದೂವರೆ ವರ್ಷಗಳ ಕಾಲ ವಿಜಯೇಂದ್ರ ಅವರನ್ನೇ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸಲಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಮಾರ್ಮಿಕವಾಗಿ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ ವಿಜಯೇಂದ್ರ ಅವರೇ ರಾಜ್ಯಾಧ್ಯಕ್ಷರಾಗಿದ್ದಾರೆ. ಮಧ್ಯಂತರದಲ್ಲಿ ಅಧ್ಯಕ್ಷರ ಬದಲಾವಣೆ ನಮ್ಮ ಪಕ್ಷದಲ್ಲಿ ಆಗಿಲ್ಲ. ಹೀಗಾಗಿ, ಮುಂದಿನ ಒಂದೂವರೆ ವರ್ಷ ವಿಜಯೇಂದ್ರ ಅವರನ್ನೇ ಮುಂದುವರೆಸಲಿ ಎಂದು ಪ್ರತಿಪಾದಿಸಿದರು.
ನೀವು ಕೂಡ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಹಿಂದೆ ನಾನು ಅಧ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸುವುದಾಗಿ ಹೇಳಿದ್ದೆ. ಈಗಲೂ ಆ ಮಾತಿಗೆ ಬದ್ಧನಾಗಿದ್ದೇನೆ. ಆದರೆ, ಈಗ ಅಲ್ಲ. ಒಂದೂವರೆ ವರ್ಷದ ಬಳಿಕ ನನಗೆ ಅವಕಾಶ ಕೊಡಲಿ ಎಂದರು.