ಗೊಂದಲದ ಗೂಡಾದ ದಕ್ಷಿಣ ಶಿಕ್ಷಕರ ಕ್ಷೇತ್ರ...!

| Published : May 16 2024, 12:49 AM IST / Updated: May 16 2024, 04:17 AM IST

voting

ಸಾರಾಂಶ

ಶ್ರೀಕಂಠೇಗೌಡರ ಶಿಷ್ಯರಾಗಿ ಅವರ ಗರಡಿಯಲ್ಲೇ ಪಳಗಿದ್ದ ಕೆ.ವಿವೇಕಾನಂದ ಕೂಡ ಜೆಡಿಎಸ್ ಅಭ್ಯರ್ಥಿಯಾಗುವುದಕ್ಕೆ ಹೋರಾಟ ನಡೆಸಿದ್ದರು. ಅಂತಿಮವಾಗಿ ಜೆಡಿಎಸ್ ವರಿಷ್ಠರಿಂದ ಬಿ-ಫಾರಂ ಪಡೆದುಕೊಂಡಿರುವ ಕೆ.ವಿವೇಕಾನಂದ ಅವರು ಗುರುವಿಗೇ ತಿರುಮಂತ್ರ ಹಾಕಿದಂತಾಗಿದೆ.

ಮಂಡ್ಯ ಮಂಜುನಾಥ

 ಮಂಡ್ಯ :  ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಈಗ ಗೊಂದಲದ ಗೂಡಾಗಿದೆ. ಒಂದೆಡೆ ಬಿಜೆಪಿ ಪಕ್ಷ ಈ.ಸಿ.ನಿಂಗರಾಜ್‌ಗೌಡರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದರೆ, ಮತ್ತೊಂದೆಡೆ ಜೆಡಿಎಸ್ ವರಿಷ್ಠರು ಕೆ.ವಿವೇಕಾನಂದ ಅವರಿಗೆ ಪಕ್ಷದ ಬಿ-ಫಾರಂ ನೀಡಿರುವುದು ಅಚ್ಚರಿ ಮೂಡಿಸಿದೆ. ಇದೀಗ ಮೈತ್ರಿ ಅಭ್ಯರ್ಥಿ ಯಾರು ಎನ್ನುವುದು ಗೊಂದಲಕ್ಕೆ ಕಾರಣವಾಗಿದೆ.

ದಕ್ಷಿಣ ಪದವೀಧರ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿ ಎರಡು ಬಾರಿ ಗೆಲುವು ಸಾಧಿಸಿದ್ದ ಕೆ.ಟಿ.ಶ್ರೀಕಂಠೇಗೌಡರು ಈ ಬಾರಿ ಜೆಡಿಎಸ್ ಪಕ್ಷದಿಂದ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಲು ಬಯಸಿದ್ದರು. ಚುನಾವಣೆಗೆ ಸಾಕಷ್ಟು ಪೂರ್ವ ತಯಾರಿ ನಡೆಸುವುದರೊಂದಿಗೆ ಪಕ್ಷದ ಟಿಕೆಟ್‌ಗೆ ತೀವ್ರ ಪೈಪೋಟಿ ನಡೆಸಿದ್ದರು. ಶ್ರೀಕಂಠೇಗೌಡರ ಶಿಷ್ಯರಾಗಿ ಅವರ ಗರಡಿಯಲ್ಲೇ ಪಳಗಿದ್ದ ಕೆ.ವಿವೇಕಾನಂದ ಕೂಡ ಜೆಡಿಎಸ್ ಅಭ್ಯರ್ಥಿಯಾಗುವುದಕ್ಕೆ ಹೋರಾಟ ನಡೆಸಿದ್ದರು. ಅಂತಿಮವಾಗಿ ಜೆಡಿಎಸ್ ವರಿಷ್ಠರಿಂದ ಬಿ-ಫಾರಂ ಪಡೆದುಕೊಂಡಿರುವ ಕೆ.ವಿವೇಕಾನಂದ ಅವರು ಗುರುವಿಗೇ ತಿರುಮಂತ್ರ ಹಾಕಿದಂತಾಗಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಲು ಕೆ.ಟಿ.ಶ್ರೀಕಂಠೇಗೌಡ ಮತ್ತು ಕೆ.ವಿವೇಕಾನಂದ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ವಿಧಾನ ಪರಿಷತ್ತಿನ ಉತ್ತಮ ಶಾಸಕ ಪ್ರಶಸ್ತಿ ಪಡೆದುಕೊಂಡು, ಉತ್ತಮ ವಾಗ್ಮಿ ಎನಿಸಿದ್ದ ಕೆ.ಟಿ. ಶ್ರೀಕಂಠೇಗೌಡರಿಗೆ ಅವಕಾಶ ತಪ್ಪಿಸಿರುವ ದಳಪತಿಗಳು ಕೆ.ವಿವೇಕಾನಂದ ಅವರಿಗೆ ಮಣೆ ಹಾಕಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಚ್ಚರಿ ಮೂಡಿಸುವಂತೆ ಮಾಡಿದೆ. ಕೆ.ಟಿ.ಶ್ರೀಕಂಠೇಗೌಡರಿಗೆ ಟಿಕೆಟ್ ನೀಡದಿರುವುದಕ್ಕೆ ಕಾರಣವೇನೆಂಬುದು ಸ್ಪಷ್ಟವಾಗಿಲ್ಲ.

ಜೆಡಿಎಸ್ ಅಥವಾ ಮೈತ್ರಿ ಅಭ್ಯರ್ಥಿಯಾಗುವ ನಿರೀಕ್ಷೆಯೊಂದಿಗೆ ಕಳೆದೊಂದು ವರ್ಷದಿಂದ ಚುನಾವಣಾ ಕಾರ್ಯಚಟುವಟಿಕೆಯಲ್ಲಿ ಕೆ.ಟಿ.ಶ್ರೀಕಂಠೇಗೌಡರು ಉತ್ಸಾಹದಿಂದ ತೊಡಗಿಸಿಕೊಂಡಿದ್ದರು. ಎರಡೆರಡು ಬಾರಿ ಶಿಕ್ಷಕರನ್ನು ಸಂಪರ್ಕಿಸಿದ್ದರು. ಮನವಿ ಪತ್ರವನ್ನೂ ರವಾನಿಸಿದ್ದರು. ಶ್ರೀಕಂಠೇಗೌಡರೇ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎನ್ನುವ ಖಚಿತತೆ ಎಲ್ಲರಲ್ಲಿತ್ತು. ಚುನಾವಣೆಗೆ ಉಮೇದುವಾರಿಕೆ ಸಲ್ಲಿಸುವ ಕೊನೆಯ ದಿನಕ್ಕೂ ಮುನ್ನ ನಡೆದಿರುವ ರಾಜಕೀಯ ಬೆಳವಣಿಗೆಯಲ್ಲಿ ಕೆ.ವಿವೇಕಾನಂದರಿಗೆ ಜೆಡಿಎಸ್ ಬಿ-ಫಾರಂ ದೊರಕಿರುವುದು ಎಲ್ಲರ ನಿರೀಕ್ಷೆಯನ್ನು ತಲೆಕೆಳಗು ಮಾಡಿದಂತಾಗಿದೆ.

ಜೆಡಿಎಸ್‌ನೊಳಗೆ ಈ ಬೆಳವಣಿಗೆ ನಡೆದಿದ್ದರೆ ಅತ್ತ ಬಿಜೆಪಿಯೊಳಗೆ ಈಗಾಗಲೇ ಅಭ್ಯರ್ಥಿ ಎಂದು ಘೋಷಿಸಿರುವ ಈ.ಸಿ. ನಿಂಗರಾಜ್‌ಗೌಡ ಅವರು ಅಭ್ಯರ್ಥಿಯಾಗಿ ಬುಧವಾರ ಉಮೇದುವಾರಿಕೆ ಸಲ್ಲಿಸಿದ್ದಾರೆ. ಆದರೆ, ಅವರಿಗಿನ್ನೂ ಪಕ್ಷದ ಬಿ-ಫಾರಂ ಸಿಕ್ಕಿಲ್ಲ. ಪಕ್ಷದ ನಾಯಕರು ಮಾತುಕತೆಗೆ ಬರುವಂತೆ ಸೂಚಿಸಿದ್ದಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರ ಹೊರತುಪಡಿಸಿ ಉಳಿದ ಆರು ಕ್ಷೇತ್ರಗಳನ್ನು ಬಿಜೆಪಿಗೆ ೪ ಹಾಗೂ ಜೆಡಿಎಸ್‌ಗೆ ೨ ಕ್ಷೇತ್ರವೆಂದು ಹಂಚಿಕೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಅದರಂತೆ ಜೆಡಿಎಸ್‌ಗೆ ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಬಿಟ್ಟುಕೊಡಲಾಗಿದೆ ಎನ್ನಲಾಗುತ್ತಿದ್ದು, ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್‌ನ ಭೋಜೇಗೌಡ, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಕೆ.ವಿವೇಕಾನಂದ ಹೆಸರನ್ನು ಸೂಚಿಸಿರುವುದಾಗಿ ತಿಳಿದುಬಂದಿದೆ. ಇದೀಗ ಜೆಡಿಎಸ್ ವರಿಷ್ಠರು ಕೆ.ವಿವೇಕಾನಂದ ಅವರಿಗೆ ಬಿ-ಫಾರಂ ನೀಡಿರುವುದನ್ನು ನೋಡಿದರೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಅವರೇ ಆಗುವ ಸಾಧ್ಯತೆಗಳು ಹೆಚ್ಚಾಗಿರುವಂತೆ ಕಂಡುಬರುತ್ತಿವೆ.

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಸಮಯದಲ್ಲೇ ದಕ್ಷಿಣ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುವಂತೆ ಬಿಜೆಪಿ ಅಭ್ಯರ್ಥಿ ಈ.ಸಿ. ನಿಂಗರಾಜ್‌ಗೌಡರಿಗೆ ಪಕ್ಷದ ನಾಯಕರು ಭರವಸೆ ನೀಡಿದ್ದರು. ಅದರಂತೆ ಅವರು ಚುನಾವಣಾ ತಯಾರಿ ಆರಂಭಿಸಿದ್ದರು. ಈ ವರ್ಷ ಜ.೨೮ರಂದು ನಡೆದ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲೂ ಈ.ಸಿ.ನಿಂಗರಾಜ್‌ಗೌಡರ ಹೆಸರನ್ನೇ ಅಂತಿಮಗೊಳಿಸಿ ದೆಹಲಿಗೆ ಕಳುಹಿಸಲಾಗಿತ್ತು. ಅದರಂತೆ ಅವರನ್ನೇ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಹೆಸರನ್ನೂ ಘೋಷಿಸಲಾಗಿದೆ. ಇದೀಗ ಈ.ಸಿ.ನಿಂಗರಾಜ್‌ಗೌಡರ ಮನವೊಲಿಸುವರೇ ಅಥವಾ ಕಣಕ್ಕಿಳಿಸುವರೇ ಎನ್ನುವುದು ಕುತೂಹಲ ಕೆರಳಿಸಿದೆ. ಕೆ.ವಿವೇಕಾನಂದ, ಈ.ಸಿ.ನಿಂಗರಾಜ್‌ಗೌಡರಲ್ಲಿ ಯಾರಿಗೆ ಅಭ್ಯರ್ಥಿ ಸ್ಥಾನ ಒಲಿಯುವುದೋ ಕಾದುನೋಡಬೇಕಿದೆ.

ಕೆ.ವಿವೇಕಾನಂದ ಪರಿಚಯ

ಕೆ.ವಿವೇಕಾನಂದ ಮದ್ದೂರು ತಾಲೂಕು ಕೊಪ್ಪ ಹೋಬಳಿ ಅವ್ವೇರಹಳ್ಳಿ ಗ್ರಾಮದವರು. ಎಸ್ಸೆಸ್ಸೆಲ್ಸಿವರೆಗೆ ಕೊಪ್ಪ ಸವೋದಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ನಂತರ ಮೈಸೂರಿಗೆ ತೆರಳಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿ, ಡೆವಲಪರ್ ಆಗಿ ಬೆಳವಣಿಗೆ ಕಂಡರು. ಆರಂಭದಲ್ಲಿ ಕೆ.ಟಿ.ಶ್ರೀಕಂಠೇಗೌಡರ ಒಡನಾಟದೊಂದಿಗೆ ಜೆಡಿಎಸ್ ಪಕ್ಷದೊಳಗೆ ಸಕ್ರಿಯ ಕಾರ್ಯಕರ್ತರಾಗಿದ್ದರು. ಆ ನಂತರದಲ್ಲಿ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಆಪ್ತರಾಗಿ ರಾಜಕೀಯದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಬೆಳವಣಿಗೆ ಕಂಡಿದ್ದರು.

2018 ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಜಂಗಲ್ ರೆಸಾರ್ಟ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಚುನಾವಣಾ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು ಎಂದು ಹೇಳಲಾಗಿದೆ. ಶಿಕ್ಷಕರೊಂದಿಗೆ ಸಂಪರ್ಕ ಬೆಳೆಸಿಕೊಂಡಿರುವ ಕೆ.ವಿವೇಕಾನಂದ ಅವರು ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ಅವರ ಮೇಲೆ ಒತ್ತಡ ಹೇರಿ ಎಚ್.ಡಿ.ದೇವೇಗೌಡರಿಂದ ಬಿ-ಫಾರಂ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ನಾನು ಮೂಲತಃ ಮದ್ದೂರು ತಾಲೂಕು ಅವ್ವೇರಹಳ್ಳಿ ಗ್ರಾಮದವನು. ನನಗೆ ಜೆಡಿಎಸ್ ವರಿಷ್ಠರು ಬಿ-ಫಾರಂ ನೀಡಿದ್ದಾರೆ. ಪಕ್ಷದ ನಾಯಕರೊಂದಿಗೆ ಗುರುವಾರ ನಾಮಪತ್ರ ಸಲ್ಲಿಸುತ್ತಿದ್ದೇನೆ. ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿರುವ ನನಗೆ ಗೆಲ್ಲುವ ವಿಶ್ವಾಸವಿದೆ.

- ಕೆ.ವಿವೇಕಾನಂದ, ಜೆಡಿಎಸ್ ಬಿ-ಫಾರಂ ಪಡೆದ ಅಭ್ಯರ್ಥಿ 

ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ಪಕ್ಷ ಅಧಿಕೃತವಾಗಿ ನನ್ನ ಹೆಸರನ್ನು ಪ್ರಕಟಿಸಿದೆ. ಪಕ್ಷದ ಬಿ-ಫಾರಂ ನಾಯಕರ ಬಳಿ ಇದೆ. ಜೆಡಿಎಸ್‌ನಲ್ಲಿ ಕೆ.ವಿವೇಕಾನಂದರಿಗೆ ಪಕ್ಷದ ಬಿ-ಫಾರಂ ಸಿಕ್ಕಿದೆ ಎಂಬ ಮಾಹಿತಿ ಇದೆ. ಆದರೆ, ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ. ನಾನು ಮೈತ್ರಿ ಅಭ್ಯರ್ಥಿಯಾಗುತ್ತೇನೆಂಬ ದೃಢ ವಿಶ್ವಾಸವಿದೆ. ಪಕ್ಷದ ನಾಯಕರು ಮಾತುಕತೆಗೆ ಬರುವಂತೆ ತಿಳಿಸಿದ್ದು, ಬೆಂಗಳೂರಿಗೆ ಹೋಗುತ್ತಿದ್ದೇನೆ.

- ಈ.ಸಿ.ನಿಂಗರಾಜ್‌ಗೌಡ, ಘೋಷಿತ ಬಿಜೆಪಿ ಅಭ್ಯರ್ಥಿ, ದಕ್ಷಿಣ ಶಿಕ್ಷಕರ ಕ್ಷೇತ್ರ  

ಮೈಸೂರಿನಲ್ಲಿ ನಡೆಸಿದ ಶಿಕ್ಷಕರ ಸಭೆಯಲ್ಲಿ ಸ್ವಾಭಿಮಾನಿ ಶಿಕ್ಷಕರ ವೇದಿಕೆಯಿಂದ ಸ್ಪರ್ಧಿಸುವಂತೆ ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಗಿದೆ. ಈ ವಿಷಯವಾಗಿ ಮಂಡ್ಯದಲ್ಲೂ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ. ಉಮೇದುವಾರಿಕೆ ಸಲ್ಲಿಕೆಗೆ ಎಲ್ಲಾ ಪ್ರಕ್ರಿಯೆಗಳನ್ನೂ ಮುಗಿಸಿದ್ದೇವೆ. ಸಲ್ಲಿಸುವುದಷ್ಟನ್ನೇ ಬಾಕಿ ಉಳಿಸಿಕೊಂಡಿದ್ದೇವೆ.

- ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್‌ ಬಿ-ಫಾರಂ ವಂಚಿತ