ಸಾರಾಂಶ
ಇಂಡಿಯಾ ಕೂಟದಲ್ಲಿ ಮತ್ತೆ ಒಡಕು ಕಾಣಿಸಿಕೊಂಡಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸಿಪಿಎಂ ನಾಯಕ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ವಾಗ್ದಾಳಿ ನಡೆಸಿದ್ದಾರೆ.
ತಿರುವನಂತಪುರ: ಇಂಡಿಯಾ ಕೂಟದಲ್ಲಿ ಮತ್ತೆ ಒಡಕು ಕಾಣಿಸಿಕೊಂಡಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸಿಪಿಎಂ ನಾಯಕ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ವಾಗ್ದಾಳಿ ನಡೆಸಿದ್ದಾರೆ.
‘ರಾಹುಲ್ ಗಾಂಧಿ ಬುಧವಾರ ರೋಡ್ ಶೋ ಮಾಡಿ, ನಾಮಪತ್ರ ಸಲ್ಲಿಕೆ ಮಾಡಿದ್ದು, ತನ್ನ ಮಿತ್ರ ಪಕ್ಷಗಳಾದ ಸಿಪಿಎಂ, ಇಂಡಿಯನ್ ಯೂನಿಯನ್ ಮುಸ್ಲಿ ಲೀಗ್‌ನ (ಐಯುಎಂಎಲ್) ಬಾವುಟಗಳನ್ನು ಆ ವೇಳೆ ಏಕೆ ತೋರಿಸಿಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಡ್ ಶೋ ವೇಳೆ ಇಂಡಿಯಾ ಕೂಟದ ಮಿತ್ರ ಪಕ್ಷಗಳ ಬಾವುಟಗಳನ್ನು ತೋರಿಸಿಲ್ಲ. ಇದು ಬಿಜೆಪಿಗೆ ಹೆದರಿದಂತೆ ಕಾಣುತ್ತದೆ. ಕಾಂಗ್ರೆಸ್‌ಗೆ ಐಯುಎಂಎಲ್‌ನ ಮತಗಳಷ್ಟೇ ಬೇಕು. ಆದರೆ ಬಾವುಟ ಬೇಡ ಎಂದು ಆರೋಪಿಸಿದರು.
2019ರ ಚುನಾವಣೆಯಲ್ಲಿ ವಯನಾಡಿನಿಂದ ರಾಹುಲ್ ಗಾಂಧಿ ಸ್ಪರ್ಧಿಸಿದ್ದು, ಈಗಿನ ಗೃಹಸಚಿವ ಅಮಿತ್ ಶಾ ಐಯುಎಂಎಲ್ ಬಾವುಟ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದರಿಂದಲೇ ನಾಮಪತ್ರ ಸಲ್ಲಿಕೆ ವೇಳೆ ಐಯುಎಂಎಲ್ ಬಾವುಟ ಹೆಚ್ಚು ಕಾಣಿಸಿಕೊಂಡಿಲ್ಲ ಎಂದು ಕಟುವಾಗಿ ನುಡಿದರು.