ಸಾರಾಂಶ
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಮೊದಲಿನಂತಿಲ್ಲ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶೇ.50ಃ 50 ನಿವೇಶನಗಳ ಹಂಚಿಕೆಯ ಹಗರಣ ಬೆಳಕಿಗೆ ಬಂದ ಬಳಿಕ ಮೆತ್ತಗೆ ಆಗಿದ್ದಾರೆ ಎಂದು ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಟೀಕಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ವಾಲ್ಮೀಕಿ ನಿಗಮದ ಹಗರಣದ ಚರ್ಚೆ ಅಧಿವೇಶನದಲ್ಲಿ ಆಗುತ್ತಿದೆ. ಶುಕ್ರವಾರ ಅಥವಾ ಸೋಮವಾರ ಎಂಡಿಎ ಹಗರಣದ ಬಗ್ಗೆ ಮಾತನಾಡುತ್ತೇವೆ. ಎಂಡಿಎ ಹಗರಣ ತಾರ್ಕಿಕ ಅಂತ್ಯ ಕಾಣಲಿದೆ. ಈಗ ನಿವೃತ್ತ ನ್ಯಾಯಾಧೀಶಕರ ನೇತೃತ್ವದಲ್ಲಿ ಸಮಿತಿ ರಚಿಸಿ, ವರದಿ ನೀಡಲು ಆರು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದರು.
ಇದಕ್ಕೂ ಮುನ್ನ ಐಎಎಸ್ ಅಧಿಕಾರಿಗಳ ತಂಡ ರಚಿಸಿ ಒಂದು ತಿಂಗಳ ಒಳಗೆ ವರದಿ ನೀಡಲು ಸೂಚಿಸಲಾಗಿತ್ತು. ಇದನ್ನೆಲ್ಲಾ ಗಮನಿಸಿದರೆ ಈ ಪ್ರಕರಣವನ್ನು ಮುಂದೂಡುವ ತಂತ್ರ ಅಡಗಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಮೊದಲು ಹಗರಣ ನಡೆದಿಲ್ಲ ಎಂದಿದ್ದರು. ಅದಾದ ಬಳಿಕ ಎಂಡಿಎಗೆ ಭೇಟಿ ನೀಡಿ ಸಭೆ ನಡೆಸಿದರು.
ಸಭೆ ನಡೆಸಿ ಮಹತ್ವದ ದಾಖಲೆಗಳನ್ನು ಬೆಂಗಳೂರಿಗೆ ಕೊಂಡೊಯ್ದರು. ಅವರು ಏನೆಲ್ಲಾ ದಾಖಲೆ ಕೊಂಡೊಯ್ದಿದ್ದರೂ ನಮ್ಮ ಬಳಿ ಸೂಕ್ತ ದಾಖಲೆಗಳಿವೆ. ಅಧಿವೇಶನದಲ್ಲಿ ಆ ಎಲ್ಲಾ ದಾಖಲೆಗಳನ್ನು ಬಹಿರಂಗಪಡಿಸುತ್ತೇವೆ ಎಂದು ಅವರು ತಿಳಿಸಿದರು.
ಅಕ್ರಮವಾಗಿ ಎಂಡಿಎ ಆಸ್ತಿ ಪಡೆದಿದ್ದರೆ ಹಿಂದಕ್ಕೆ ಪಡೆಯುವ ಮಾತನ್ನು ಸಚಿವರು ಪ್ರಕಟಿಸಿದ್ದರು. ಈ ಎಲ್ಲಾ ಹೇಳಿಕೆಗಳು ಮೌಖಿಕವಾಗಿ ಮಾತ್ರ ಇದೆ. ಯಾವುದೂ ಆದೇಶವಾಗಿ ಹೊರ ಬಂದಿಲ್ಲ. ಸರ್ಕಾರವೇ ಇಲ್ಲಿ ಹಗರಣ ನಡೆದಿದೆ ಎಂಬುದನ್ನು ಒಪ್ಪಿಕೊಂಡಿದೆ. ಈ ಕಾರಣಕ್ಕಾಗಿ ತನಿಖಾ ತಂಡ ರಚಿಸಲಾಗಿದೆ. ಎಂಡಿಎ ಹಗರಣ ಬೆಳಕಿಗೆ ಬಂದ ಬಳಿಕ ಸಿದ್ದರಾಮಯ್ಯ ಮೆತ್ತಗೆ ಆಗಿದ್ದಾರೆ. ಈಗಿರುವ ಸಿದ್ದರಾಮಯ್ಯ. ಮೊದಲಿನಂತೆ ಇಲ್ಲ. ಲೋಪ ಆಗಿರುವುದರಿಂದಲೇ ಅವರು ವಿಚಲಿತರಾಗಿದ್ದಾರೆ. ಈ ಮೊದಲಿನಂತೆ ಮಾತನಾಡುತ್ತಿಲ್ಲ ಎಂದು ಕಟುವಾಗಿ ಟೀಕಿಸಿದರು.
ಎಂಡಿಎಗೆ ಯಾವುದೇ ಜನಪ್ರತಿನಿಧಿಗಳನ್ನು ಸದಸ್ಯರಾಗಿ ನೇಮಿಸಬಾರದು ಎಂಬ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ನಿರ್ಧಾರಕ್ಕೆ ನನ್ನ ಸಹಮತವಿದೆ. ಎಂಡಿಎಗೆ ಸದಸ್ಯರನ್ನು ನೇಮಿಸುವ ಅಗತ್ಯವಿಲ್ಲ. ಏಕೆಂದರೆ ಅದೂ ಕೂಡ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ. ಸರ್ಕಾರದ ನಿಯಮಾನುಸಾರ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದರೆ ಸಾಕು ಎಂದರು.
ಎಂಡಿಎಗೆ ಸಮರ್ಥ ಅಧಿಕಾರಿಗಳನ್ನು ನೇಮಿಸಬೇಕು. ಜನ ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ನುಡಿದರು.