‘ಕಾರು ಇಲ್ಲ’ದ ‘ಕೋಟ್ಯಧಿಪತಿ’ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು..!

| Published : Apr 02 2024, 01:01 AM IST / Updated: Apr 02 2024, 04:41 AM IST

‘ಕಾರು ಇಲ್ಲ’ದ ‘ಕೋಟ್ಯಧಿಪತಿ’ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು..!
Share this Article
  • FB
  • TW
  • Linkdin
  • Email

ಸಾರಾಂಶ

ನಾನು ರಾಜಕೀಯಕ್ಕೆ ಹಣ ಮಾಡಲು ಬಂದಿಲ್ಲ. ಜನರ ಸೇವೆ ಮಾಡುವ ಹಂಬಲದಿಂದ ಬಂದಿದ್ದೇನೆ.  ನನ್ನನ್ನು ಆಶೀರ್ವದಿಸಿ ಎಂದ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು.

 ಮಂಡ್ಯ :  ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೋಮವಾರ ಉಮೇದುವಾರಿಕೆ ಸಲ್ಲಿಸಿರುವ ವೆಂಕಟರಮಣೇಗೌಡ ಅವರು 410 ಕೋಟಿ ರು. ಮೌಲ್ಯದ ಆಸ್ತಿಗೆ ಒಡೆಯರಾಗಿದ್ದಾರೆ. ಇದರಲ್ಲಿ 146 ಕೋಟಿ ರು. ಆಸ್ತಿಗೆ ಪತ್ನಿ ಕುಸುಮಾ ಒಡತಿಯಾಗಿದ್ದರೆ, ಹಿಂದೂ ಅವಿಭಕ್ತ ಕುಟುಂಬದ ಆಸ್ತಿ 26 ಕೋಟಿ ರು. ಸೇರಿದೆ.

ವೆಂಕಟರಮಣೇಗೌಡರ ಬಳಿ ನಗದು 1,36,14,355 ರು. ಇದೆ. ಚಿನ್ನ ಮತ್ತು ಬೆಳ್ಳಿ ಇದೆ. ಯಾವುದೇ ಕಾರು ಇವರ ಬಳಿ ಇಲ್ಲ. 3 ಟ್ರ್ಯಾಕ್ಟರ್‌ಗಳಿವೆ. 15.50 ಕೋಟಿ ರು. ಸಾಲವನ್ನು ಹೊಂದಿದ್ದಾರೆ. ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಉದ್ಯಮಿಯಾಗಿದ್ದು ಕಾಲ ಕಾಲಕ್ಕೆ ತೆರಿಗೆ ಪಾವತಿಸಿಕೊಂಡು ಬಂದಿದ್ದಾರೆ. ಇವರ ಬಳಿ 29, 94,52,818 ರು. ಚರಾಸ್ತಿ ಹಾಗೂ 237 ಕೋಟಿ ರು. ಮೌಲ್ಯದ ಸ್ಥಿರಾಸ್ಥಿಯನ್ನು ಹೊಂದಿದ್ದಾರೆ.

ಇನ್ನು ಪತ್ನಿ ಕುಸುಮಾ ಅವರ ಬಳಿ 64,94,175 ರು. ನಗದು ಹೊಂದಿದ್ದಾರೆ. ಇವರ ಬಳಿ ಯಾವುದೇ ವಾಹನ ಇಲ್ಲ. 2.30 ಕೋಟಿ ರು. ಮೌಲ್ಯದ 4.2 ಕೆಜಿ ಚಿನ್ನ, 15 ಲಕ್ಷ ರು. ಮೌಲ್ಯದ 71 ಸಿಟಿಎಸ್‌ ವಜ್ರ, 21.50 ಲಕ್ಷ ರು. ಮೌಲ್ಯದ ಬೆಳ್ಳಿ ಇದೆ. ಇವರ ಹೆಸರಿನಲ್ಲಿ ಸಾಲ ಇರುವುದಿಲ್ಲ. 146.99 ಕೋಟಿ ರು. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಕಟರಮಣೇಗೌಡರು 26 ಕೋಟಿ ರು. ಮೌಲ್ಯದ ಹಿಂದೂ ಅವಿಭಕ್ತ ಕುಟುಂಬದ ಆಸ್ತಿ (ಎಚ್‌ಯುಎಫ್‌) ಹೊಂದಿದ್ದಾರೆ.

ರಾಜಕೀಯಕ್ಕೆ ಹಣ ಮಾಡಲು ಬಂದಿಲ್ಲ: ಸ್ಟಾರ್ ಚಂದ್ರು

ಮಂಡ್ಯ: ನಾನು ರಾಜಕೀಯಕ್ಕೆ ಹಣ ಮಾಡಲು ಬಂದಿಲ್ಲ. ಜನರ ಸೇವೆ ಮಾಡುವ ಹಂಬಲದಿಂದ ಬಂದಿದ್ದೇನೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ತಿಳಿಸಿದರು.

ನಗರದ ಶ್ರೀಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ ಬಳಿಕ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ನನ್ನ ತಾಯಿ ಮೇಲಾಣೆ, ಕಾವೇರಿ ತಾಯಿ ಮೇಲಾಣೆ ರಾಜಕೀಯಕ್ಕೆ ಬಂದು ೧೦ ರು. ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ನಾನು ಇಲ್ಲೇ ಹುಟ್ಟಿದ್ದೇನೆ. ಇಲ್ಲೇ ಇರುತ್ತೇನೆ. ನನ್ನ ಗೆಲುವು ರೈತರ ಗೆಲುವು, ಮಂಡ್ಯ ಅಭಿವೃದ್ಧಿಯೇ ನನ್ನ ಗುರಿ. ನಿಮ್ಮಗಳ ಸೇವೆ ಮಾಡಲು ಬಂದಿದ್ದೇನೆ. ನನ್ನನ್ನು ಆಶೀರ್ವದಿಸಿ ಎಂದರು.