ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

| Published : Feb 29 2024, 02:02 AM IST / Updated: Feb 29 2024, 11:01 AM IST

ಸಾರಾಂಶ

ಶಕ್ತಿ ಕೇಂದ್ರ ವಿಧಾನಸೌಧದ ಆವರಣದಲ್ಲೇ ನೂತನ ರಾಜ್ಯಸಭಾ ಸದಸ್ಯ ನಾಸೀರ ಹುಸೇನ್‌ ಅವರ ವಿಜಯೋತ್ಸವದ ಸಂದರ್ಭದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಿದ್ದಾರೆನ್ನಲಾದ ಘೋಷಣೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಶಕ್ತಿ ಕೇಂದ್ರ ವಿಧಾನಸೌಧದ ಆವರಣದಲ್ಲೇ ನೂತನ ರಾಜ್ಯಸಭಾ ಸದಸ್ಯ ನಾಸೀರ ಹುಸೇನ್‌ ಅವರ ವಿಜಯೋತ್ಸವದ ಸಂದರ್ಭದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಿದ್ದಾರೆನ್ನಲಾದ ಘೋಷಣೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು.

ಬೆಂಗಳೂರು, ಬಳ್ಳಾರಿ, ತುಮಕೂರು, ಬೆಳಗಾವಿ, ಶಿವಮೊಗ್ಗ ಸೇರಿ ಕೆಲವೆಡೆ ಪ್ರತಿಭಟನಾಕಾರರು ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ, ಪೊಲೀಸರು ಅವರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು. 

ತುಮಕೂರಿನಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಜಟಾಪಟಿ ನಡೆದು, ಡಿವೈಎಸ್ಪಿ ಚಂದ್ರಶೇಖರ್‌ ಮೂಗಿಗೆ ಗಾಯವಾಗಿದೆ.

ಬೆಳಗಾವಿಯಲ್ಲಿ ಸಿದ್ದರಾಮಯ್ಯ, ಡಿಕೆಶಿ ಹಾಗೂ ನಾಸೀರ್ ಅವರ ಪ್ರತಿಕೃತಿ ದಹಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ರಾಜ್ಯದ ಕೆಲವೆಡೆ ಶ್ರೀರಾಮಸೇನೆ, ಎಬಿವಿಪಿ, ಜೆಡಿಎಸ್‌ ನಿಂದಲೂ ಪ್ರತಿಭಟನೆಗಳು ನಡೆದವು.

ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಚ್‌.ಎಂ.ರಮೇಶ್‌ಗೌಡ ನೇತೃತ್ವದಲ್ಲಿ ಜೆಡಿಎಸ್‌ನಿಂದ ಪ್ರತಿಭಟನೆ ನಡೆಸಿ, ರಾಜ್ಯಸಭಾ ಸ್ಥಾನದಿಂದ ನಾಸಿರ್ ಹುಸೇನ್ ಅವರನ್ನು ವಜಾ ಮಾಡುವಂತೆ ಆಗ್ರಹಿಸಲಾಯಿತು. 

ಪಾಕ್‌ ಪರ ಘೋಷಣೆ ಕೂಗಿದವರನ್ನು ದೇಶದ್ರೋಹಿ ಕಾನೂನಿನಡಿ ಬಂಧಿಸುವಂತೆ ಒತ್ತಾಯಿಸಲಾಯಿತು.

ನಾಸೀರ ಹುಸೇನ್‌ ಅವರನ್ನು ಪಕ್ಷದಿಂದ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿ, ಬಳ್ಳಾರಿಯಲ್ಲಿ ಬಿಜೆಪಿ ಕಾರ್ಯಕರ್ತರು, ನಗರದ ಬುಡಾ ಕಚೇರಿ ಆವರಣದಲ್ಲಿರುವ ಹುಸೇನ್‌ ಅವರ ಕಚೇರಿಗೆ ಮುತ್ತಿಗೆ ಹಾಕಲು ಹಾಗೂ ಕಚೇರಿಯಲ್ಲಿದ್ದ ನಾಮಫಲಕಕ್ಕೆ ಮಸಿ ಬಳಿಯಲು ಯತ್ನಿಸಿದರು.

ತುಮಕೂರಿನಲ್ಲಿ ಸಂಸದ ಜಿ.ಎಸ್. ಬಸವರಾಜು ನೇತೃತ್ವದಲ್ಲಿ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ, ಪೊಲೀಸರ ಜೊತೆ ಪ್ರತಿಭಟನಾಕಾರರು ಘರ್ಷಣೆಗೆ ಇಳಿದರು. 

ಈ ವೇಳೆ, ಡಿವೈಎಸ್ಪಿ ಚಂದ್ರಶೇಖರ್‌ ಮೂಗಿಗೆ ಗಾಯವಾಯಿತು.ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಮಾಜಿ ಸಚಿವ ಈಶ್ವರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ, ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಬಿಡುಗಡೆಗೊಳಿಸಿದರು.

ಹೊಸಪೇಟೆಯ ಪುನೀತ್‌ ರಾಜ್‌ಕುಮಾರ್‌ ವೃತ್ತ, ಗದಗಿನ ಗಾಂಧಿ ವೃತ್ತ, ರಾಣಿಬೆನ್ನೂರಿನಲ್ಲಿ ಬಿಜೆಪಿ ಗ್ರಾಮೀಣ ಘಟಕದಿಂದ ಮಾನವ ಸರಪಳಿ ನಡೆಸಲಾಯಿತು. 

ಧಾರವಾಡದಲ್ಲಿ ‘ಜೈ ಶ್ರೀರಾಮ್‌, ಭಾರತ್‌ ಮಾತಾ ಕಿ ಜೈ’ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು, ನಾಸೀರ ಹುಸೇನ್‌ ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡಿದರು. 

ಬಳಿಕ, ನಾಸೀರ ಹುಸೇನ್‌, ಸಿಎಂ, ಡಿಸಿಎಂ ಡಿ.ಕೆ.ಶಿವಕುಮಾರ ಪ್ರತಿಕೃತಿ ದಹಿಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿಯ ಆರ್‌.ಪಿ.ಡಿ. ವೃತ್ತ, ಉಡುಪಿಯ ಬ್ರಹ್ಮಗಿರಿ ಸರ್ಕಲ್‌ಗಳಲ್ಲಿ ರಸ್ತೆ ತಡೆ ನಡೆಸಲಾಯಿತು.

ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಪಾಕ್‌ ಪರ ಘೋಷಣೆ ಕೂಗಿದವರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಕೊಡುವಂತೆ ಆಗ್ರಹಿಸಿ, ಕೆಪಿಸಿಸಿ ಕಚೇರಿ ಹಾಗೂ ರಾಜ್ಯಸಭೆ ನೂತನ ಸದಸ್ಯ ಸೈಯದ್‌ ನಾಸಿರ್‌ ಹುಸೇನ್‌ ಗೆ ಪತ್ರ ಬರೆದು, ಅಂಚೆ ಇಲಾಖೆ ಮೂಲಕ ರವಾನಿಸಿದರು. 

ಅರಸೀಕೆರೆಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ನಾಸಿರ್‌ ಅವರ ಆಯ್ಕೆ ರದ್ದುಗೊಳಿಸುವಂತೆ ಆಗ್ರಹಿಸಿ ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಇದೇ ವೇಳೆ, ಧಾರವಾಡ, ಬೆಳಗಾವಿ, ಕೊಪ್ಪಳಗಳಲ್ಲಿ ಎಬಿವಿಪಿ, ಶ್ರೀರಾಮಸೇನೆಗಳಿಂದಲೂ ಪ್ರತಿಭಟನೆಗಳು ನಡೆದವು.