ಸದನದಿಂದ 18 ಮಂದಿ ಬಿಜೆಪಿ ಶಾಸಕರ ಅಮಾನತು ವಾಪಸ್‌

| N/A | Published : Aug 12 2025, 08:12 AM IST

vidhan soudha

ಸಾರಾಂಶ

ಅಮಾನತುಗೊಂಡಿದ್ದ ಬಿಜೆಪಿಯ 18 ಮಂದಿ ಶಾಸಕರ ಅಮಾನತು ರದ್ದು ಮಾಡಿರುವ ನಿರ್ಧಾರವನ್ನು ಸ್ಥಿರೀಕರಿಸಿ ಸೋಮವಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

 ಬೆಂಗಳೂರು :  ವಿಧಾನಸಭೆ ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ್ದಾರೆಂಬ ಕಾರಣಕ್ಕೆ ಬಜೆಟ್‌ ಅಧಿವೇಶನದ ವೇಳೆ ಆರು ತಿಂಗಳ ಅವಧಿಗೆ ಸದನದಿಂದ ಅಮಾನತುಗೊಂಡಿದ್ದ ಬಿಜೆಪಿಯ 18 ಮಂದಿ ಶಾಸಕರ ಅಮಾನತು ರದ್ದು ಮಾಡಿರುವ ನಿರ್ಧಾರವನ್ನು ಸ್ಥಿರೀಕರಿಸಿ ಸೋಮವಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ಈ ಸಂಬಂಧ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್ ಅವರು ವಿಧಾಸಭೆಯಲ್ಲಿ ಸ್ಥಿರೀಕರಣ ಪ್ರಸ್ತಾಪ ಮಂಡಿಸಿದರು.

ಸ್ಪೀಕರ್‌ ಸ್ಥಾನಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮುನಿರತ್ನ, ಬೈರತಿ ಬಸವರಾಜ್, ಎಸ್.ಆರ್.ವಿಶ್ವನಾಥ್, ದೊಡ್ಡನಗೌಡ ಪಾಟೀಲ್, ಚನ್ನಬಸಪ್ಪ, ಉಮಾನಾಥ್ ಕೋಟ್ಯಾನ್, ಎಂ.ಆರ್.ಪಾಟೀಲ್, ಡಾ.ಭರತ್ ಶೆಟ್ಟಿ, ಬಿ.ಪಿ.ಹರೀಶ್, ಧೀರಜ್ ಮುನಿರಾಜು, ಡಾ.ಚಂದ್ರು ಲಮಾಣಿ, ಶರಣು ಸಲಗರ, ಬಸವರಾಜ್ ಮತ್ತಿಮೋಡ್, ಬಿ. ಸುರೇಶ್ ಗೌಡ, ಶೈಲೇಂದ್ರ, ಯಶ್‌ಪಾಲ್‌ ಸುವರ್ಣ ಸೇರಿದಂತೆ 18 ಶಾಸಕರನ್ನು ಆರು ತಿಂಗಳ ಅವಧಿಗೆ ಸದನದಿಂದ ಅಮಾನತು ಮಾಡಲಾಗಿತ್ತು.

ಬಳಿಕ ಪ್ರತಿಪಕ್ಷ ನಾಯಕ ಆರ್. ಅಶೋಕ್‌ ಸೇರಿದಂತೆ ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಭಾಧ್ಯಕ್ಷರನ್ನು ಭೇಟಿ ಮಾಡಿ ಅಮಾನತು ಹಿಂಪಡೆಯುವಂತೆ ಮನವಿ ಮಾಡಿದ್ದರು.

ಇದರಂತೆ ಮೇ 25 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್ ಅವರೊಂದಿಗೆ ಸಭೆ ನಡೆಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲು ನಿರ್ಧರಿಸಿ ಅಮಾನತು ಹಿಂಪಡೆಯಲಾಗಿತ್ತು. ಈ ಸಂಬಂಧ ಘಟನೋತ್ತರ ಅನುಮತಿ ಪಡೆಯಲು ಸದನದಲ್ಲಿ ಪ್ರಸ್ತಾವನೆ ಮಂಡಿಸಲಾಗಿದೆ ಎಂದು ಪ್ರಸ್ತಾವನಕ್ಕೆ ಅಂಗೀಕಾರ ಪಡೆದರು.

Read more Articles on