ಸಾರಾಂಶ
ವಿಧಾನ ಪರಿಷತ್: ನಕಲಿ ಔಷಧ ತಯಾರಿಕೆ, ಮಾರಾಟ ಇತ್ಯಾದಿ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕಾಂಗ್ರೆಸ್ ಸದಸ್ಯ ಎಸ್.ರವಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನಕಲಿ ಔಷಧಗಳ ತಯಾರಿಕೆ ಇಲ್ಲವೇ ಮಾರಾಟ ಪ್ರಕರಣಗಳು ನ್ಯಾಯಾಲಯದಲ್ಲಿ ತಡವಾಗಿ ಇತ್ಯರ್ಥವಾಗುತ್ತಿವೆ. ಹೀಗಾಗಿ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಕಲಿ ಔಷಧಗಳ ಜಾಲದಲ್ಲಿ ಇರುವವರಿಗೆ ಕಠಿಣ ಶಿಕ್ಷೆ ಆಗಬೇಕು. ದಂಡ ಕಟ್ಟುವ ಇಲ್ಲವೇ ತಯಾರಿಕಾ ಘಟಕ ಮುಚ್ಚುವ ಹಂತಕ್ಕೆ ಹೋದಾಗ ಮಾತ್ರ ಇದನ್ನು ತಡೆಯಲು ಸಾಧ್ಯ. ಜೊತೆಗೆ ನಕಲಿ ಔಷಧವೆಂದು ಕಂಡು ಬಂದಲ್ಲಿ ಅಂತಹ ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವ ನೀತಿಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದರು.
21 ನಕಲಿ ಔಷಧ ಮಾರಾಟ ಪ್ರಕರಣ:
ಕಳೆದ ಮೂರು ವರ್ಷಗಳಲ್ಲಿ ನಕಲಿ ಔಷಧ ಮಾರಾಟ ಮಾಡುತ್ತಿರುವ 21 ಪ್ರಕರಣಗಳನ್ನು ಪತ್ತೆ ಮಾಡಿ ಮೊಕದ್ದಮೆ ಹೂಡಲಾಗಿದೆ. ಅಲ್ಲದೇ ಗುಣಮಟ್ಟ ಇಲ್ಲದ ಔಷಧಗಳ ಸಂಬಂಧ ಸುಮಾರು 127 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಕೆಲವು ಔಷಧಗಳನ್ನು ವಾಪಸ್ ಸಹ ಕಳಿಸಲಾಗಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.