ಸಾರಾಂಶ
ರಾಯಚೂರು :ಮುಡಾ ಹಗರಣ ನಾವು ತಿಳಿದುಕೊಂಡ ಮಟ್ಟಕ್ಕಿಂತ ಹೆಚ್ಚಿನ ಆಳವಾಗಿದ್ದು, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಸಾಗಿರುವುದರಿಂದ ಈ ಬಗ್ಗೆ ಜಾಸ್ತಿ ಚರ್ಚೆ ಮಾಡುವ ಅಗತ್ಯವಿಲ್ಲ. ಆದರೆ, ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ವ್ಯಂಗ್ಯವಾಡಿದರು.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ಯಾರೇ ಇರಲಿ ಬಹಳ ದಿನಗಳ ಕಾಲ ಎಲ್ಲರನ್ನು ಮೋಸ ಮಾಡಲು ಆಗುವುದಿಲ್ಲ. ನನ್ನ 45 ವರ್ಷದ ರಾಜಕಾರಣದಲ್ಲಿ ನಾ ಕಂಡಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಮುತ್ಸದ್ದಿ. ಅಂಥವರ ಮೇಲೆ ಆರೋಪ ಬಂದಿದೆ. ಅವರು ಮಾಡಿದ್ದಾರೋ ಇಲ್ಲವೋ ನಮಗೆ ಗೊತ್ತಿಲ್ಲ. ಈಗಾಗಲೇ ತನಿಖೆಗೆ ರಾಜ್ಯಪಾಲರು ಆದೇಶಿಸಿದ್ದಾರೆ. ಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಆದೇಶ ಏನು ಬರುತ್ತದೆಯೋ ಕಾದು ನೋಡಬೇಕಿದೆ. ಪ್ರಕರಣ ಇತ್ಯರ್ಥವಾದ ಮೇಲೆ ಅವರೇ ಸಿಎಂ ಆಗಿ ಮುಂದುವರೆಯಲಿ ಎಂದರು.
ನಾನು ಮೈಸೂರು ಉಸ್ತುವಾರಿ ಮಂತ್ರಿಯಾಗಿದ್ದಾಗ 7900 ನಿವೇಶನಗಳನ್ನು ಎರಡೂವರೆ ವರ್ಷದಲ್ಲಿ ಸಿದ್ಧ ಮಾಡಿಸಿದೆ. ಕೋವಿಡ್ ಮುಗಿದ ಬಳಿಕ ಹರಾಜು ಹಾಕಿಸಿ ₹15000 ಕೋಟಿ ಆದಾಯ ಸಂಗ್ರಹಿಸಲು ನಿರ್ಧರಿಸಿದ್ದೆ. ಇದಾದ ಬೆನ್ನಲ್ಲೆ ರಾತ್ರಿ 1 ಗಂಟೆಗೆ ನನ್ನನ್ನು ಮೈಸೂರು ಉಸ್ತುವಾರಿ ಸ್ಥಾನದಿಂದಲೇ ಎತ್ತಂಗಡಿ ಮಾಡಲಾಯಿತು.
ರಾಜ್ಯದಲ್ಲಿ ಸದ್ಯ ಪರಿಸ್ಥಿತಿ ಕುದಿಯುತ್ತಿದೆ. ಇಂಥ ವೇಳೆ ಕಾಂಗ್ರೆಸ್‌ನವರು ಇನ್ನೊಂದು ಮತ್ತೊಂದು ಹೇಳಿಕೆ ನೀಡುವುದು ಸಮಂಜಸ ಅಲ್ಲ. ನಾವು ಎಷ್ಟೇ ದೊಡ್ಡವರಾದರೂ ಕಾನೂನಿನ ಎದುರು ಎಲ್ಲರೂ ಒಂದೇ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಎಲ್ಲರಿಗೂ ಒಂದೇ ಕಾನೂನು ಮಾಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿ ಚಿಂತಕರಲ್ಲಿ ಒಬ್ಬರು. ಯಾರು ಯೂಟರ್ನ್ ಹೊಡೆದಿಲ್ಲ. ಮೂರ್ನಾಲ್ಕು ದಿನಗಳಲ್ಲಿ ಎಲ್ಲವೂ ಹೊರಗೆ ಬರುತ್ತದೆ. ಆಯಾ ರಾಜ್ಯಗಳನ್ನು ಗೌರವಿಸುಸುವುದು, ಕಾನೂನು ಸಂರಕ್ಷಣೆ ಮಾಡುವುದು ರಾಜ್ಯಪಾಲರ ಕರ್ತವ್ಯ. ರಾಜ್ಯಪಾಲರ ತೀರ್ಮಾನ ಸರಿಯಾಗಿದೆ. ಕಾಂಗ್ರೆಸ್‌ನವರು ಬರೀ ಹುಲಿ ಬಂತು ಹುಲಿ ಎನ್ನುವ ಜಾಯಮಾನದವರು. ಎಷ್ಟು ಜನರಿಗೆ ಕಿವಿಯಲ್ಲಿ ಹೂ ಇಡುತ್ತಾರೆ. ಕೋವಿಡ್ ತನಿಖೆ ಅಗತ್ಯವಿದೆಯೇ ಎಂದು ಕೇಂದ್ರ ಸಚಿವ ಸೋಮಣ್ಣ ಪ್ರಶ್ನಿಸಿದರು.