ಸಾರಾಂಶ
ಎಚ್.ಡಿ.ಕುಮಾರಸ್ವಾಮಿ ಸಂಸದರಾಗಿ ಆಯ್ಕೆಯಾದರೆ ಕೇಂದ್ರದಲ್ಲಿ ಮಂತ್ರಿಯಾಗಿ ಉನ್ನತ ಸ್ಥಾನ ಪಡೆಯಲಿದ್ದು, ಆನಂತರ ಎಲ್ಲರೂ ಸೇರಿ ರಾಜ್ಯದ ಸಮಗ್ರ ಅಭಿವೃದ್ದಿ ಕೆಲಸ ಮಾಡಬಹುದು
ಕೆ.ಆರ್. ನಗರ : ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ದಿವಾಳಿಯತ್ತ ಸಾಗುತ್ತಿದ್ದು ಅಭಿವೃದ್ದಿ ವಿರೋಧಿಯಾಗಿರುವುದರಿಂದ ಜನರ ಪಾಲಿಗೆ ಇದ್ದು ಇಲ್ಲದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಪಟ್ಟಣದ ಪುರಸಭೆ ಬಯಲು ರಂಗ ಮಂದಿರದ ಆವರಣದಲ್ಲಿ ಗುರುವಾರ ಸಂಜೆ ಮಂಡ್ಯ ಲೋಕಸಭಾ ಕ್ಷೇತ್ರದ ಎನ್.ಡಿಎ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಅವರ ಪರ ಮತಯಾಚನೆ ಮಾಡಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಇಂತಹ ಸರ್ಕಾರವನ್ನು ಅಧಿಕಾರದಲ್ಲಿ ಇರಲು ಬಿಡಬಾರದು ಎಂದರು.
ಎಚ್.ಡಿ.ಕುಮಾರಸ್ವಾಮಿ ಸಂಸದರಾಗಿ ಆಯ್ಕೆಯಾದರೆ ಕೇಂದ್ರದಲ್ಲಿ ಮಂತ್ರಿಯಾಗಿ ಉನ್ನತ ಸ್ಥಾನ ಪಡೆಯಲಿದ್ದು, ಆನಂತರ ಎಲ್ಲರೂ ಸೇರಿ ರಾಜ್ಯದ ಸಮಗ್ರ ಅಭಿವೃದ್ದಿ ಕೆಲಸ ಮಾಡಬಹುದು ಎಂದ ಅವರು ದೇವರು ಮತ್ತು ಜನರ ಆಶೀರ್ವಾದದಿಂದ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಎನ್.ಡಿಎ ಮೈತ್ರಿ ಕೂಟದ ಅಭ್ಯರ್ಥಿಗಳು ವಿಜಯ ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡುತ್ತಿದ್ದು, ಆರ್ಥಿಕ ಸಹಾಯವನ್ನು ಸ್ಥಗಿತ ಮಾಡಿ ಈಗ ಪಂಚ ಗ್ಯಾರಂಟಿ ಕೊಡುತ್ತಿದ್ದು, ಇದು ನಮ್ಮ ಕಾರ್ಯಕ್ರಮಕ್ಕೆ ಸಾಟಿಯೇ ಇಲ್ಲವಾಗಿದ್ದು, ಇದನ್ನು ಅರಿತು ಮತದಾರರು ಮೈತ್ರಿ ಕೂಟದ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎಚ್.ಡಿ. ಕುಮಾರಸ್ವಾಮಿ ಚುನಾವಣೆಗೆ ನಿಂತಿಲ್ಲ ಅದರ ಬದಲು ನಾನೇ ಸ್ಪರ್ಧೆ ಮಾಡಿದ್ದೇನೆ ಎಂದು ತಿಳಿದು ವೀರಶೈವ ಸಮಾಜದ ಪ್ರತಿಯೊಬ್ಬ ಮತಬಾಂಧವರು ಒಂದು ವೋಟು ತಪ್ಪದಂತೆ ನಮ್ಮ ಅಭ್ಯರ್ಥಿಗೆ ಚಲಾವಣೆ ಮಾಡಬೇಕು ಎಂದು ಮನವಿ ಮಾಡಿದರು.
ಅರ್ಕೇಶ್ವರ ದೇವಾಲಯದ ಬಳಿ ಕುಳಿತು ಭಿಕ್ಷೆ ಬೇಡಿ:
ಮಾಜಿ ಸಚಿವ ಸಾ.ರಾ. ಮಹೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬರಗಾಲ ಆವರಿಸಿ ರೈತರಿಗೆ ಮತ್ತು ಜನರಿಗೆ ತೊಂದರೆಯಾಗುತ್ತದೆ, ಹಾಗಾಗಿ ಇದನ್ನು ಅರಿತು ಮತದಾರರು ಲೋಕಸಭಾ ಚುನಾವಣೆಯಲ್ಲಿ ಬುದ್ದಿವಂತಿಕೆಯಿಂದ ಮತ ನೀಡಬೇಕೆಂದು ಹೇಳಿದರು.
ಪಟ್ಟಣದ ಪುರಸಭೆ ವಾಣಿಜ್ಯ ಮಳಿಗೆಗಳ ಮಾಲೀಕರು ಮತ್ತು ಪಾದರಕ್ಷೆ ಮಾಡುವ ಬಡವರಿಂದಲೂ ತಲಾ 3 ರಿಂದ 4 ಲಕ್ಷ ವಸೂಲಿ ಮಾಡಿದ್ದು, ಇದರ ಜತೆಗೆ ಗುತ್ತಿಗೆದಾರರಿಂದಲೂ ಹಣ ಪಡೆಯುತ್ತಿದ್ದು, ಇದರ ಬದಲು ಅರ್ಕೇಶ್ವರ ದೇವಾಲಯದ ಬಳಿ ಕುಳಿತು ಭಿಕ್ಷೆ ಬೇಡಿ ಎಂದು ಪರೋಕ್ಷವಾಗಿ ಶಾಸಕ ಡಿ. ರವಿಶಂಕರ್ ವಿರುದ್ದ ಮಾತಿನ ಪ್ರಹಾರ ನಡೆಸಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಶಾಸಕರಾದ ಜಿ.ಟಿ. ದೇವೇಗೌಡ, ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್, ಸಿ.ಎನ್. ಮಂಜೇಗೌಡ, ಮಾಜಿ ಶಾಸಕರಾದ ಕೆ. ಮಹದೇವ್, ಸಿ.ಎಸ್. ಪುಟ್ಟರಾಜು, ಕೆ.ಟಿ. ಶ್ರೀಕಂಠೇಗೌಡ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶೀ ಚಂದ್ರಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಕುಮಾರ್, ವಕ್ತಾರ ಕೆ.ಎಲ್. ರಮೇಶ್, ಎಂಡಿಎ ಮಾಜಿ ಅಧ್ಯಕ್ಷ ಎಚ್.ಎನ್. ವಿಜಯ್, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್. ಚನ್ನಬಸಪ್ಪ, ಮಾಜಿ ಸದಸ್ಯರಾದ ಅಮಿತ್ ವಿ. ದೇವರಹಟ್ಟಿ, ಸಿ.ಜೆ. ದ್ವಾರಕೀಶ್, ಎಂ.ಟಿ.ಕುಮಾರ್, ಖ್ಯಾತ ಮೂಳೆ ತಜ್ಞ ಮೆಹಬೂಬ್ ಖಾನ್, ಮಾಜಿ ಮೇಯರ್ ಆರ್.ಲಿಂಗಪ್ಪ, ಚಿನ್ನಿರವಿ, ಮೈಸೂರು ಚಾಮರಾಜ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಅಮ್ಮ ಸಂತೋಷ್, ಹುಣಸೂರು ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಾಜ ಒಡೆಯರ್, ನವ ನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ, ಬಿಜೆಪಿ ಮುಖಂಡರಾದ ಹೊಸಹಳ್ಳಿ ವೆಂಕಟೇಶ್, ಮಿರ್ಲೆ ಶ್ರೀನಿವಾಸಗೌಡ, ವರದರಾಜು, ಉಮಾಶಂಕರ್, ಪ್ರಭಾಕರ್ ಜೈನ್, ಪುರಸಭೆ ಮಾಜಿ ಅಧ್ಯಕ್ಷ ವೈ.ಆರ್. ಪ್ರಕಾಶ್, ಸದಸ್ಯರಾದ ಕೆ.ಪಿ. ಪ್ರಭುಶಂಕರ್, ಕೆ.ಎಲ್. ಜಗದೀಶ್, ಉಮೇಶ್, ಸಂತೋಷ್ ಗೌಡ, ತೋಂಟದಾರ್ಯ, ಮುಸ್ಲಿಂ ಮುಖಂಡರಾದ ತನ್ವೀರ್, ಸಾಲಿಗ್ರಾಮ ತನು, ಮುಬಾರಕ್ ಇದ್ದರು.