ಸುಮಲತಾ ರಾಜಕೀಯ ನಡೆ ಕುತೂಹಲ : ಏ.3ರಂದು ನಿರ್ಧಾರ

| Published : Mar 31 2024, 02:04 AM IST / Updated: Mar 31 2024, 04:24 AM IST

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸಂಸದೆ ಸುಮಲತಾ ಅಂಬರೀಷ್‌ ತಮ್ಮ ರಾಜಕೀಯ ಭವಿಷ್ಯದ ಕುರಿತು ಏ.3ರಂದು ಅಂತಿಮ ತೀರ್ಮಾನ ಮಾಡಲಿದ್ದಾರೆ.

 ಬೆಂಗಳೂರು :  ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸಂಸದೆ ಸುಮಲತಾ ಅಂಬರೀಷ್‌ ತಮ್ಮ ರಾಜಕೀಯ ಭವಿಷ್ಯದ ಕುರಿತು ಏ.3ರಂದು ಅಂತಿಮ ತೀರ್ಮಾನ ಮಾಡಲಿದ್ದಾರೆ. ಇದೇ ವೇಳೆ ಮಂಡ್ಯದ ಜನತೆಯನ್ನುದ್ದೇಶಿಸಿ ಮಾತನಾಡುವಾಗ ಅವರು ಭಾವುಕರಾದ ಪ್ರಸಂಗವೂ ನಡೆಯಿತು.

ಮಂಡ್ಯ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಟಿಕೆಟ್‌ ಘೋಷಣೆಯಾದ ಬೆನ್ನಲ್ಲೇ ಸುಮಲತಾ ಶನಿವಾರ ನಗರದ ಜೆ.ಪಿ.ನಗರದಲ್ಲಿನ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದರು. ಮುಂದಿನ ರಾಜಕೀಯ ನಡೆಯ ಕುರಿತು ಚರ್ಚಿಸಲು ಮಂಡ್ಯದ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿದರು. ಸಭೆಯಲ್ಲಿ 500ಕ್ಕೂ ಹೆಚ್ಚು ಬೆಂಬಲಿಗರು ಭಾಗವಹಿಸಿದ್ದರು.

ಬಿಜೆಪಿಯಿಂದ ಟಿಕೆಟ್‌ ಸಿಗದ ಕಾರಣಕ್ಕಾಗಿ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆಂಬಲಿಗರು ಮತ್ತೊಮ್ಮೆ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂದು ಆಗ್ರಹಿಸಿದರು. ತಕ್ಷಣವೇ ಈ ಬಗ್ಗೆ ಘೋಷಣೆ ಮಾಡಬೇಕು ಎಂದು ಕೆಲ ಸಮಯ ಪಟ್ಟು ಹಿಡಿದರು. ಈ ವೇಳೆ ಬೆಂಬಲಿಗರನ್ನು ಸಮಾಧಾನ ಮಾಡಿ ಮಾತನಾಡಿದ ಸಂಸದೆ, ಮಂಡ್ಯ ಘನತೆಯನ್ನು ಸಂಸತ್‌ನಲ್ಲಿಯೂ ಎತ್ತಿ ಹಿಡಿದಿದ್ದೇನೆ. ಇದ್ದರೂ-ಬಿದ್ದರೂ, ಗೆದ್ದರೂ-ಸೋತರೂ ಮಂಡ್ಯ ಬಿಡುವುದಿಲ್ಲ. ಮಂಡ್ಯ ಎಂದರೆ ನಮಗೆ ಪ್ರೀತಿ, ಭಾವನೆ ಎಲ್ಲವೂ ಎಂದು ಭಾವುಕರಾದರು.

ಮಂಡ್ಯದಲ್ಲಿಯೇ ಏ.3ರಂದು ತೀರ್ಮಾನ:

ಬಿಜೆಪಿಯಂತೆ ಕಾಂಗ್ರೆಸ್‌ನಿಂದಲೂ ಪಕ್ಷ ಸೇರ್ಪಡೆಗೆ ಆಹ್ವಾನ ಬಂದಿರುವುದು ಸತ್ಯ. ಆದರೆ, ನನ್ನ ತೀರ್ಮಾನ ಆ ಪಕ್ಷಕ್ಕೋ, ಈ ಪಕ್ಷಕ್ಕೋ ಎಂಬುದನ್ನು ನೋಡಿಕೊಂಡು ಮಾಡುವುದಿಲ್ಲ. ಮಂಡ್ಯದ ಜನತೆ ಹಿತದೃಷ್ಟಿಯಿಂದ ತೀರ್ಮಾನ ಮಾಡುತ್ತೇನೆ. ಏ.3ರಂದು ಮಂಡ್ಯದಲ್ಲಿಯೇ ಅಭಿಮಾನಿಗಳ ಸಮ್ಮುಖದಲ್ಲಿ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬಂದು ಭೇಟಿಯಾಗಿದ್ದು, ಉನ್ನತಮಟ್ಟದ ಸ್ಥಾನಮಾನ ನೀಡುವ ಲೆಕ್ಕಾಚಾರ ಹೈಕಮಾಂಡ್‌ಗೆ ಇದೆ. ಎಲ್ಲವನ್ನೂ ನಾವು ನೋಡಿಕೊಳ್ಳುತ್ತೇವೆ ಎಂಬ ಆಶ್ವಾಸನೆಯೊಂದಿಗೆ ಬಿಜೆಪಿ ಸೇರ್ಪಡೆಗೆ ಆಹ್ವಾನ ನೀಡಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಹ ಇದೇ ಮಾತನ್ನು ಹೇಳಿದ್ದರು. ಆಗ ನನಗೆ ಸ್ಥಾನಮಾನ ಸಿಗಲಿದೆ, ಆದರೆ ನನ್ನನ್ನು ನಂಬಿದ ಕಾರ್ಯಕರ್ತರ ಭವಿಷ್ಯವೇನು ಎಂದು ಕೇಳಿದೆ. ನಂಬಿದವರ ಕೈಬಿಡಬಾರದು ಎನ್ನುವುದಕ್ಕಾಗಿ ಸಭೆ ಕರೆದು ಸಮಾಲೋಚನೆ ನಡೆಸಿದ್ದೇನೆ. ಮಂಡ್ಯದಲ್ಲಿಯೇ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳಿದರು. 

ನುಡಿದಂತೆ ನಡೆದಿದ್ದೇನೆ:  ರಾಜಕೀಯ ಅನುಭವ ಇಲ್ಲದ ಸಮಯದಲ್ಲಿ ಜನರು ಬಂದು ನನಗೆ ಆಶೀರ್ವಾದ ಮಾಡಿದರು. ಹಿಂದಿನ ಚುನಾವಣೆಯಲ್ಲಿ ಯಾರೂ ದೊಡ್ಡ ರಾಜಕಾರಣಿಗಳು ಇರಲಿಲ್ಲ. ಅಂಬರೀಷ್‌ ಜೊತೆಗಿದ್ದವರೇ ನನ್ನ ಜೊತೆ ನಿಂತದ್ದು. ಅಂಬರೀಷ್‌ ಮೇಲಿನ ಪ್ರೀತಿಯನ್ನು ನನಗೆ ಕೊಟ್ಟರು. ನನಗೆ ನೋವಾಗಿರಬಹುದು, ಕಷ್ಟವಾಗಿರಬಹುದು, ಕಣ್ಣೀರು ಹಾಕಿದ ದಿನಗಳೂ ಇವೆ. ನನ್ನ ಸ್ವಾರ್ಥ ನೋಡಿ ನಿರ್ಧಾರ ಮಾಡಬಹುದಿತ್ತು. ನನ್ನ ಭವಿಷ್ಯ, ಮಗನ ಭವಿಷ್ಯ ನೋಡುವುದೇ ಮುಖ್ಯವಾಗಿದ್ದರೆ, ನನ್ನ ರಾಜಕೀಯ ನಡೆ ಬೇರೆಯೇ ಆಗಿರುತ್ತಿತ್ತು. ಆದರೆ, ಮೊದಲ ದಿನದ ಬದ್ಧತೆಯೇ ಇವತ್ತೂ ಇದೆ. ನಾನು ನುಡಿದಂತೆ ನಡೆದುಕೊಂಡು ಬಂದಿದ್ದೇನೆ. ಜನರಿಗೂ ಕೊಟ್ಟ ವಾಗ್ದಾನದಲ್ಲಿ ತಪ್ಪು ಹೆಜ್ಜೆ ಇಟ್ಟಿಲ್ಲ ಎಂದು ನುಡಿದರು.

ಕಳೆದ ಬಾರಿಗಿಂತ ಹೆಚ್ಚಿನ ಸವಾಲು ಈ ಬಾರಿ ಇದೆ. ಕ್ಷೇತ್ರದ ಜನರ ಮನಸ್ಸು ನೋಯಿಸಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಅಧಿಕಾರ ಬರುತ್ತೆ, ಹೋಗುತ್ತೆ. ನಮ್ಮ ರಾಜಕೀಯ ನಿರ್ಧಾರ ಮಂಡ್ಯದ ಜೊತೆ ಇರಲಿದೆ. ನಾನು ಇದರ ಬಗ್ಗೆ ಚರ್ಚೆ ಮಾಡಬೇಕು. ಮಂಡ್ಯದ ಜನತೆಯನ್ನು ನೋಯಿಸುವ ನಿರ್ಧಾರ ತೆಗೆದುಕೊಳ್ಳಲ್ಲ. ನಮ್ಮನ್ನು ನಂಬಿ ಲಕ್ಷಾಂತರ ಜನ ಇದ್ದಾರೆ. ಎರಡು ದಿನಗಳ ಕಾಲಾವಕಾಶ ನೀಡಿ ಎಂದರು.