ಮತಗಳ್ಳತನ ಕುರಿತ ಕಾಂಗ್ರೆಸ್‌ನ ಸುಳ್ಳನ್ನು ಪ್ರಜ್ಞಾವಂತ ಜನ ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕು ಇಲ್ಲ. ತಕ್ಷಣ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಬೆಂಗಳೂರು : ಮತಗಳ್ಳತನ ಕುರಿತ ಕಾಂಗ್ರೆಸ್‌ನ ಸುಳ್ಳನ್ನು ಪ್ರಜ್ಞಾವಂತ ಜನ ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕು ಇಲ್ಲ. ತಕ್ಷಣ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಬುಧವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಸರ್ಕಾರದ ಖಜಾನೆ ಲೂಟಿ, ಹಗಲು ದರೋಡೆ ಮಾಡಿ ಜನರಿಗೆ ದ್ರೋಹ ಮಾಡಿದ ಸರ್ಕಾರ ಇದು. ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕಿಲ್ಲ. ವಿಧಾನಪರಿಷತ್ತಿನ ಈ ಫಲಿತಾಂಶದ ಹಿನ್ನೆಲೆಯಲ್ಲಿ ಈ ಸರ್ಕಾರ ತಕ್ಷಣ ರಾಜೀನಾಮೆ ಕೊಟ್ಟು ಜನಾದೇಶ ಪಡೆಯಲಿ ಎಂದು ಸವಾಲು ಹಾಕಿದರು.
ಇದು ಮತಪತ್ರದ ಮೂಲಕ ನಡೆದ ಚುನಾವಣೆ. ಇವಿಎಂ ಮೂಲಕ ಈ ಚುನಾವಣೆ ನಡೆದಿಲ್ಲ. ಶಿಕ್ಷಕರು, ಪದವೀಧರ ಕ್ಷೇತ್ರಗಳ ಚುನಾವಣೆ. ಆಡಳಿತಾರೂಢ ಪಕ್ಷದ ವಿರುದ್ಧ ಎನ್‌ಡಿಎ ಸ್ಪರ್ಧಿಸಿ ಗೆದ್ದಿದೆ. ಜನರ ಮನಸ್ಸಿನಲ್ಲಿ ಕಾಂಗ್ರೆಸ್ ವಿರುದ್ಧ ಇರುವ ಆಕ್ರೋಶಕ್ಕೆ ಹಿಡಿದ ಒಂದು ಕೈಗನ್ನಡಿ ಎಂದು ಹೇಳಿದರು.
ಆಡಳಿತ ವಿರೋಧಿ ಅಲೆ:
ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗಿದೆ. ಇದು ಆಡಳಿತ ವಿರೋಧಿ ಅಲೆ. ಕೆ.ಎಂ.ಸುರೇಶ್ 23 ಸಾವಿರಕ್ಕೂ ಹೆಚ್ಚು ಮತ, ಸಂಕನೂರು ಅವರು 9 ಸಾವಿರಕ್ಕೂ ಹೆಚ್ಚು ಮತ, ಶಶೀಲ್ ನಮೋಶಿ 3 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ರಂಗನಾಥ್ ಅವರು 908 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜನರ ಮನಸ್ಸಿನಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶವಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ರಾಜ್ಯದ 6 ಕೋಟಿ ಜನ ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ. ಅಭಿವೃದ್ಧಿ ಶೂನ್ಯತೆ ರಾಜ್ಯದಲ್ಲಿದೆ. ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ. ಇದು ಭ್ರಷ್ಟಾಚಾರ, ಹಗರಣಗಳ ಸರಕಾರ ಎಂದು ಯಡಿಯೂರಪ್ಪ ಆರೋಪಿಸಿದರು.
ಬೆಲೆ ಏರಿಕೆ ಮಿತಿ ಮೀರಿದೆ:
ಕೆಪಿಎಸ್‌ಸಿ ಭ್ರಷ್ಟಾಚಾರ, ಬೆಲೆ ಏರಿಕೆ ಮಿತಿ ಮೀರಿದೆ. ಸುಮಾರು 3500 ರೈತರ ಆತ್ಮಹತ್ಯೆ, ಬರಗಾಲ ನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ. ಕಳೆದ 8 ತಿಂಗಳಿನಿಂದ ಅಂಗವಿಕಲರ, ವೃದ್ಧಾಪ್ಯ ವೇತನ ನೀಡದ ಸರ್ಕಾರ ಇದು ಎಂದು ಟೀಕಿಸಿದರು. ಮುಖ್ಯಮಂತ್ರಿಗಳು, ಕಬ್ಬು ಬೆಳೆಗಾರರಿಗೆ ಹಣ ನೀಡಲು ಜೇಬಿನಲ್ಲಿ ದುಡ್ಡಿಲ್ಲ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಹಾಗಿದ್ದರೆ ಜನರು ಕೊಟ್ಟ ತೆರಿಗೆ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು.
- ಬಿಎಸ್‌ವೈ ಹೇಳೋದೇನು?
- ಮೇಲ್ಮನೆ ಚುನಾವಣೆಯ 4 ಸ್ಥಾನ ಎನ್‌ಡಿಎ ಗೆದ್ದಿದೆ
- ಇದು ಸರ್ಕಾರದ ವಿರುದ್ಧದ ಆಕ್ರೋಶಕ್ಕೆ ಕೈಗನ್ನಡಿ
- ಮತಚೋರಿ ಸುಳ್ಳು ಪ್ರಜ್ಞಾವಂತರಿಂದ ತಿರಸ್ಕಾರ:
- ಈ ಸರ್ಕಾರಕ್ಕೆ ಮುಂದುವರಿಯುವ ನೈತಿಕ ಹಕ್ಕಿಲ್ಲ
- ಸರ್ಕಾರ ತಕ್ಷಣ ರಾಜೀನಾಮೆ ನೀಡಬೇಕು: ಆಗ್ರಹ
