ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೇರೆಲ್ಲ ಜಿಲ್ಲೆಗಳಿಗಿಂತ ಅತಿ ಹೆಚ್ಚು ಜನರನ್ನು ಬಿಜೆಪಿ ಸದಸ್ಯರನ್ನಾಗಿ ನೋಂದಣಿ ಮಾಡುವ ಗುರಿ ಇದೆ. ನಾನು ಕೂಡ ಪ್ರತಿ ಮಂಡಲಕ್ಕೆ ಭೇಟಿ ನೀಡುತ್ತೇನೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು. ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿ, ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು ನೋಂದಣಿಯಾಗಲು ಎಲ್ಲ ಪ್ರಯತ್ನ ಮಾಡಬೇಕಿದೆ. ಚಿಂತಾಮಣಿ ಕ್ಷೇತ್ರದಲ್ಲಿ ಪಕ್ಷದ ಚಟುವಟಿಕೆ ಕಡಿಮೆಯಾಗಿದ್ದು, ಈ ಬಗ್ಗೆ ಚರ್ಚಿಸಬೇಕಿದೆ. ಸೆಪ್ಟೆಂಬರ್ 1 ರಿಂದ 15 ರವರೆಗೆ ಸಂಪೂರ್ಣವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು 16 ಮಂಡಲಕ್ಕೆ ಭೇಟಿ ನೀಡುತ್ತೇನೆ ಎಂದರು. ಸಾಮಾಜಿಕ ಆಂದೋಲನಬಿಜೆಪಿ ಅತಿ ದೊಡ್ಡ ಹಾಗೂ ವಿಭಿನ್ನವಾದ ಪಕ್ಷ. ಮೊದಲಿಗೆ ರಾಜಕೀಯ ಆಂದೋಲನದಿಂದ ಆರಂಭವಾದ ಬಿಜೆಪಿ, ಈಗ ಸಾಮಾಜಿಕ ಆಂದೋಲನವಾಗಿ ಬದಲಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಜಾತಿಗಳನ್ನು ರೈತರು, ಮಹಿಳೆಯರು, ಯುವಜನರು, ಕಾರ್ಮಿಕರು ಎಂದು ವಿಂಗಡಣೆ ಮಾಡಿ ಹೆಸರಿಸಿದ್ದಾರೆ. ಈ ವರ್ಗದ ಜನರನ್ನು ಅಭಿವೃದ್ಧಿ ಮಾಡಬೇಕು ಎಂಬುದು ಪ್ರಧಾನಿಯವರ ಗುರಿ ಎಂದರು. ಬಿಜೆಪಿ ಕಾರ್ಯಕರ್ತರ ಪಕ್ಷವೇ ಹೊರತು, ಒಂದು ಮನೆತನದ ಪಕ್ಷವಲ್ಲ. ಕಡು ಬಡ ಕುಟುಂಬದಲ್ಲಿ ಹುಟ್ಟಿದ ನರೇಂದ್ರ ಮೋದಿ ಪ್ರಧಾನಿಯಾಗಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದರು. ಕೇಂದ್ರದಲ್ಲಿ ಬಿಜೆಪಿ ಏನು ಮಾಡುತ್ತಿದೆ ಎಂದು ಕಾರ್ಯಕರ್ತರು ಅರಿಯಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರದ ಎನ್‌ಡಿಎ ಸರ್ಕಾರದ ಕುರಿತು ತಪ್ಪು ತಿಳಿವಳಿಕೆ ಮೂಡಿಸುತ್ತಿದೆ. ಇದರಿಂದ ರಾಜಕೀಯವಾಗಿ ಹಿನ್ನಡೆಯಾಗುತ್ತಿದೆ. ಈ ಕುರಿತು ಕಾರ್ಯಕರ್ತರು ಎಚ್ಚೆತ್ತುಕೊಂಡು ಪರಿಶಿಷ್ಟ ವರ್ಗ, ಪಂಗಡದ ಜನರಲ್ಲಿ ಅರಿವು ಮೂಡಿಸಬೇಕು ಎಂದರು.ಶಾಸಕರು ತಪ್ಪು ತಿದ್ದಿಕೊಳ್ಳಲಿಚಿಕ್ಕಬಳ್ಳಾಪುರ ಶಾಸಕರು ನಗರಸಭಾ ಸದಸ್ಯರ ಬಗ್ಗೆ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಾ.ಕೆ.ಸುಧಾಕರ್, ಚುನಾಯಿತ ಪ್ರತಿನಿಧಿಗೆ ಅವರದ್ದೇ ಆದ ಕಾರ್ಯವ್ಯಾಪ್ತಿ ಇರುತ್ತದೆ. ಬಹಳ ವರ್ಷಗಳಿಂದ ನಗರಸಭೆ ಸದಸ್ಯರಾಗಿ ಕೆಲಸ ಮಾಡಿರುವವರ ಬಗ್ಗೆ ಗೌರವದಿಂದ ಮಾತಾಡಬೇಕು. ಈ ರೀತಿ ನಗರಸಭಾ ಸದಸ್ಯರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಇಲ್ಲವಾದರೆ ಅವರ ಪಕ್ಷದ ನಗರಸಭಾ ಸದಸ್ಯರೇ ಅವರ ವಿರುದ್ಧ ತಿರುಗಿಬೀಳುತ್ತಾರೆ. ಈಗಾಲಾದರೂ ಶಾಸಕರು ತಪ್ಪು ತಿದ್ದಿಕೊಳ್ಳಬೇಕು. ಯಾವುದೇ ಕಷ್ಟ ಪಡದೆ ಹುದ್ದೆ ಸಿಕ್ಕಾಗ ಈ ರೀತಿಯಾಗುತ್ತದೆ ಎಂದರು. ಭೂ ಅಭಿವೃದ್ಧಿ ಬ್ಯಾಂಕ್ ರೈತರಿಗೆ ಸೇರಿದ್ದು, ರೈತರಿಗೆ ಆರ್ಥಿಕ ಸಹಕಾರ ನೀಡಲಾಗುತ್ತಿದೆ. ಚಿಕ್ಕಬಳ್ಳಾಪುರ ತಾಲೂಕಲ್ಲಿ ದ್ರಾಕ್ಷಿ, ತರಕಾರಿ ಬೆಳೆ ಬೆಳೆಯಲು ನೆರವು ನೀಡಲಾಗುತ್ತಿದೆ. ಬಿಜೆಪಿ ಬೆಂಬಲಿತ ನಿರ್ದೇಶಕರು ಬ್ಯಾಂಕ್‌ಗೆ ನೇಮಕ ಆದಾಗಿನಿಂದಲೂ ರಾಜಕೀಯ ಬೆರೆಸಿಲ್ಲ. ಸಣ್ಣ ಭ್ರಷ್ಟಾಚಾರದ ಆಪಾದನೆ ಇಲ್ಲದೆ ಎಲ್ಲರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸಾದ್ ಅವರ ನಾಯಕತ್ವದಲ್ಲಿ ಮುಂದೆಯೂ ಕೆಲಸಗಳು ಸಾಗಲಿದೆ ಎಂದರು.
3.75 ಲಕ್ಷ ಸದಸ್ಯತ್ವ ಗುರಿಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿ ಈ ಭಾರಿ 3 ಲಕ್ಷ 75 ಸಾವಿರ ಸದಸ್ಯತ್ವದ ಗುರಿ ಹೊಂದಲಾಗಿದೆ ಎಂದರು. ಸಭೆಯಲ್ಲಿ ಸಂಸದ ಪಿ.ಸಿ.ಮೋಹನ್, ಮಾಜಿ ಶಾಸಕ ಎಂ.ರಾಜಣ್ಣ,ಜಿಲ್ಲಾ ಕಾರ್ಯದರ್ಶಿಗಳಾದ ಹೆಚ್.ಎಸ್.ಮುರಳೀಧರ್, ಕೆ.ಬಿ.ಮುರಳಿ, ಮಧುಸೂಧನ್ ರವಿನಾರಾಯಣರೆಡ್ಡಿ, ಎ.ವಿ.ಬೈರೇಗೌಡ, ಮರಳಕುಂಟೆ ಕೃಷ್ಣಮೂರ್ತಿ, ಅನುಆನಂದ್, ಸಂತೋಷ್, ಸುರೇಂದ್ರಗೌಡ,ಪ್ರತಾಪ್,ಗಂಗಿರೆಡ್ಡಿ,ಮತ್ತಿತರರು ಇದ್ದರು.