ಶಿಕ್ಷಕರ ಶಿಸ್ತುಬದ್ಧ ನೋಂದಣಿಗೆ ಬಿಗಿ ಕ್ರಮ

| Published : Oct 25 2023, 01:15 AM IST

ಶಿಕ್ಷಕರ ಶಿಸ್ತುಬದ್ಧ ನೋಂದಣಿಗೆ ಬಿಗಿ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರ ಶಿಸ್ತುಬದ್ಧ ನೋಂದಣಿಗೆ ಬಿಗಿ ಕ್ರಮ, ಜೂನ್‌ನಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ, ಇಲಾಖೆ ಮುಖಾಂತರ ನೋಂದಣಿ ನಡೆಯುವಂತೆ ನಿಯಮಾವಳಿ, ಕಳೆದ ಬಾರಿಗಿಂತ ಶಿಕ್ಷಕ ಮತದಾರರು ಕಡಿಮೆಯಾಗುವ ಸಾಧ್ಯತೆ
- ಜೂನ್‌ನಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ - ಇಲಾಖೆ ಮುಖಾಂತರ ನೋಂದಣಿ ನಡೆಯುವಂತೆ ನಿಯಮಾವಳಿ - ಕಳೆದ ಬಾರಿಗಿಂತ ಶಿಕ್ಷಕ ಮತದಾರರು ಕಡಿಮೆಯಾಗುವ ಸಾಧ್ಯತೆ ಮಂಡ್ಯ ಮಂಜುನಾಥ ಕನ್ನಡಪ್ರಭ ವಾರ್ತೆ ಮಂಡ್ಯ ಮುಂದಿನ ವರ್ಷ ಜೂನ್ ತಿಂಗಳಿನಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ ನಡೆಯಲಿದ್ದು, ಶಿಕ್ಷಕರ ಕ್ರಮಬದ್ಧ, ಶಿಸ್ತುಬದ್ಧ ನೋಂದಣಿಗೆ ಚುನಾವಣಾ ಆಯೋಗ ಬಿಗಿ ಕ್ರಮಗಳನ್ನು ಅನುಷ್ಠಾನಗೊಳಿಸಿರುವುದು ಈ ಬಾರಿ ಚುನಾವಣೆಯ ವಿಶೇಷವಾಗಿದೆ. ಅರ್ಹ ಶಿಕ್ಷಕರು ಮಾತ್ರ ಚುನಾವಣೆಯಲ್ಲಿ ಭಾಗವಹಿಸುವಂತೆ ಮಾಡುವುದಕ್ಕೆ ಹಲವು ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಚುನಾವಣಾ ಸ್ಪರ್ಧಿಸಲಿರುವ ಅಭ್ಯರ್ಥಿಗಳು ಶಿಕ್ಷಕರ ನೋಂದಣಿಗೆ ಕಸರತ್ತು ನಡೆಸುವುದಕ್ಕೆ ಅವಕಾಶವನ್ನೇ ನೀಡದೆ ಇಲಾಖೆ ಮುಖಾಂತರವೇ ನೋಂದಣಿ ಪ್ರಕ್ರಿಯೆ ನಡೆಯುವಂತೆ ಕ್ರಮ ವಹಿಸಲಾಗಿದೆ. ಮತದಾರರು ಯಾರು? ಪ್ರೌಢಶಾಲೆ ಹಾಗೂ ಪ್ರೌಢಶಾಲೆ ಮೇಲ್ಪಟ್ಟ ಪದವಿ ಪೂರ್ವ, ಪದವಿ ಕಾಲೇಜುಗಳು, ಎಂಜಿನಿಯರಿಂಗ್, ಮೆಡಿಕಲ್, ಪಾಲಿಟೆಕ್ನಿಕ್, ಜೆಓಸಿ, ನರ್ಸಿಂಗ್, ಐಟಿಐ, ಸ್ನಾತಕೋತ್ತರ ಪದವಿ ಕಾಲೇಜುಗಳು ಸೇರಿದಂತೆ ಇನ್ನಿತರ ಕಾಲೇಜುಗಳಲ್ಲಿ ಮೂರು ವರ್ಷ ಬೋಧನಾ ವೃತ್ತಿಯಲ್ಲಿ ನಿರತರಾಗಿರುವ ಶಿಕ್ಷಕರು, ಉಪನ್ಯಾಸಕರು ಮತದಾನ ಮಾಡುವುದಕ್ಕೆ ಅರ್ಹರಾಗಿದ್ದಾರೆ. ಹಿಂದೆಲ್ಲಾ ಶಿಕ್ಷಕರ ನೋಂದಣಿ ಈ ಬಾರಿಯಷ್ಟು ಕಠಿಣವಾಗಿರಲಿಲ್ಲ. ಇದರ ಪರಿಣಾಮ ಶಿಕ್ಷಕರ ಕ್ರಮಬದ್ಧ ನೋಂದಣಿ ಸಾಧ್ಯವಾಗುತ್ತಿರಲಿಲ್ಲ. ಪದವಿ ಮುಗಿಸಿದವರು ಬೋಧನೆಯಲ್ಲಿ ತೊಡಗಿಲ್ಲದಿದ್ದರೂ ಯಾವುದಾದರೊಂದು ಶಿಕ್ಷಣ ಸಂಸ್ಥೆಯಲ್ಲಿ ಬೋಧನೆ ಮಾಡುತ್ತಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದರು. ಒಂದು ವರ್ಷ, ಎರಡು ವರ್ಷ ಬೋಧನೆಯಲ್ಲಿ ತೊಡಗಿದ್ದವರೂ ನೋಂದಣಿ ಮಾಡಿಸಿಕೊಂಡು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಇಂತಹ ಸಂದರ್ಭಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಶಿಕ್ಷಕರ ನೋಂದಣಿಗೆ ತೀವ್ರ ಕಸರತ್ತು ನಡೆಸುತ್ತಿದ್ದರು. ತಮ್ಮ ಬೆಂಬಲಿಗರ ತಂಡಗಳನ್ನು ರಚಿಸಿ ನಾಲ್ಕು ಜಿಲ್ಲೆಗಳಲ್ಲಿರುವ ಶಿಕಕ್ಷಕರ ನೋಂದಣಿ ಅರ್ಜಿಗಳ ಬಂಡಲ್‌ಗಳನ್ನು ತುಂಬಿಕೊಂಡು ತಂದು ನೋಂದಣಿ ಮಾಡಿಸುತ್ತಿದ್ದರು. ಇದರಿಂದ ನೋಂದಣಿಯನ್ನು ಕ್ರಮಬದ್ಧಗೊಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಈ ಸಾಲಿನಿಂದಲೇ ಜಾರಿಗೊಳಿಸಿದೆ. ನೋಂದಣಿ ಬಿಗಿಗೊಳಿಸಿದ ಆಯೋಗ: ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮತದಾನ ಮಾಡುವ ಶಿಕ್ಷಕರು ಮೂರು ವರ್ಷಗಳ ಕಾಲ ಬೋಧನಾ ವೃತ್ತಿಯಲ್ಲಿ ತೊಡಗಿರಬೇಕು. ಕ್ಷೇತ್ರ ವ್ಯಾಪ್ತಿಯ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ವೃತ್ತಿಯಲ್ಲಿ ನಿರತರಾಗಿರುವ ಶಿಕ್ಷಕರು ತಮ್ಮ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಂದ ಸೇವೆ ಸಲ್ಲಿಸಿರುವ ಕುರಿತು ಅರ್ಜಿಯೊಂದಿಗೆ ಪ್ರಮಾಣಪತ್ರ ಸಲ್ಲಿಸಲೇಬೇಕು. ಬೋಧನಾ ವೃತ್ತಿಯಲ್ಲಿ ನಿರತರಾಗಿರದಿದ್ದರೆ ಅಂತಹ ಶಿಕ್ಷಕರು ಕೊನೆಯದಾಗಿ ಸೇವೆ ಸಲ್ಲಿಸಿದ ಸಂಸ್ಥೆಯ ಮುಖ್ಯಸ್ಥರಿಂದಲೇ ಸಹಿ ಮಾಡಿಸಬೇಕೆಂಬುದನ್ನು ಕಡ್ಡಾಯಗೊಳಿಸಲಾಗಿದೆ. ಖುದ್ದು ಅಥವಾ ಅಂಚೆ ಮೂಲಕ ಒಟ್ಟಾಗಿ ಅರ್ಜಿ ಸಲ್ಲಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ, ಸಂಸ್ಥೆಯ ಮುಖ್ಯಸ್ಥರು ಅವರ ಸಿಬ್ಬಂದಿಯ ಎಲ್ಲ ಅರ್ಜಿಗಳನ್ನು ಒಟ್ಟಿಗೆ ಕಳುಹಿಸುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಒಂದೇ ಕುಟುಂಬದ ಇತರೆ ಸದಸ್ಯರ ಅರ್ಜಿಗಳನ್ನು ಕುಟುಂಬದ ಒಬ್ಬರೇ ಸಲ್ಲಿಸಲು ಅವಕಾಶ ನೀಡಿದ್ದರೂ ಪ್ರತಿ ಸದಸ್ಯರು ಪ್ರತ್ಯೇಕವಾಗಿ ಪ್ರಮಾಣಪತ್ರ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ. ಅರ್ಜಿಗೆ ನಿಗದಿತ ನಮೂನೆ: ದಕ್ಷಿಣ ಶಿಕ್ಷಕರ ಮತಕ್ಷೇತ್ರದ ಮತ ಪಟ್ಟಿಯು ಹೊಸದಾಗಿ ಸಿದ್ಧ ಪಡಿಸುತ್ತಿರುವುದರಿಂದ ನಮೂನೆ-೧೯ ಎಂಬ ಹೊಸ ಮಾದರಿಯ ನಮೂನೆಯನ್ನು ಆಯೋಗ ನೀಡಿದೆ. ಈ ಹಿಂದಿನ ಮತದಾರರ ಪಟ್ಟಿಯಲ್ಲಿರುವ ಮತದಾರರೂ ಸಹ ನಮೂನೆ-೧೯ರಲ್ಲೇ ಹೊಸದಾಗಿ ಅರ್ಜಿ ಸಲ್ಲಿಸಬೇಕಿರುತ್ತದೆ. ಹಿಂದಿನ ಮತದಾರರ ಪಟ್ಟಿಯಲ್ಲಿದ್ದ ಶಿಕ್ಷಕರು ಕಳೆದ ಬಾರಿ ಸಲ್ಲಿಸಿದ್ದ ಅರ್ಜಿ ನಮೂನೆಯಲ್ಲಿಯೇ ಈ ಬಾರಿಯೂ ನೋಂದಣಿಗೆ ಅರ್ಜಿ ಸಲ್ಲಿಸಿದ್ದು, ಅವು ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್ ಅವರಿಂದ ತಿರಸ್ಕೃತಗೊಂಡಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ಮತದಾರರ ಸಂಖ್ಯೆ ಕ್ಷೀಣಿಸುವ ಸಾಧ್ಯತೆ: ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತಿರುವುದರಿಂದ ಈ ಸಾಲಿನಲ್ಲಿ ಕ್ಷೇತ್ರ ವ್ಯಾಪ್ತಿಯೊಳಗೆ ಮತದಾರರ ಸಂಖ್ಯೆ ಕ್ಷೀಣಿಸುವ ಸಾಧ್ಯತೆಗಳಿವೆ. ಶಿಕ್ಷಣ ಸಂಸ್ಥೆಗಳಲ್ಲಿ ಮೂರು ವರ್ಷ ಬೋಧನಾ ವೃತ್ತಿಯಲ್ಲಿ ತೊಡಗಿರುವವರಿಗೆ ಮಾತ್ರ ನೋಂದಣಿಗೆ ಅವಕಾಶ ಮತ್ತು ಮೂರು ವರ್ಷ ವೃತ್ತಿಯಲ್ಲಿ ನಿರತರಾಗಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸುವುದನ್ನು ಕಡ್ಡಾಯಗೊಳಿಸಿರುವುದರಿಂದ ಅನ್ಯ ಶಿಕ್ಷಕರು ನೋಂದಣಿಯಿಂದ ಹೊರಗುಳಿಯುತ್ತಾರೆ. ಹೀಗಾಗಿ ಮತದಾರರ ಸಂಖ್ಯೆ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ. ಶಿಕ್ಷಕರ ನೋಂದಣಿಯಲ್ಲಿ ಏನೇ ವ್ಯತ್ಯಾಸಗಳು, ಅಕ್ರಮ ನಡೆದಿರುವುದು ಕಂಡುಬಂದರೆ ಆಯಾ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕರು, ಪ್ರಾಂಶುಪಾಲರನ್ನೇ ಹೊಣೆಗಾರರನ್ನಾಗಿ ಮಾಡುವುದರಿಂದ ಅರ್ಹರಲ್ಲದ ಶಿಕ್ಷಕರು ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಗಳು ತೀರಾ ಕ್ಷೀಣಿಸಿವೆ. ಟಿಕೆಟ್ ಆಕಾಂಕ್ಷಿಗಳಿಂದ ಪರಿಚಯಾತ್ಮಕ ಭೇಟಿ: ಪ್ರತಿ ಚುನಾವಣೆಯಲ್ಲೂ ಶಿಕ್ಷಕರ ನೋಂದಣಿಗೆ ಭಾರೀ ಕಸರತ್ತು ನಡೆಸುತ್ತಿದ್ದ ವಿವಿಧ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳಿಗೆ ಈ ಬಾರಿ ಬಿಗ್ ರಿಲೀಫ್ ಸಿಕ್ಕಿದೆ. ಅವರು ಶಿಕ್ಷಕರನ್ನು ಪರಿಚಯಾತ್ಮಕವಾಗಿ ಭೇಟಿಯಾಗಬಹುದೇ ವಿನಃ ನೋಂದಣಿ ಮಾಡಿಸುವ ರಿಸ್ಕ್ ತೆಗೆದುಕೊಳ್ಳಬೇಕಿಲ್ಲ. ಚುನಾವಣೆಗೆ ಸ್ಪರ್ಧಿಸಬಯಸುವ ಅಭ್ಯರ್ಥಿಗಳು ಮತದಾನಕ್ಕೆ ಅರ್ಹರಾಗಿರುವ ಎಲ್ಲ ಶಿಕ್ಷಕರನ್ನು ಭೇಟಿಯಾಗುವುದಕ್ಕೆ ಅವಕಾಶಗಳಿವೆ. ಪರಿಚಯಾತ್ಮಕ ಭೇಟಿಯೊಂದಿಗೆ ಚುನಾವಣಾ ಪ್ರಚಾರ ಮಾಡಿಕೊಂಡು ಬರಬಹುದಾಗಿದೆ. --------------- ಅಖಾಡದೊಳಗೆ ಕೆ.ಟಿ.ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಈ.ಸಿ.ನಿಂಗರಾಜ್‌ಗೌಡ ೨೦೨೪ರ ಜೂನ್ ತಿಂಗಳಲ್ಲಿ ನಡೆಯಲಿರುವ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ವಿವಿಧ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಈಗಿನಿಂದಲೇ ಅಖಾಡ ಪ್ರವೇಶಿಸಿ ಮತಬೇಟೆಯಲ್ಲಿ ತೊಡಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದವರಲ್ಲಿ ಕೆಲವು ಬದಲಾವಣೆಗಳಾಗಿವೆ. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸ್ಪರ್ಧಿಸುತ್ತಾ ನಿರಂತರ ಗೆಲುವಿನೊಂದಿಗೆ ವಿರಾಜಮಾನರಾಗಿರುವ ಮರಿತಿಬ್ಬೇಗೌಡ ಈ ಬಾರಿಯೂ ಅಖಾಡದಲ್ಲಿದ್ದಾರೆ. ಇದುವರೆಗೆ ಜೆಡಿಎಸ್ ಪಕ್ಷವನ್ನು ಪ್ರತಿನಿಧಿಸುತ್ತಾ ಬಂದಿದ್ದ ಅವರು ಈ ಸಾಲಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಲು ಸಜ್ಜಾಗುತ್ತಿದ್ದಾರೆ. ಮರಿತಿಬ್ಬೇಗೌಡರ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಈ ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಕೆ.ಟಿ. ಶ್ರೀಕಂಠೇಗೌಡರು ಪಾದಾರ್ಪಣೆ ಮಾಡಿದ್ದಾರೆ. ದಕ್ಷಿಣ ಪದವೀಧರರ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದ ಕೆ.ಟಿ. ಶ್ರೀಕಂಠೇಗೌಡರು ಈ ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಉತ್ತಮ ವಾಗ್ಮಿಯಾಗಿ, ವಿಧಾನ ಪರಿಷತ್‌ನಿಂದ ಉತ್ತಮ ಸಂಸದೀಯ ಪಟು ಎಂಬ ಪ್ರಶಸ್ತಿಗೆ ಪಾತ್ರರಾಗಿರುವ ಕೆ.ಟಿ. ಶ್ರೀಕಂಠೇಗೌಡರು ಮೊದಲ ಬಾರಿಗೆ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗುವ ಆಕಾಂಕ್ಷೆಯೊಂದಿಗೆ ಮುನ್ನಡೆದಿದ್ದಾರೆ. ಕಾಂಗ್ರೆಸ್‌ನಿಂದ ಮರಿತಿಬ್ಬೇಗೌಡ ಹಾಗೂ ಜೆಡಿಎಸ್‌ನಿಂದ ಕೆ.ಟಿ.ಶ್ರೀಕಂಠೇಗೌಡರು ಅಭ್ಯರ್ಥಿಯಾಗುವುದು ಬಹುತೇಕ ನಿಶ್ಚಿತವಾಗಿದೆ. ಆದರೆ, ಭಾರತೀಯ ಜನತಾ ಪಕ್ಷದಿಂದ ಅಭ್ಯರ್ಥಿ ನಿಗದಿಯಾಗಿಲ್ಲ. ಪಕ್ಷದೊಳಗೆ ಈ.ಸಿ.ನಿಂಗರಾಜ್‌ಗೌಡ ಅವರು ದಕ್ಷಿಣ ಶಿಕ್ಷಕರ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ದಕ್ಷಿಣ ಪದವೀಧರ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಈ.ಸಿ.ನಿಂಗರಾಜ್‌ಗೌಡರಿಗೆ ಕೊನೇ ಘಳಿಗೆಯಲ್ಲಿ ಟಿಕೆಟ್ ಕೈತಪ್ಪಿತ್ತು. ಮೈ.ವಿ.ರವಿಶಂಕರ್‌ಗೆ ಕ್ಷೇತ್ರ ಬಿಟ್ಟುಕೊಟ್ಟು ಅವರ ಪರವಾಗಿ ಚುನಾವಣಾ ಕೆಲಸ ಮಾಡಿದ್ದರು. ಈಗ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಈ.ಸಿ.ನಿಂಗರಾಜ್‌ಗೌಡ ಅವರು ಸ್ಪರ್ಧೆ ಬಯಸಿದ್ದಾರೆ. ಈ ಬಾರಿ ಪಕ್ಷ ಟಿಕೆಟ್ ನೀಡುವ ವಿಶ್ವಾಸದೊಂದಿಗೆ ಶಿಕ್ಷಕರನ್ನು ಭೇಟಿಯಾಗುತ್ತಾ ಪ್ರಚಾರದಲ್ಲಿ ನಿರತರಾಗಿದ್ದಾರೆ. (ಮರಿತಿಬ್ಬೇಗೌಡ, ಈ.ಸಿ.ನಿಂಗರಾಜ್‌ಗೌಡ) ಅವರ ಹೆಸರಿನಲ್ಲೇ ಫೋಟೋ ಇದೆ.