ಸಾರಾಂಶ
ಹೈದರಾಬಾದ್: ಕರ್ನಾಟಕ, ತಮಿಳುನಾಡು, ಕೇರಳದ ಮುಖ್ಯಮಂತ್ರಿಗಳ ಬಳಿಕ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೂಡ ಕೇಂದ್ರದ ಎನ್‌ಡಿಎ ಸರ್ಕಾರವು, ದಕ್ಷಿಣದ ರಾಜ್ಯಗಳ ಬಗ್ಗೆ ತಾರತಮ್ಯ ತೋರುತ್ತಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರೇವಂತ್ ರೆಡ್ಡಿ, ‘ಬಿಹಾರ, ಉತ್ತರಪ್ರದೇಶದಂಥ ಹಿಂದುಳಿದ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿಕೆಯನ್ನು ಒಪ್ಪೋಣ. ಆದರೆ ಬಿಜೆಪಿಯೇತರ ಆಡಳತದ ರಾಜ್ಯಗಳಿಗೆ ಯೋಜನೆಗಳಿಗೆ ಅನುಮೋದನೆ ನೀಡುವುದರಲ್ಲೂ ತಾರತಮ್ಯ ಎಸಗಲಾಗುತ್ತಿದೆ. ಅಭಿವೃದ್ಧಿ ಹೊಂದಿದ ರಾಜ್ಯವಾದ ಹೊರತಾಗಿಯೂ ಗುಜರಾತ್‌ಗೆ ಬುಲೆಟ್ ರೈಲು, ಸಾಬರಮತಿ ರಿವರ್‌ಫ್ರಂಟ್ ಗಿಫ್ಟ್ ಸಿಟಿಯಂಥ ಯೋಜನೆ ನೀಡಲಾಯಿತು’ ಎಂದು ಕಿಡಿಕಾರಿದರು.
ಜೊತೆಗೆ, ‘ಜನಸಂಖ್ಯೆ ಆಧಾರದಲ್ಲಿ ಹಣಕಾಸಿನ ನೆರವು ನೀಡುವುದನ್ನು ನಾನು ಒಪ್ಪುತ್ತೇನೆ. ಆದರೆ ರಾಜಕೀಯ ಪ್ರಾತಿನಿಧ್ಯದ ವಿಷಯದಲ್ಲೂ ಅನ್ಯಾಯ ಆಗುತ್ತಿದೆ. ದಕ್ಷಿಣದ ರಾಜ್ಯಗಳಿಗೆ ರಾಷ್ಟ್ರಪತಿ, ಉಪರಾಷ್ಟ್ರಪತಿಯಂಥ ಪ್ರಮುಖ ಹುದ್ದೆಗಳನ್ನು ಏಕೆ ನೀಡುವುದಿಲ್ಲ? ಅವರಿಗೆ ಏನೇ ಪ್ರಶ್ನೆ ಕೇಳಿದರೂ ಜೈ ಶ್ರೀ ರಾಮ್ ಎನ್ನುತ್ತಾರೆ. ಅವರಿಗೆ ಅದೊಂದೇ ಉತ್ತರ ಗೊತ್ತಿರುವುದು’ ಎಂದು ರೇವಂತ್ ರೆಡ್ಡಿ ಕಿಡಿಕಾರಿದರು.