ಸಾರಾಂಶ
ಕೋಲಾರ ಜಿಲ್ಲೆಯ ಜನರಿಗೆ ಕುಡಿಯುವ ನೀರು ಆಶ್ವಾಸನೆ ನೀಡಿ ಕೆ.ಸಿ.ವ್ಯಾಲಿ ಯೋಜನೆಯಲ್ಲಿ ೩ ಭಾರಿ ಸಂಸ್ಕರಣೆ ಮಾಡದೆ ಮೋಸ ಮಾಡಿದೆ. ಕೊಳಚೆ ನೀರು ನೀಡಿ ಭೂಮಿಯನ್ನು ಹಾಳು ಮಾಡಿದೆ, ಈ ಸರ್ಕಾರವನ್ನು ಮನೆಗೆ ಕಳುಹಿಸಬೇಕು
ಕನ್ನಡಪ್ರಭ ವಾರ್ತೆ ಕೋಲಾರ
ರಾಜ್ಯದಲ್ಲಿ ಬರಗಾಲ ಬಂದು ೬ ತಿಂಗಳು ಕಳೆದರೂ ರೈತರಿಗೆ ಬಿಡಿಗಾಸು ಪರಿಹಾರ ನೀಡಿಲ್ಲ, ರೈತ ವಿರೋಧ ಧೋರಣೆ ಪಾಲನೆ ಮಾಡುತ್ತಿದೆ, ಆದರೆ ಅಲ್ಪಸಂಖ್ಯಾತರ ಅಭಿವೃದ್ದಿಗೆ ೧೦೦೦ ಕೋಟಿ ಬಿಡುಗಡೆ ಮಾಡುವ ಮೂಲಕ ಆಡಳಿತದಲ್ಲಿ ಜಾತಿಯತೇ ರಾಜಕಾರಣದ ಲಾಭ ಮಾಡಿಕೊಳ್ಳಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.ಜಿಲ್ಲಾ ಭಾರತೀಯ ಜನತಾ ಪಕ್ಷದಿಂದ ರಾಜ್ಯ ಕಾಂಗ್ರೇಸ್ ಸರ್ಕಾರದ ರೈತ ವಿರೋಧ ಜನವಿರೋಧಿ ನೀತಿ ಖಂಡಿಸಿ ಬಂಗಾರಪೇಟೆ ರಸ್ತೆಯ ಅಂಬೇಡ್ಕರ್ ವೃತ್ತದಿಂದ ಮೆಕ್ಕೆ ವೃತ್ತವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಅವರು ಮಾತನಾಡಿ, ಕೇಂದ್ರ ಸರ್ಕಾರ ೪೦೦ ಕೋಟಿ ರು. ಬಿಡುಗಡೆ ಮಾಡಿದೆ, ಈ ಸಂಬಂಧವಾಗಿ ಜಿಲ್ಲಾಧಿಕಾರಿ ಖಾತೆಯಲ್ಲಿ ಎಷ್ಟು ಅನುದಾನ ಇದೆ, ಎಷ್ಟು ಬಿಡುಗಡೆ ಮಾಡಿದೆ ಎಂದು ಪ್ರಶ್ನಿಸಿದರು.ಅಲ್ಪಸಂಖ್ಯಾತರ ಓಲೈಕೆ
ರೈತರನ್ನು ಕಡೆಗಣಿಸಿ ಟಿಪ್ಪುವನ್ನು ವೈಭವೀಕರಿಸುವ ಮೂಲಕ ಅಲ್ಪಸಂಖ್ಯಾತರನ್ನು ಒಲೈಸಿಕೊಳ್ಳುತ್ತಿದ್ದೀರಿ, ರೈತರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಿಂಚತ್ತು ಕಾಳಜಿ ಇಲ್ಲವಾಗಿದೆ. ಸರ್ಕಾರದ ೫ ಗ್ಯಾರಂಟಿಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಟೀಕಿಸಿದರು.ಕೋಲಾರ ಜಿಲ್ಲೆಯ ಜನರಿಗೆ ಕುಡಿಯುವ ನೀರು ಆಶ್ವಾಸನೆ ನೀಡಿ ಕೆ.ಸಿ.ವ್ಯಾಲಿ ಯೋಜನೆಯಲ್ಲಿ ೩ ಭಾರಿ ಸಂಸ್ಕರಣೆ ಮಾಡದೆ ಮೋಸ ಮಾಡಿದೆ. ಕೊಳಚೆ ನೀರು ನೀಡಿ ಭೂಮಿಯನ್ನು ಹಾಳು ಮಾಡಿದೆ, ಈ ಸರ್ಕಾರವನ್ನು ಮನೆಗೆ ಕಳುಹಿಸಬೇಕು, ಅನಿಷ್ಟ ಸರ್ಕಾರಕ್ಕೆ ಧಿಕ್ಕಾರ ಹಾಕಿ, ಎಮ್ಮೆ ಚರ್ಮದ ಸರ್ಕಾರಕ್ಕೆ ಬಾರು ಕೋಲಿನಿಂದ ಬಾರಿಸುವಂತಾಗಬೇಕು ಎಂದು ಕಿಡಿಕಾರಿದರು.ರಾಜ್ಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಂಸದ ಎಸ್.ಮುನಿಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕ ವೈ.ಸಂಪಂಗಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಇದ್ದರು.