ಸಂಸದರ ಅಮಾನತು ಪ್ರಜಾಪ್ರಭುತ್ವದ ಕಗ್ಗೊಲೆ: ಕಾಂಗ್ರೆಸ್‌

| Published : Dec 23 2023, 01:45 AM IST

ಸಾರಾಂಶ

ಕೇಂದ್ರ ಸರ್ಕಾರದ ವಿರುದ್ಧ ನಗರದಲ್ಲಿ ಕಾಂಗ್ರೆಸ್‌ ಪ್ರತಿಭಟನೆ ನಡೆಸಿ, 146 ಸಂಸದರ ಅಮಾನತಿಗೆ ತೀವ್ರ ಖಂಡನೆ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

146 ಸಂಸದರನ್ನು ಅಮಾನತು ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರವು ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಪಕ್ಷದಿಂದ ಶುಕ್ರವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಸಂಸತ್‌ ಮೇಲೆ ನಡೆದ ದಾಳಿಯು ಭದ್ರತಾ ಲೋಪವಾಗಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸದನದಲ್ಲಿ ಹೇಳಿಕೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಕ್ಕೆ 146 ಸಂಸದರನ್ನು ಅಮಾನತು ಮಾಡಲಾಗಿದೆ. ಇದು ಕೇಂದ್ರ ಸರ್ಕಾರದ ದುರಾಡಳಿತವಾಗಿದ್ದು, ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಪ್ರತಿಭಟನಾಕಾರರು ತೀವ್ರ ವಾಗ್ದಾಳಿ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ನೂತನ ಸಂಸತ್ ಭವನದಲ್ಲಿ ನಡೆದ ದಾಳಿಯ ಬಗ್ಗೆ ವಿವರಣೆ ಕೇಳಿದರೆ 146 ಸಂಸದರನ್ನು ಅಮಾನತು ಮಾಡುವ ಪ್ರಜಾಪ್ರಭುತ್ವ ವಿರೋಧಿ ನಿಲುವನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ಸಂಸದರ ವಿರುದ್ಧ ದಾಳಿ, ಕೇಂದ್ರ ಸರ್ಕಾರದ ದುರಾಡಳಿತ, ಸಂವಿಧಾನ ವಿರೋಧಿ ನೀತಿ ಖಂಡಿಸಿ ಸಂಸತ್‌ ಆವರಣದ ಮಹಾತ್ಮ ಗಾಂಧಿ ಅವರ ಪ್ರತಿಮೆ ಮುಂದೆ ನಮ್ಮ ಸಂಸತ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ದೇಶದಾದ್ಯಂತ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸುತ್ತಿದೆ ಎಂದು ವಿವರಿಸಿದರು.

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ರಾಜ್ಯ ಜಯಗಳಿಸಿದ್ದೇವೆ. ಏನು ಬೇಕಾದರೂ ಮಾಡಬಹುದು ಎಂದು ಬಿಜೆಪಿ ನಾಯಕರು ಬೀಗುತ್ತಿದ್ದಾರೆ. ಆದರೆ ಜನತೆ ಯಾವಾಗ ಬೇಕಾದರೂ ತಮ್ಮ ನಿರ್ಧಾರ ಬದಲಿಸಬಹುದು. ರಾಜ್ಯ ವಿಧಾನಸಭೆ ನಂತರ ಲೋಕಸಭೆ ಚುನಾವಣೆಯಲ್ಲಿ ಜನ ಬೇರೆ ರೀತಿಯ ಫಲಿತಾಂಶ ನೀಡಿರುವ ಉದಾಹರಣೆಗಳಿವೆ. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ವಿಧಾನಸಭೆ ಚುನಾವಣೆ ನಂತರ ಎರಡೇ ತಿಂಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಜನರ ತೀರ್ಪು ಬದಲಾಗಿತ್ತು ಎಂದು ಬಿಜೆಪಿಗೆ ಟಾಂಗ್‌ ನೀಡಿದರು.

ನಾವು ಹತಾಶರಾಗುವುದು ಬೇಡ. ದೇಶದಲ್ಲಿ ಬಿಜೆಪಿಯ ಸರ್ವಾಧಿಕಾರಿ ಸರ್ಕಾರಕ್ಕೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ. ರಾಜ್ಯದಲ್ಲಿ, ಜನರ ಸಮಸ್ಯೆ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆ ನಡೆಸಿ ಎಂದರೆ ವಿರೋಧ ಪಕ್ಷದ ನಾಯಕರು ಚರ್ಚೆ ಮಾಡಲಿಲ್ಲ ಎಂದು ಟೀಕಿಸಿದರು.

ಇತಿಹಾಸದಲ್ಲೇ ಇಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಮಾತನಾಡಿ, ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲವಾಗಿದ್ದು 10 ವರ್ಷದ ಆಡಳಿತಾವಧಿಯಲ್ಲಿ ಜನರಿಗೆ ಮೋಸ ಮಾಡಿದೆ. 146 ಸಂಸದರನ್ನು ಅಮಾನತು ಮಾಡಿದ ಉದಾಹರಣೆ ಇತಿಹಾಸದಲ್ಲೇ ಇಲ್ಲ. ಇದನ್ನು ವಿರೋಧಿಸಿ ಬೃಹತ್‌ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ, ಶಾಸಕರಾದ ಪ್ರಸಾದ್ ಅಬ್ಬಯ್ಯ, ಯು.ಬಿ.ವೆಂಕಟೇಶ್, ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ, ಮಾಜಿ ಮೇಯರ್ ಹುಚ್ಚಪ್ಪ ಸೇರಿದಂತೆ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಂಸತ್‌ಗೆ ಸರಿಯಾದ ಭದ್ರತೆ ನೀಡದಿದ್ದರಿಂದ ದಾಳಿ ನಡೆದಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ನೀಡಬೇಕೆಂದು ಒತ್ತಾಯಿಸಿದ್ದಕ್ಕಾಗಿ ಸಂಸದರನ್ನು ಅಮಾನತು ಮಾಡಲಾಗಿದೆ. ಇದನ್ನು ವಿರೋಧಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.