ಸಾರಾಂಶ
ಚಿಕ್ಕಬಳ್ಳಾಪುರ : ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿರುವ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರಾದ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಎಂಟಿಬಿ ನಾಗರಾಜ್ ಮತ್ತು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯವರಿಗೆ ಕೃತಜ್ಞತೆ ಸಲ್ಲಿಸುವೆ. ಟಿಕೆಟ್ ಘೋಷಣೆಯಾಗುವ ಮೊದಲೇ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸೋಮವಾರ ನಗರ ಹೊರವಲಯದ ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಚಿಕ್ಕಬಳ್ಳಾಪುರ ವಿಧಾಸಭಾ ಕ್ಷೇತ್ರದಲ್ಲಿ ತಾವು ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಲೋಕಸಭಾ ಕ್ಷೇತ್ರಕ್ಕೂ ವಿಸ್ತರಿಸುತ್ತೇನೇ ಎಂದರು.
ಅವಕಾಶ ಸಿಕ್ಕಿರುವುದು ಅದೃಷ್ಟ
ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಕಾಲಘಟ್ಟದಲ್ಲಿದೆ, ಇಂಥ ಕಾಲಘಟ್ಟದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿರುವುದು ಅದೃಷ್ಟವಲ್ಲದೆ ಬೇರೇನೂ ಅಲ್ಲ ಎಂದರು.
ಶಾಶ್ವತ ನೀರಾವರಿಗೆ ಸ್ರಮಿಸುವೆ
ನಾನು ಕೊಟ್ಟ ಮಾತು, ಇಟ್ಟ ಹೆಜ್ಜೆ ಎಂದಿಗೂ ಹಿಂತೆಗೆದುಕೊಂಡಿಲ್ಲ. ನನ್ನ ಕರ್ಮಭೂಮಿ ಇದೇ ಆಗಿರುವುದರಿಂದ ಇಲ್ಲಿನ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಸಂಸದನಾದ ಬಳಿಕ ಬಯಲುಸೀಮೆ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ತರುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಡವರಿಗೆ ಕೊಡುವ ಸರ್ಕಾರವಾಗಿದ್ದರೆ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕಿತ್ತುಕೊಳ್ಳುವ ಸರ್ಕಾರವಾಗಿದೆ. ಕಿಸಾನ್ ಸಮ್ಮಾನ್‌ನಡಿ ಬಿಜೆಪಿ ಸರ್ಕಾರ ರೈತರಿಗೆ 4,000 ರೂ. ನೀಡುತ್ತಿದ್ದರೆ, ಅದನ್ನು ಕಾಂಗ್ರೆಸ್ ಕಿತ್ತುಕೊಂಡಿದೆ. ಬಿಜೆಪಿ ನೀಡುತ್ತಿದ್ದ ವಿದ್ಯಾರ್ಥಿವೇತನವನ್ನು ಸಹ ರಾಜ್ಯ ಕಾಂಗ್ರೆಸ್ ಕಿತ್ತುಕೊಂಡಿದೆ ಎಂದು ದೂರಿದರು.
ಐನೂರು ವರ್ಷಗಳಿಂದ ರಾಮ ಮಂದಿರ ಕೇವಲ ಕನಸಾಗಿತ್ತು. ಆದರೆ ಇದು ಬಿಜೆಪಿಗೆ ಕೇವಲ ರಾಜಕೀಯ ಲಾಭ ನಷ್ಟದ ವಿಚಾರವಲ್ಲ ಎನ್ನುವುದು ಮಂದಿರ ಲೋಕಾರ್ಪಣೆ ಮಾಡಿದ ಬಳಿಕ ಸಾಬೀತಾಗಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜೀವಂತವಿದ್ದಾಗ ಅವರನ್ನು ಲೋಕಸಭೆಗೆ ಪ್ರವೇಶಿಸಲು ಕಾಂಗ್ರೆಸ್ ಬಿಡಲಿಲ್ಲ. ಅವರ ಹೆಸರು ಹೇಳಲು ಕೂಡ ಕಾಂಗ್ರೆಸ್‌ಗೆ ಯೋಗ್ಯತೆ ಇಲ್ಲ ಎಂದರು.
ಮೈತ್ರಿಕೂಟದ ತಂಡ ರಚಿಸಬೇಕು
ದಲಿತರಿಗೆ ಮೀಸಲಾದ ಹಣದಲ್ಲಿ 11 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿಗೆ ಬಳಸಲಾಗಿದೆ. ಇಂತಹ ವಿಚಾರದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಅನ್ಯಾಯದ ರಾಜಕೀಯವನ್ನು ಕೊನೆಗೊಳಿಸಲು ಇದು ಸೂಕ್ತ ಸಮಯ. ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ರಸ್ತೆ, ಸೇತುವೆ ನಿರ್ಮಿಸಿಲ್ಲ. ಎಲ್ಲಿಯೂ ಅಭಿವೃದ್ಧಿ ನಡೆಯುತ್ತಿಲ್ಲ. ಇದನ್ನು ಜನರಿಗೆ ತಿಳಿಸಬೇಕಿದೆ. ಜೆಡಿಎಸ್ ಜೊತೆ ಸಮನ್ವಯ ತಂಡಗಳನ್ನು ರಚಿಸಿ, ಪ್ರತಿ ಹಂತದಲ್ಲೂ ತಂಡಗಳನ್ನು ರಚಿಸಿ ಕೆಲಸ ಮಾಡಬೇಕು. ಬಿಜೆಪಿ-ಜೆಡಿಎಸ್ ಒಳಗೊಂಡ ಬೃಹತ್ ಪ್ರಚಾರ ಸಭೆಯನ್ನೂ ನಡೆಸಬೇಕಿದೆ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ಮೊದಲು ಡಾ.ಕೆ. ಸುಧಾಕರ್ ಮಾಜಿ ಸಚಿವ ಎಂಟಿಬಿ ನಾಗರಾಜ್ ಪಾದಗಳಿಗೆ ನಮಸ್ಕರಿಸಿದರು. ಡಾ.ಕೆ.ಸುಧಾಕರ್ ಮತ್ತು ಎಂಟಿಬಿ ನಾಗರಾಜ್ ನಡುವೆ ಆತ್ಮೀಯ ಬಾಂಧವ್ಯವಿದೆ. ಮೂಲಗಳ ಪ್ರಕಾರ ನಾಮಪತ್ರದ ಸಲ್ಲಿಸುವಾಗ ಸಲ್ಲಿಸಬೇಕಿರುವ 25,000 ರು.ಗಳ ಭದ್ರತಾ ಠೇವಣಿಯನ್ನು ಎಂಟಿಬಿ ನಾಗರಾಜ್ ಅವರೇ ಪಾವತಿಸಿದ್ದಾರೆ.
ಹಿರಿಯರ ಪಾದಮುಟ್ಟಿ ನಮಸ್ಕಾರ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಡಾ.ಕೆ.ಸುಧಾಕರ್ ಅಭ್ಯರ್ಥಿಯಾಗಬೇಕೆಂದು ನಾಗರಾಜ್ ರಾಜ್ಯ ಬಿಜೆಪಿ ನಾಯಕರ ಮೇಲೆ ಒತ್ತಡವನ್ನೂ ಹೇರಿದ್ದರು. ಮಾಜಿ ಸಚಿವ ಎಂಟಿಬಿ ನಾಗರಾಜ್ ಸಕ್ರಿಯ ರಾಜಕಾರಣದಿಂದ ದೂರವಾಗಿರುವಂತೆ ಕನ್ನಡಿಗರಿಗೆ ಅನಿಸುತ್ತಿರುವುದು ನಿಜವಾದರೂ ಹೊಸಕೋಟೆ ಭಾಗದಲ್ಲಿ ಪ್ರಭಾವಿ ನಾಯಕರಾಗಿದ್ದಾರೆ. ಸುಧಾಕರ್ ತಮ್ಮೊಂದಿಗಿದ್ದ ಬೇರೆ ನಾಯಕರ ಪಾದಗಳಿಗೂ ನಮಸ್ಕರಿಸಿ ಆಶೀರ್ವಾದ ಪಡೆದರು.
ನಾಮಪತ್ರ ಸಲ್ಲಿಸುವಾಗ ಸುಧಾಕರ್ ಜೊತೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ಮಾಜಿ ಶಾಸಕ ವರ್ತೂರು ಪ್ರಕಾಶ್, ಮಾಜಿ ಶಾಸಕರಾದ ಪಿಳ್ಳ ಮುನಿಶಾಮಪ್ಪ,ನಿಸರ್ಗ ನಾರಾಯಣಸ್ವಾಮಿ,ಮುಂಗಾರು ಮಳೆ ಇ.ಕೃಷ್ಣಪ್ಪ, ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಮತ್ತಿತರರು ಇದ್ದರು.