ಸಾರಾಂಶ
ಬಂಗಾರಪೇಟೆ: ಈಗಾಗಲೇ ಶಿಕ್ಷಕರ ಬಹುತೇಕ ಸಮಸ್ಯೆಗಳನ್ನು ಈಡೇರಿಸಿರುವ ಹಾಗೂ ವಿಧಾನಪರಿಷತ್‌ಗೆ ಯೋಗ್ಯವಾಗ ಅಭ್ಯರ್ಥಿಯನ್ನೇ ಚುನಾಯಿಸಿ ಕಳುಹಿಸಬೇಕು. ಮೈತ್ರಿ ಅಭ್ಯರ್ಥಿಯಾಗಿರುವ ವೈ.ಎ.ನಾರಾಯಣಸ್ವಾಮಿ ಎಲ್ಲಾ ವಿಧದಲ್ಲಿಯೂ ಯೋಗ್ಯರು ಹಾಗೂ ಉತ್ತಮರಾಗಿದ್ದು ಅವರನ್ನೇ ನಾಲ್ಕನೇ ಬಾರಿಯೂ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾಯಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಚಂದ್ರಾರೆಡ್ಡಿ ಮನವಿ ಮಾಡಿದರು.
ಅವರು ತಾಲ್ಲೂಕಿನ ಬೂದಿಕೋಟೆ ಗ್ರಾಮದಲ್ಲಿ ಮೈತ್ರಿ ಅಭ್ಯರ್ಥಿಯ ಪರವಾಗಿ ಶಿಕ್ಷಕರಲ್ಲಿ ಮತಯಾಚನೆ ಮಾಡಿ ಮಾತನಾಡಿ, ಕಳೆದ ಬಾರಿ ಎಂಎಲ್ಸಿ ಯಾಗಿದ್ದಂತಹ ಡಾ.ವೈ.ಎ ನಾರಾಯಣಸ್ವಾಮಿ ಜಿಲ್ಲೆಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎಂದರು.
ಶಿಕ್ಷಣ ಕ್ಷೇತ್ರದ ಅಭಿವೃದ್ಧಿ
ಸ್ಥಳೀಯರಾಗಿರುವ ಮೈತ್ರಿ ಅಭ್ಯರ್ಥಿ ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ದಿಗೆ ನೆರವಾಗಿದ್ದಾರೆ. ಜೊತೆಗೆ ಅವರ ಅನುದಾನದಲ್ಲಿ ಶಿಕ್ಷಕರ ಪ್ರಗತಿಗೆ ಹಂಚಿಕೆ ಮಾಡಿ ಅವರ ಪ್ರಗತಿಗೆ ಶ್ರಮಿಸಿದ್ದಾರೆ. ಜೂ.೩ರಂದು ನಡೆಯುವಂತಹ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಡಾ.ವೈ.ಎ ನಾರಾಯಣಸ್ವಾಮಿಗೆ ಮತದಾರರು ಮೊದಲ ಪ್ರಾಶಸ್ತದ ಮತವನ್ನು ನೀಡುವ ಮೂಲಕ ಅವರನ್ನು ಗೆಲ್ಲಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ತಾಲ್ಲೂಕಿನಲ್ಲಿ ೪೨೫ ಮತಗಳಿದ್ದು, ಬಹುತೇಕ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶಿಕ್ಷಕರು ಮೈತ್ರಿ ಅಭ್ಯರ್ಥಿಯ ಪರವಾಗಿ ಬೆಂಬಲ ಸೂಚಿಸಿರುವ ಕಾರಣ ೩೦೦ಕ್ಕೂ ಹೆಚ್ಚು ಮತಗಳು ಮೈತ್ರಿ ಅಭ್ಯರ್ಥಿಯ ಪರವಾಗಿ ಬರುವ ವಿಶ್ವಾಸವಿದ್ದು, ಗೆದ್ದ ಬಳಿಕ ಶಿಕ್ಷಕರ ಇತರೆ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸಲಿದ್ದಾರೆ ಎಂದರು.
ಪ್ರಥಮ ಪ್ರಾಶಸ್ತ್ಯದ ಮತ ನೀಡಿ
ಸುಮಾರು ೬೮೦ ಲಕ್ಷ ಅನುದಾನವನ್ನು ಕೋಲಾರ ಜಿಲ್ಲೆಗೆ ನೀಡುವುದರ ಮೂಲಕ ಜಿಲ್ಲೆ ಅಭಿವೃದ್ದಿಗೆ ಒತ್ತು ನೀಡಿದ್ದಾರೆ. ಜೊತೆಗೆ ವಿಶೇಷ ಅನುದಾನದಲ್ಲಿ ಶಾಲೆಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಅಳವಡಿಕೆ, ಶಾಲಾ ಕಟ್ಟಡಗಳ ನಿರ್ಮಾಣ ಸೇರಿ ಇತರೆ ಕಾಮಗಾರಿಗಳಿಗೆ ಅನುದಾನವನ್ನು ನೀಡಿದ್ದಾರೆ. ಸದಾ ಶಿಕ್ಷಕರೇ ತನ್ನ ಕುಟುಂಬ ಎಂದು ಭಾವಿಸಿರುವ ಎನ್.ಡಿ.ಎ ಮೈತ್ರಿ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡುವುದರ ಮೂಲಕ ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಎನ್.ಡಿ.ಎ ಅಭ್ಯರ್ಥಿ ಸಹೋದರ ವೀರಭದ್ರೇಗೌಡ, ಮಾಗೇರಿ ನಾರಾಯಣಸ್ವಾಮಿ, ತಾ.ಪಂ ಮಾಜಿ ಸದಸ್ಯ ವಿ.ಮಾರ್ಕಂಡೇಗೌಡ, ವಿ.ಎಸ್.ಎಸ್ ಎನ್ ಉಪಾಧ್ಯಕ್ಷ ಬಿ.ರಮೇಶ್, ಮಾಜಿ ಉಪಾಧ್ಯಕ್ಷ ಮುರುಗನ್, ಬಿಜೆಪಿ. ತಾ.ಅಧ್ಯಕ್ಷ ಸಂಪಂಗಿರೆಡ್ಡಿ, ಮುಖಂಡರಾದ ಎಸ್.ಎಂ ಗೋಪಾಲ್ ಮತ್ತಿತರರು ಇದ್ದರು.