ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಸ್ಟಿಂಗ್‌ ಆಪರೇಷನ್‌ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ಎಸ್‌ಐಟಿ ರಚನೆ ಸೇರಿ ಉನ್ನತ ಮಟ್ಟದ ತನಿಖೆ ನಡೆಸುವ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ವಿವೇಚನೆಗೆ ಬಿಡಲು ತೀರ್ಮಾನಿಸಲಾಗಿದೆ.

ಬೆಂಗಳೂರು : ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಸ್ಟಿಂಗ್‌ ಆಪರೇಷನ್‌ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ಎಸ್‌ಐಟಿ ರಚನೆ ಸೇರಿ ಉನ್ನತ ಮಟ್ಟದ ತನಿಖೆ ನಡೆಸುವ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ವಿವೇಚನೆಗೆ ಬಿಡಲು ತೀರ್ಮಾನಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಗುರಿಯಾಗಿಸಿಕೊಂಡು ಮಾಡಲಾಗಿದೆ ಎನ್ನಲಾದ ಸ್ಟಿಂಗ್‌ ಆಪರೇಷನ್‌ ಬಗ್ಗೆ ಚರ್ಚಿಸಲಾಯಿತು.

ಈ ವೇಳೆ ಸದ್ಯಕ್ಕೆ ಎಸ್‌ಐಟಿ ರಚನೆಯಂಥ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಪೊಲೀಸ್‌ ತನಿಖೆಯನ್ನೇ ಮುಂದುವರೆಸಲು ಸಲಹೆ ಕೇಳಿ ಬಂದಿದೆ. ಇದೇ ವೇಳೆ ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸ್ಟಿಗ್‌ ಬಗ್ಗೆ ಚರ್ಚೆಯೇ ಆಗಿಲ್ಲ-ಪರಂ:

ಆದರೆ, ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಟಿಂಗ್ ಆಪರೇಷನ್‌ ಬಗ್ಗೆ ಚರ್ಚೆಯೇ ಆಗಿಲ್ಲ ಎಂದಿದ್ದಾರೆ.

ಡಾ.ಜಿ.ಪರಮೇಶ್ವರ್ ಅವರು ಮಾತನಾಡಿ, ‘ಎಸ್‌ಐಟಿ ರಚನೆ ಬೇಡ ಅಥವಾ ಬೇಕು ಎಂದು ಚರ್ಚಿಸಲು ಸಂಪುಟದಲ್ಲಿ ವಿಷಯವೇ ಪ್ರಸ್ತಾಪವಾಗಿಲ್ಲ. ಯಾವುದೇ ರೀತಿಯಲ್ಲೂ ಈ ವಿಚಾರ ಚರ್ಚೆಗೆ ಬಂದಿಲ್ಲ’ ಎಂದು ಸ್ಪಷ್ಟನೆ ನೀಡಿದರು.

‘ಸ್ಟಿಂಗ್‌ ಆಪರೇಷನ್‌ ಕುರಿತು ಚರ್ಚಿಸಲು ನಮ್ಮದು ಕೆಲಸವಿಲ್ಲದ ಸಚಿವ ಸಂಪುಟವಲ್ಲ

ಇನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ, ‘ಸ್ಟಿಂಗ್‌ ಆಪರೇಷನ್‌ ಕುರಿತು ಚರ್ಚಿಸಲು ನಮ್ಮದು ಕೆಲಸವಿಲ್ಲದ ಸಚಿವ ಸಂಪುಟವಲ್ಲ. ಈಗಾಗಲೇ ನಡೆಯುತ್ತಿರುವ ತನಿಖೆ ಮುಂದುವರಿಯಲಿದ್ದು, ಸಂಗ್ರಹಿಸಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.