ಸಾರಾಂಶ
ಶಾಸನಸಭೆಗಳು ಜನಸಾಮಾನ್ಯರ ಸಮಸ್ಯೆಗಳ ಚರ್ಚೆಗೆ ವೇದಿಕೆಯಾಗಿದ್ದು, ವಾರ್ಷಿಕವಾಗಿ ಕನಿಷ್ಠ 60 ದಿನ ಅಧಿವೇಶನ ನಡೆಸುವುದು ಕಡ್ಡಾಯ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಲೋಕಸಭಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ನವದೆಹಲಿ : ಶಾಸನ ಸಭೆಗಳು ಜನಸಾಮಾನ್ಯರ ಬದುಕಿನ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸುವ ಸೂಕ್ತ ವೇದಿಕೆಗಳಾಗಿದ್ದು, ವಾರ್ಷಿಕವಾಗಿ ಕನಿಷ್ಠ 60 ದಿನ ಅಧಿವೇಶನ ನಡೆಸುವುದನ್ನು ಕಡ್ಡಾಯಗೊಳಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಲೋಕ ಸಭಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ನಗರದಲ್ಲಿ 10ನೇ ಕಾಮನ್‌ವೆಲ್ತ್ ಸಂಸದೀಯ ಸಂಘದ ಭಾರತ ವಲಯದ ಸಮ್ಮೇಳನದ ಅಂಗವಾಗಿ ಸೋಮವಾರ ಜರುಗಿದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಪ್ರಜಾಪ್ರಭುತ್ವದ ಸಾರ್ಥಕತೆಗಾಗಿ ಪ್ರತಿ ವರ್ಷವೂ ಶಾಸನಸಭೆಗಳು ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಸುವಂತೆ ಲೋಕಸಭೆ ಹಾಗೂ ರಾಜ್ಯಸಭೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಶಾಸನ ಸಭೆಗಳ ಸ್ವತಂತ್ರ ನಿರ್ವಹಣೆ ಹಾಗೂ ಪಕ್ಷಾತೀತ ಕಾರ್ಯನಿರ್ವಹಣೆ ದೃಷ್ಠಿಯಿಂದ ಅವುಗಳಿಗೆ ಆರ್ಥಿಕ ಸ್ವಾಯತ್ತತೆ ನೀಡುವ ನಿಟ್ಟಿನಲ್ಲಿ ಸೂಕ್ತ ಕಾನೂನು ಕ್ರಮ ಅವಶ್ಯಕವಾಗಿದೆ. ಶಾಸನ ಸಭೆಗಳ ಸಚಿವಾಲಯಕ್ಕೆ ಸ್ವಾಯತ್ತ ಸ್ಥಾನ-ಮಾನ ನೀಡುವ ಕುರಿತು ಕಾನೂನು ಮೂಲಕ ಸೂಕ್ತ ನಿರ್ಧಾರ ಕೈಗೊಂಡು ಸದನಗಳ ಗೌರವ, ಘನತೆ ಹಾಗೂ ಪ್ರಾಮುಖ್ಯತೆ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಲೋಕ ಸಭಾಧ್ಯಕ್ಷರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಸಮ್ಮೇಳನದಲ್ಲಿ ಲೋಕ ಸಭಾಧ್ಯಕ್ಷ ಓಂ ಬಿರ್ಲಾ, ರಾಜ್ಯಸಭೆ ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಸೇರಿ ವಿವಿಧ ರಾಜ್ಯಗಳ ಸಭಾಧ್ಯಕ್ಷರು ಹಾಗೂ ಸಭಾಪತಿಗಳು ಪಾಲ್ಗೊಂಡಿದ್ದರು.