ಸಾರಾಂಶ
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮರುದಿನವೇ ಮೇಕೆದಾಟು ಯೋಜನೆಗೆ ಅನುಮೋದನೆ ನೀಡುವಂತೆ ನೋಡಿಕೊಳ್ಳುತ್ತೇವೆ. ಅದಕ್ಕಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರನ್ನು ಗೆಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಬೆಂಗಳೂರು : ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮರುದಿನವೇ ಮೇಕೆದಾಟು ಯೋಜನೆಗೆ ಅನುಮೋದನೆ ನೀಡುವಂತೆ ನೋಡಿಕೊಳ್ಳುತ್ತೇವೆ. ಅದಕ್ಕಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರನ್ನು ಗೆಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರವಾಗಿ ರೋಡ್ ಶೋ ಮೂಲಕ ಮತಯಾಚಿಸಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ಪರವಾಗಿ ಸಂಸತ್‌ನಲ್ಲಿ ಧ್ವನಿ ಎತ್ತದ ತೇಜಸ್ವಿ ಸೂರ್ಯ ಯಾವ ಮುಖ ಇಟ್ಟುಕೊಂಡು ಜನರ ಬಳಿ ಮತಯಾಚಿಸುತ್ತಿದ್ದಾರೆ. ಬೆಂಗಳೂರು ನಗರದ ನೀರಿನ ಸಮಸ್ಯೆಗೆ ಪರಿಹಾರವಾಗಬಹುದಾದ ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸರ್ಕಾರದಲ್ಲಿ ಮಾತನಾಡದೇ ಮೋಸ ಮಾಡಿದ್ದಾರೆ.
ಮೇಕೆದಾಟು ಯೋಜನೆ ಜಾರಿಯಾಗಬೇಕೆಂದರೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಅಧಿಕಕ್ಕ್ಕೆ ಬಂದ ಮರುದಿನವೇ ಯೋಜನೆಗೆ ಒಪ್ಪಿಗೆ ನೀಡಲಾಗುವುದು. ಅದಕ್ಕಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರನ್ನು ಗೆಲ್ಲಿಸುವ ಅಗತ್ಯವಿದೆ. ಮತದಾರರು ಈ ಬಾರಿ ಸೌಮ್ಯಾರೆಡ್ಡಿ ಅವರ ಪರವಾಗಿ ನಿಲ್ಲಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಅನುಮತಿ ನೀಡಲಿಲ್ಲ. ಆ ಬಗ್ಗೆ ತೇಜಸ್ವಿ ಸೂರ್ಯ ಮಾಡತನಾಡಲಿಲ್ಲ. ಬೆಂಗಳೂರು ದಕ್ಷಿಣದಲ್ಲಿ ಕುಡಿಯುವ ನೀರಿಗೆ ಕಾವೇರಿ ಸಂಪರ್ಕ ಆಗಬೇಕಿದೆ. ಈವರೆಗೆ ಶೇ. 60ರಷ್ಟು ಮನೆಗಳಿಗೆ ಮಾತ್ರ ಕಾವೇರಿ ನೀರಿನ ಸಂಪರ್ಕ ಸಿಕ್ಕಿದ್ದು, ಮೇಕೆದಾಟು ಯೋಜನೆ ಜಾರಿಯಾದರೆ ಎಲ್ಲ ಮನೆಗಳಿಗೂ ಸಮರ್ಪಕವಾಗಿ ಕಾವೇರಿ ನೀರು ಪೂರೈಸಬಹುದು ಎಂದು ಹೇಳಿದರು.
ವಿಧಾನಸಭಾ ಚುನಾವಣೆಯ ಮತ ಎಣಿಕೆ ವೇಳೆ ಸೌಮ್ಯಾರೆಡ್ಡಿ ಅವರಿಗೆ ಅನ್ಯಾಯವಾಗಿದೆ. ನ್ಯಾಯಾಲಯದಲ್ಲಿ ಅವರಿಗೆ ನ್ಯಾಯ ಸಿಗುತ್ತದೆ. ಅದಕ್ಕೂ ಮುನ್ನ ಲೋಕಸಭಾ ಚುನಾವಣೆಯಲ್ಲಿ ಜನತಾ ನ್ಯಾಯಾಲಯವು ಸೌಮ್ಯಾ ರೆಡ್ಡಿ ಅವರಿಗೆ ನ್ಯಾಯ ಕೊಡಬೇಕು ಎಂದರು.
\Bಬಿಸಿಲ ನಡುವೆ ಬಿರುಸಿನ ಪ್ರಚಾರ:\B
ಬಿರುಬಿಸಿಲಿನ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ದಿನ ರೋಡ್ ಶೋ ನಡೆಸಿ ಸೌಮ್ಯಾ ರೆಡ್ಡಿ ಪರವಾಗಿ ಮತಯಾಚಿಸಿದರು. ಜಯನಗರ, ಚಿಕ್ಕಪೇಟೆ, ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಬಡಾವಣೆಗಳಲ್ಲಿ ಮತ ಯಾಚನೆ ಮಾಡಿದ ಸಿದ್ದರಾಮಯ್ಯ, ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಹೋದಲ್ಲೆಲ್ಲ ಜನರು ಹೂವಿನ ಮಳೆ ಸುರಿಸಿ ಸ್ವಾಗತಿಸಿದರು. ಒಂದು ಹಂತದಲ್ಲಿ ಬಿಸಿಲಿನ ಝಳ ತಾಳಲಾರದ ಸಿದ್ದರಾಮಯ್ಯ ಛತ್ರಿಯ ನೆರಳಿನಲ್ಲಿ ಪ್ರಚಾರ ನಡೆಸಿದರು.
ದಿವಾಳಿಯಾಗಿರುವುದು ರಾಜ್ಯವಲ್ಲ, ಬಿಜೆಪಿಗರ ಬುದ್ದಿ: ಸಿಎಂ
ರಾಜ್ಯ ಸರ್ಕಾರ ಸುಭದ್ರವಾಗಿದೆ. ಆದರೆ, ದಿವಾಳಿಯಾಗಿರುವುದು ಬಿಜೆಪಿ ನಾಯಕರ ಬುದ್ಧಿ. ದಿನಕ್ಕೊಂದು ಸುಳ್ಳು ಹೇಳುತ್ತಾ. ಆ ಸುಳ್ಳು ಬಯಾಲಾದಾಗ ಅದನ್ನು ಸಮರ್ಥಿಸಲು ಇನ್ನೊಂದಿಷ್ಟು ಸುಳ್ಳು ಸೃಷ್ಟಿಸಿ ತಮ್ಮನ್ನು ತಾವೇ ಬೆತ್ತಲೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರದ ಬಳಿ ಹಣವಿಲ್ಲದೆ ರಾಜ್ಯದ ದಿವಾಳಿಯಾಗಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪತ್ರಿಕಾ ಹೇಳಿಕೆ ಮೂಲಕ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಕಳೆದ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 10 ಸಾವಿರ ಕೋಟಿ ರು. ಸಾಲ ಮಾಡಿದ್ದ ಕಾರಣಕ್ಕೆ ರಾಜ್ಯ ದಿವಾಳಿಯಾಗುತ್ತಿದೆ ಎಂದು ಬಿಜೆಪಿ ನಾಯಕರು ಬೊಬ್ಬಿಡುತ್ತಿದ್ದಾರೆ. ಆದರೆ, ಅವರ ಸರ್ಕಾರದ ಅವಧಿಯಲ್ಲಿ ಮಾಡಿದ ಸಾಲದ ಲೆಕ್ಕ ಪರಿಶೀಲಿಸುವ ಕಷ್ಟ ತೆಗೆದುಕೊಂಡಿದ್ದರೆ ನಮ್ಮ ಕೈಗೆ ಬಡಿಗೆ ಕೊಟ್ಟು ಹೊಡೆಸಿಕೊಳ್ಳುವ ಪರಿಸ್ಥಿತಿ ಬಿಜೆಪಿಗೆ ಬರುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ 2020-21ರಲ್ಲಿ 84,528 ಕೋಟಿ ರು., 2021-22ರಲ್ಲಿ 67,332 ಕೋಟಿ ರು. ಹಾಗೂ 2022-23ರಲ್ಲಿ 72 ಸಾವಿರ ಕೋಟಿ ರು. ಸಾಲ ಮಾಡಿದ್ದರು. ಈಗ ಆ ಸಾಲವನ್ನು ನಾವು ತೀರಿಸಬೇಕಿದೆ. ನಮ್ಮ ಸರ್ಕಾರದ ಮೇಲೆ ಆರೋಪ ಮಾಡುವುಕ್ಕೂ ಮುನ್ನ ಕನಿಷ್ಠ ಬಸವರಾಜ ಬೊಮ್ಮಾಯಿ ಅವರನ್ನಾದರೂ ಒಮ್ಮೆ ಕೇಳುವುದು ಬೇಡವೇ? ಎಂದಿದ್ದಾರೆ.
ಬಿಜೆಪಿ ನಾಯಕರೇ ಆಡಳಿತ, ಆರ್ಥಿಕತೆ, ಅಭಿವೃದ್ಧಿ ವಿಚಾರಗಳು ನಿಮ್ಮ ಚಹದ ಬಟ್ಟಲಲ್ಲ. ಕೋಮುವಾದ, ಪಾಕಿಸ್ತಾನ, ಮುಸ್ಲಿಂ ಲೀಗ್ ಸೇರಿದಂತೆ ಇನ್ನಿತರ ವಿಚಾರಗಳನ್ನು ಜನರ ತಲೆಗೆ ತುಂಬಿ ಸೌಹಾರ್ದತೆಯನ್ನು ಹಾಳು ಮಾಡಿ ಸಂಘರ್ಷಕ್ಕಿಳಿಸುವ ಮೂಲಕ ರಾಜಕೀಯ ಲಾಭ ಪಡೆಯಲಷ್ಟೇ ನೀವು ಸಮರ್ಥರು. ಸುಳ್ಳು ರಾಮಯ್ಯ ಯಾರು? ಸತ್ಯ ರಾಮಯ್ಯ ಯಾರು? ಎಂಬುದನ್ನು ರಾಜ್ಯದ ಜನರು ತಿಳಿದಿದ್ದಾರೆ. ಈ ಚುನಾವಣೆಯಲ್ಲಿ ಅವರು ನಿಮಗೆ ಉತ್ತರವನ್ನೂ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಸ್ವಾತಂತ್ರ್ಯ ಬಂದಾಗಿನಿಂದ 2018ರವರೆಗಿನ ರಾಜ್ಯ ಸರ್ಕಾರದ ಒಟ್ಟು ಸಾಲದ ಮೊತ್ತ 2.42 ಲಕ್ಷ ಕೋಟಿ ರು. ಅದೇ 2022-23ರ ವೇಳೆಗೆ 5.40 ಲಕ್ಷ ಕೋಟಿ ರು.ಗೆ ಏರಿದೆ. 2018-2023ರವರೆಗೆ ಕೇವಲ ಐದು ವರ್ಷಗಳಲ್ಲಿ 3 ಲಕ್ಷ ಕೋಟಿ ರು. ಸಾಲ ಹೆಚ್ಚಾಗಿದೆ. ಆಗ ಯಾವ ಪಕ್ಷ ಆಡಳಿತದಲ್ಲಿತ್ತು ಎನ್ನುವುದನ್ನು ಬಿಜೆಪಿ ನಾಯಕರು ಜನರಿಗೆ ತಿಳಿಸಲಿ.