ಸಾರಾಂಶ
ಯಾರೇ ಪ್ರಾದೇಶಿಕ ಪಕ್ಷ ಕಟ್ಟಿದರೂ ಸುದೀರ್ಘ ಕಾಲ ಉಳಿಯುವುದು ಕಷ್ಟ ಎಂದು ಮಾಜಿ ಸಚಿವ ಬಿಜೆಪಿಯ ಹಿರಿಯ ನಾಯಕ ಬಿ. ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿ : ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೊಸ ರಾಜಕೀಯ ಪಕ್ಷ ಕಟ್ಟುವುದು ಊಹಾಪೋಹ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮಾನ್ಯತೆ ಸಿಗುವುದು ಕಷ್ಟ. ಯಾರೇ ಪ್ರಾದೇಶಿಕ ಪಕ್ಷ ಕಟ್ಟಿದರೂ ಸುದೀರ್ಘ ಕಾಲ ಉಳಿಯುವುದು ಕಷ್ಟ ಎಂದು ಮಾಜಿ ಸಚಿವ ಬಿಜೆಪಿಯ ಹಿರಿಯ ನಾಯಕ ಬಿ. ಶ್ರೀರಾಮುಲು ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯತ್ನಾಳ್ ಪಕ್ಷ ಕಟ್ಟುತ್ತಾರೆಂಬ ವಿಚಾರ ನನಗೆ ಗೊತ್ತಿಲ್ಲ. ನಾನೂ ಸಹ ಹಿಂದೆ ಸ್ವಂತ ರಾಜಕೀಯ ಪಕ್ಷ ಕಟ್ಟಿದೆ. ಆದರೆ, ಯಶಸ್ವಿಯಾಗಲಿಲ್ಲ ಎಂದರು.
ಬೆಂಗಳೂರು ಅರಮನೆ ವಿವಾದ ಕುರಿತು ಪ್ರತಿಕ್ರಿಯಿಸಿ, ಮೈಸೂರು ರಾಜಮನೆತನಕ್ಕೆ ಸೇರಿದ ಬೆಂಗಳೂರು ಅರಮನೆ ಮೈದಾನವನ್ನು ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರ ಭೂಸ್ವಾಧೀನ ಮಸೂದೆ ಜಾರಿಗೆ ತಂದಿರುವುದು ಕಾಂಗ್ರೆಸ್ಸಿನ ದ್ವೇಷದ ರಾಜಕೀಯಕ್ಕೆ ಹಿಡಿದ ಕನ್ನಡಿ. ಅರಮನೆ ಮೈದಾನದ ಜಾಗ ವಶಪಡಿಸಿಕೊಳ್ಳುವ ಪ್ರಕರಣ ಸುಪ್ರೀಂಕೋಟ್೯ನಲ್ಲಿ ವಿಚಾರಣೆ ನಡೆಯುತ್ತಿರುವ ನಡುವೆಯೂ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿದೆ. ಇದು ರಾಜಕೀಯ ವೈಷಮ್ಯದಿಂದ ಕೂಡಿದ ನಿಲುವು ಎಂಬುದು ಎಂಥವರಿಗೂ ಗೊತ್ತಾಗುತ್ತದೆ ಎಂದರು.