ಸಾರಾಂಶ
ಗುರುವಾರ ಸಂಜೆ ಸಚಿವ ಸಂಪುಟ ಸಭೆ ಮುಗಿದ ಬಳಿಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಡಿನ್ನರ್ ಪಾರ್ಟಿ ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಕಾಂಗ್ರೆಸ್‌ನಲ್ಲಿನ ಬಣ ರಾಜಕೀಯ ಜೋರಾಗಿದೆ ಎಂದು ಪ್ರತಿಪಕ್ಷಗಳು ಟೀಕಿಸಿದ್ದಾರೆ.
ಬೆಂಗಳೂರು : ಗುರುವಾರ ಸಂಜೆ ಸಚಿವ ಸಂಪುಟ ಸಭೆ ಮುಗಿದ ಬಳಿಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಡಿನ್ನರ್ ಪಾರ್ಟಿ ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಕಾಂಗ್ರೆಸ್‌ನಲ್ಲಿನ ಬಣ ರಾಜಕೀಯ ಜೋರಾಗಿದೆ ಎಂದು ಪ್ರತಿಪಕ್ಷಗಳು ಟೀಕಿಸಿದ್ದಾರೆ.
ಸಿಎಂ ಬದಲಾವಣೆ ವರದಿ ಹಿನ್ನೆಲೆಯಲ್ಲಿ ಇದೊಂದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಕೆಲ ಸಚಿವರು ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಭೋಜನಕೂಟದ ಹೆಸರಿನಲ್ಲಿ ಸಭೆ ನಡೆಸಿದ್ದಾರೆ ಎಂಬ ಸುದ್ದಿ ಹರಡಿದೆ. ಆದರೆ, ಇದರಲ್ಲಿ ರಾಜಕೀಯ ಏನೂ ಇಲ್ಲ, ಇದೊಂದು ಸೌಹಾರ್ದಯುತ ಸಭೆ ಎಂದು ಸ್ವತ: ಸತೀಸ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಊಟಕ್ಕಷ್ಟೇ ಸೇರಿದ್ದೆವು. ಈ ವೇಳೆ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿರುವ ಬಿಜೆಪಿಯವರಿಗೆ ತಿರುಗೇಟು ನೀಡುವುದು ಹೇಗೆಂಬುದನ್ನು ಚರ್ಚಿಸಿದ್ದೇವೆ. ಉಳಿದಂತೆ ಬೇರೆ ಯಾವುದೇ ಅಜೆಂಡಾವೂ ಇಲ್ಲ. ಸಂಪುಟ ಪುನರ್‌ರಚನೆ ಸೇರಿ ಯಾವುದೇ ಚರ್ಚೆಯಾಗಿಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯೂ ನಮ್ಮ ಕೈಯಲ್ಲಿಲ್ಲ. ಎಲ್ಲವೂ ಹೈಕಮಾಂಡ್ ನೋಡಿಕೊಳ್ಳಲಿದೆ ಎಂದರು.
ಬೆಳಗಾವಿಯಲ್ಲಿ ಈ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಸೇರಿ ಹಲವು ಸಚಿವರು ನಮ್ಮ ಮನೆಯಲ್ಲಿ ಊಟಕ್ಕೆ ಸೇರಿದ್ದು ಇದೇ ಮೊದಲೇನಲ್ಲ. ಕಳೆದ ಇಪ್ಪತ್ತು ತಿಂಗಳಲ್ಲಿ ಹತ್ತಾರು ಬಾರಿ ಸೇರಿದ್ದೇವೆ. ಇದಕ್ಕೆ ಮಹತ್ವ ನೀಡುವ ಅಗತ್ಯಇಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಸೇರಿ ಹಲವು ಸಚಿವರು ಬೆಂಗಳೂರಿನ ಮನೆಯಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಊಟಕ್ಕೆ ಸೇರಿದ್ದೆವು. ಇಲ್ಲಿ ರಾಜಕೀಯ, ಪಕ್ಷ ಸಂಘಟನೆ ಹಾಗೂ 2028ರಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ತರುವ ವಿಚಾರ ಚರ್ಚೆಯಾಗಿದೆ. ಸಿಎಂ ಬದಲಾವಣೆ ಮಾಹಿತಿ ಇಲ್ಲ. ಸಂಪುಟ ಪುನಾರಚನೆ ಚರ್ಚೆ ಆಗಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆಯೇ ನಡೆದಿಲ್ಲ. ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮವಿದೆ. ಆಯಾ ನಾಯಕನ ಸಾಮರ್ಥ್ಯ ಮತ್ತು ಅನಿವಾರ್ಯತೆಗೆ ಅನುಗುಣವಾಗಿ ಕರ್ನಾಟಕ ಮಾತ್ರವಲ್ಲ, ಬೇರೆ ರಾಜ್ಯಗಳಲ್ಲಿಯೂ 2 ಹುದ್ದೆ ಕೊಟ್ಟ ಉದಾಹರಣೆಗಳಿವೆ. ಡಿ.ಕೆ.ಶಿವಕುಮಾರ ಅಧ್ಯಕ್ಷರಾಗಿದ್ದು, ನಾವು ಅಧ್ಯಕ್ಷರಾಗುತ್ತೇವೆ ಅನ್ನುವುದು ಸೂಕ್ತವಲ್ಲ. ಬದಲಾವಣೆ ಸಮಯ ಬಂದಾಗ ನೊಡೋಣ ಎಂದರು.
ಹೊಸಪೇಟೆಯಲ್ಲಿ ಮಾತನಾಡಿದ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಹೊಸ ವರ್ಷದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಸತೀಶ್ ಜಾರಕಿಹೋಳಿ ಊಟಕ್ಕೆ ಕರೆದಿದ್ದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಸದ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಚರ್ಚೆಯಾಗಿಲ್ಲ. ಹೊರಗಡೆ ಕೇವಲ ಊಹಾಪೋಹಗಳು ಅಷ್ಟೆ ಎಂದರು.
ಸತೀಶ್ ಜಾರಕಿಹೊಳಿ ಊಟಕ್ಕೆ ಸೇರೋಣ ಎಂದು ಹೇಳಿದ್ದರು. ಸಿದ್ದರಾಮಯ್ಯ ಏನು ವಿಷಯ ಎಂದು ಕೇಳಿದರು. ಏನೂ ಇಲ್ಲ ಊಟಕ್ಕೆ ಸೇರೋಣ ಅಂಥ ಅಷ್ಟೇ ಎಂದು ಹೇಳಿ ಗುರುವಾರ ರಾತ್ರಿ ಸೇರಿದ್ದೆವು. ಸಚಿವ ಪರಮೇಶ್ವರ್ ಅವರು ಮಲೇಷ್ಯಾಗೆ ಹೋಗಲು ಬೇಗ ಹೊರಟರು. ಇದರಲ್ಲಿ ಯಾವ ಅಜೆಂಡ ಇಲ್ಲ.
- ಮಹದೇವಪ್ಪ, ಸಚಿವ.
ಸಿದ್ದರಾಮಯ್ಯ ಸೇರಿ ಹಲವು ಸಚಿವರು ಬೆಂಗಳೂರಿನ ಮನೆಯಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಊಟಕ್ಕೆ ಸೇರಿದ್ದೆವು. ಇಲ್ಲಿ ರಾಜಕೀಯ, ಪಕ್ಷ ಸಂಘಟನೆ ಹಾಗೂ 2028ರಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ತರುವ ವಿಚಾರ ಚರ್ಚೆಯಾಗಿದೆ ಅಷ್ಟೇ.
- ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ.
ಸಚಿವ ಸಂಪುಟ ಸಭೆ ಮುಗಿಯುವುದು ತಡವಾಯಿತು. ಹಾಗೆ ಸತೀಶ್ ಜಾರಕಿಹೊಳಿ ಮನೆಗೆ ಊಟಕ್ಕೆ ಹೋಗಿದ್ದೇವು ಅಷ್ಟೆ. ಅಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ. ಎಲ್ಲರನ್ನು ಇಟ್ಟುಕೊಂಡು ನಾವು ಚರ್ಚೆ ಮಾಡಲು ಸಾಧ್ಯವೇ ಹೇಳಿ ನೋಡೋಣ?.
- ಎನ್.ಎಸ್. ಬೋಸರಾಜು, ಸಣ್ಣ ನೀರಾವರಿ ಸಚಿವ.