ಲೋಕಸಭೆ ಆಯ್ತು, ಈಗ ಪರಿಷತ್‌ ಚುನಾವಣೆ ಕಾವು

| Published : May 14 2024, 01:09 AM IST / Updated: May 14 2024, 04:27 AM IST

lok-sabha-election-2024-madhya-pradesh-4th-phase-voting-updates

ಸಾರಾಂಶ

ಗ್ಯಾರಂಟಿ ಯೋಜನೆಗಳನ್ನು ಬಳಸಿಕೊಂಡು ಬಿಜೆಪಿಯಿಂದ ಕ್ಷೇತ್ರವನ್ನು ಕಾಂಗ್ರೆಸ್ ವಶಪಡಿಸಿಕೊಳ್ಳಬೇಕೆಂದು ಕಾಂಗ್ರೆಸ್ ತಂತ್ರದಲ್ಲಿ ತೊಡಗಿದ್ದರೆ, ಮತ್ತೊಮ್ಮೆ ಹಾಲಿ ಶಾಸಕ ವೈ.ಎ.ನಾರಾಯಣಸ್ವಾಮಿ ಅವರನ್ನೇ ಕಣಕ್ಕಿಳಿಸಿ ಗೆಲ್ಲಲು ಬಿಜೆಪಿ ಪ್ರತಿತಂತ್ರದಲ್ಲಿ ತೊಡಗಿದೆ

 ಬಂಗಾರಪೇಟೆ :  ಲೋಕಸಭೆ ಚುನಾವಣೆಯ ಕಾವು ಆರುವ ಮುನ್ನವೇ ವಿಧಾನ ಪರಿಷತ್ ಚುನಾವಣೆಯ ಬಿಸಿ ಆರಂಭವಾಗಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಜೂನ್ 3 ರಂದು ಮತದಾನ ನಡೆಯಲಿದ್ದು ರಾಜಕೀಯ ಪಕ್ಷಗಳು ಮತ್ತೆ ಪ್ರಚಾರ ಕಣಕ್ಕಿಳಿಯಲು ಸಿದ್ಧತೆ ನಡೆಸಿವೆ. ಈ ಕ್ಷೇತ್ರಕ್ಕೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡಿದೆ.

ಕ್ಷೇತ್ರದ ಹಾಲಿ ಸದಸ್ಯರಾಗಿರುವ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಮತ್ತೆ ಕಣದಲ್ಲಿದ್ದಾರೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದ ಡಿ.ಟಿ.ಶ್ರೀನಿವಾಸ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಬಿಜೆಪಿ- ಕಾಂಗ್ರೆಸ್‌ ನಡುವೆ ಸ್ಫರ್ಧೆ

ಈ ಬಾರಿ ಗ್ಯಾರಂಟಿ ಯೋಜನೆಗಳನ್ನು ಬಳಸಿಕೊಂಡು ಬಿಜೆಪಿಯಿಂದ ಕ್ಷೇತ್ರವನ್ನು ಕಾಂಗ್ರೆಸ್ ವಶಪಡಿಸಿಕೊಳ್ಳಬೇಕೆಂದು ಕಾಂಗ್ರೆಸ್ ತಂತ್ರದಲ್ಲಿ ತೊಡಗಿದ್ದರೆ, ಮತ್ತೊಮ್ಮೆ ಹಾಲಿ ಶಾಸಕ ವೈ.ಎ.ನಾರಾಯಣಸ್ವಾಮಿ ಅವರನ್ನೇ ಕಣಕ್ಕಿಳಿಸಿ ಗೆಲ್ಲಲು ಬಿಜೆಪಿ ಪ್ರತಿತಂತ್ರದಲ್ಲಿ ತೊಡಗಿದೆ.

ಚುನಾವಣೆ ಘೋಷಣೆಗೂ ಮೊದಲೇ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಮತ್ತು ಅವರ ಪತ್ನಿ ಮಾಜಿ ಶಾಸಕಿ ಪೂರ್ಣೀಮಾ ರವರು ಪ್ರತ್ಯೇಕವಾಗಿ ಒಂದು ಸುತ್ತನ ಪ್ರಚಾರ ಮುಗಿಸಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ, ತಾವು ಶಿಕ್ಷಕರ ಎಲ್ಲಾ ಸಮಸ್ಯೆಗಳನ್ನು ನೀಗಿಸಿರುವುದರಿಂದ ಮತದಾರರೇ ನನ್ನ ಪರವಾಗಿ ಪ್ರಚಾರ ಮಾಡಿ ಗೆಲ್ಲಿಸುವರು ಎಂಬ ವಿಶ್ವಾಸವನ್ನು ಹೊಂದಿದ್ದಾರೆ.

ಅಧಿಕಾರಿಗಳಿಗೆ ಬಿಡುವಿಲ್ಲದ ಕಾರ್ಯ

ಲೋಕಸಭೆ ಚುನಾವಣೆಯನ್ನು ಮುಗಿಸಿ ಫಲಿತಾಂಶಕ್ಕಾಗಿ ಕಾದು ಕುಳಿತಿರುವ ಎರಡೂ ಪಕ್ಷಗಳ ಕಾರ್ಯಕರ್ತರು ಇದರ ನಡುವೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಎದುರಾಗಿರುವುದು ಅಧಿಕಾರಿಗಳಿಗೆ ಬಿಡುವಿಲ್ಲದಂತೆ ಚುನಾವಣೆ ಕಾರ‍್ಯದಲ್ಲಿ ತೊಡಗುವಂತಾಗಿದ್ದರೆ,ರಾಜಕೀಯ ಪಕ್ಷಗಳಿಗೆ ಮತ್ತೊಮ್ಮೆ ಚುನಾವಣೆ ಎದುರಿಸುವುದು ಸವಾಲಿನ ಪ್ರಶ್ನೆಯಾಗಿದೆ.ಕ್ಷೇತ್ರದಲ್ಲಿ ೪೦೦ಕ್ಕೂ ಹೆಚ್ಚಿನ ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು ಇದರಲ್ಲಿ ಬಹುತೇಕ ಶಿಕ್ಷಕರು ಹಾಲಿ ಶಾಸಕ ವೈ.ಎ.ನಾರಾಯಣಸ್ವಾಮಿ ಪರ ನಿಂತಿದ್ದಾರೆ ಎನ್ನಲಾಗಿದ್ದು, ಇದು ಕಾಂಗ್ರೆಸ್ ಅಭ್ಯರ್ಥಿಗೆ ಸವಾಲಿನ ಪ್ರಶ್ನೆಯಾಗಿದೆ. ಅಲ್ಲದೆ ಕೋಲಾರ ಜಿಲ್ಲೆಯಲ್ಲಿ ಆರು ವಿಧಾನಸಭೆ ಕ್ಷೇತ್ರಗಳಲ್ಲಿ ೪ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಬಿಜೆಪಿಯ ಒಬ್ಬ ಶಾಸಕರೂ ಇಲ್ಲ. ಆದರೆ ಬಿಜೆಪಿ ಮಿತ್ರ ಪಕ್ಷವಾದ ಜೆಡಿಎಸ್‌ನ ಇಬ್ಬರು ಶಾಸಕರಿದ್ದಾರೆ. ಎರಡೂ ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆ

ಈ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಬಿಜೆಪಿ ಮತ್ತು ಕಾಂಗ್ರೆಸ್ ಪ್ರತಿಷ್ಠೆಯಾಗಿ ಪರಿಗಣಿಸಿರುವುದರಿಂದ ಚುನಾವಣೆ ತೀವ್ರ ಜಿದ್ದಾಜಿದ್ದಿಯಿಂದ ಕೂಡಿದೆ. ಚುನಾವಣೆ ಘೋಷಣೆ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಶಿಕ್ಷಕರ ಸಭೆಯನ್ನು ಕರೆದು ಬೆಂಬಲ ಕೋರಿದ್ದಾರೆ, ಆದರೆ ಬಿಜೆಪಿ ಅಭ್ಯರ್ಥಿ ಇದುವರೆಗೂ ಕ್ಷೇತ್ರದ ಕಡೆ ಇನ್ನೂ ಮುಖ ಮಾಡಿಲ್ಲವಾದರೂ ಅವರ ಬೆಂಬಲಿತ ಶಿಕ್ಷಕರು ಮಾತ್ರ ಅವರ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸರ್ಕಾರದ ೫ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಹಾಗೂ ಪಕ್ಷದ ಅಭ್ಯರ್ಥಿ ಗೆದ್ದರೆ ಶಿಕ್ಷಕರ ಸಮಸ್ಯೆಗಳ ಬಗ್ಗೆ ವಿಧಾನಪರಿಷತ್‌ನಲ್ಲಿ ಧ್ವನಿ ಎತ್ತಲು ಅನುಕೂಲವಾಗಲಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ.ಇಷ್ಟುದಿನ ಸುಮ್ಮನಿದ್ದ ಶಿಕ್ಷಕರು ಈಗ ಅಲ್ಲಲ್ಲಿ ಗುಂಪು ಕಟ್ಟಿಕೊಂಡು ಪಾರ್ಟಿಗಳನ್ನು ಮಾಡಿಕೊಂಡು ಇಂತವರಿಗೇ ಮತ ಹಾಕಬೇಕೆಂದು ರಾಜಕೀಯ ಪಕ್ಷಗಳ ನಾಯಕರಂತೆ ಪ್ರಚಾರ ಆರಂಭಿಸಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿಯ ಸೋಲು- ಗೆಲುವು ಕುತೂಹಲ ಕೆರಳಿಸಿದೆ.