ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಪಿಯುಸಿ ಫಲಿತಾಂಶದಲ್ಲಿ ಕಲಬುರಗಿ ಕಳಪೆ ಫಲಿತಾಂಶ ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬೇರೆಯವರಿಗೆ ಜ್ಞಾನ ಭೋಧನೆ ಮಾಡುವುದನ್ನು ಬಿಡಬೇಕು ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.ಪಿಯುಸಿ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆಯು ಕೊನೆಯ ಎರಡನೇ ಸಾಲಿನಲ್ಲಿ ಬಂದು ನಿಂತಿದೆ. ಅಲ್ಲಿನ ವಿದ್ಯಾರ್ಥಿಗಳ ಹಾಗೂ ಗುಣಮಟ್ಟದ ಶಿಕ್ಷಣದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಗಮನ ಕೊಡಬೇಕು. ಅವರು ರಾಜ್ಯದ ಎಲ್ಲ ವಿಷಯಗಳಲ್ಲಿಯೂ ಸಹ ಮೂಗು ತೂರಿಸುವುದು, ನಾನೇ ಜ್ಞಾನಿ ಎಂಬುದಾಗಿ ಬೀಗುತ್ತಾರೆ. ಹೀಗಾಗಿ ತಮ್ಮ ಜ್ಞಾನ-ಭೋದನೆ ಮಾಡುವುದನ್ನು ಬಿಟ್ಟು ಜಿಲ್ಲೆಯ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶದ ಬಗ್ಗೆ ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜಿಲ್ಲೆಯ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿನ ವಿದ್ಯಾರ್ಥಿಗಳ ಫಲಿತಾಂಶವು ಅತ್ಯಂತ ಈ ಹೀನಾಯ ಪರಿಸ್ಥಿತಿಗೆ ತಲುಪಿದೆ. ಇದು ಕಲಬುರಗಿ ಜಿಲ್ಲೆಯ ಶೈಕ್ಷಣಿಕ ರಂಗದ ವ್ಯವಸ್ಥೆಯ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಆ ಭಾಗದ ಜನರಿಗೆ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಮನವರಿಕೆ ಮತ್ತು ವಿಶ್ವಾಸಾರ್ಹ ವಿವರಣೆಯನ್ನು ನೀಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಮಾನವ ಸಂಪನ್ಮೂಲ ಸೇರಿ ಎಲ್ಲ ವಿಷಯಗಳ ಬಗ್ಗೆ ನೇರ ಹೊಣೆ ಹೊರುತ್ತಾರೆ. ಪಿಯು ಫಲಿತಾಂಶ ಕಳಪೆಯಾಗಿರುವುದರಿಂದ ಅವರೇ ನೇರ ಹೊಣೆ ಹೊರಬೇಕು ಎಂದು ಹೇಳಿದ್ದಾರೆ.ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಫಲಿತಾಂಶ ಹೆಚ್ಚಿಸಲು ಶಾಲಾ ಶಿಕ್ಷಣ ಇಲಾಖೆಯಿಂದ 2024ರ ಆಗಸ್ಟ್ ತಿಂಗಳಲ್ಲಿ 20 ಅಂಶಗಳ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸರ್ಕಾರದ ಈ 20 ಅಂಶಗಳ ಮಾರ್ಗಸೂಚಿಗಳನ್ನು ಮೇಲ್ವಿಚಾರಣೆ ಜಾರಿಮಾಡಲು ತಲೆಕೆಡಿಸಿಕೊಂಡಿಲ್ಲ, ಅವಮಾನಕರ ಫಲಿತಾಂಶ ಜಿಲ್ಲೆಗೆ ಬಂದಿದ್ದರೂ, ಇತರರಿಗೆ ಜ್ಞಾನವನ್ನು ನೀಡುವಲ್ಲಿ ನಿರತರಾಗಿರುವುದು ವಿಪರ್ಯಾಸ ಎಂದು ಪ್ರಕಟಣೆ ಮೂಲಕ ವ್ಯಂಗ್ಯವಾಡಿದ್ದಾರೆ.