ಮುಡಾ ಹಗರಣ : ಏನೇ ಕುತಂತ್ರ ಮಾಡಿದರೂ ರಾಜ್ಯದ ಜನತೆ ಸಿಎಂ ಸಿದ್ದರಾಮಯ್ಯರ ಜೊತೆಗಿದ್ದಾರೆ

| Published : Aug 20 2024, 12:46 AM IST / Updated: Aug 20 2024, 04:36 AM IST

ಸಾರಾಂಶ

ಮುಡಾ ಹಗರಣ ಬಿಜೆಪಿ ಮತ್ತು ಜೆಡಿಎಸ್ ಷಡ್ಯಂತ್ರ ವಾಗಿದೆ. ಅವರು ಏನೆ ಕುತಂತ್ರ ಮಾಡಿದರೂ ರಾಜ್ಯದ ಜನತೆ ಸಿದ್ದರಾಮಯ್ಯರ ಜೊತೆಗಿದ್ದಾರೆ. ಎಲ್ಲ ಕಾಂಗ್ರೆಸ್‌ ಶಾಸಕರು ಮತ್ತು ಹೈಕಮಾಂಡ್ ಅವರ ಬೆನ್ನಿಗೆ ನಿಂತಿದೆ - ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್  

 ಕೋಲಾರ  : ಮುಡಾ ಹಗರಣ ಬಿಜೆಪಿ ಮತ್ತು ಜೆಡಿಎಸ್ಷಡ್ಯಂತ್ರವಾಗಿದೆ. ಅವರು ಏನೆ ಕುತಂತ್ರ ಮಾಡಿದರೂ ರಾಜ್ಯದ ಜನತೆ ಸಿದ್ದರಾಮಯ್ಯರ ಜೊತೆಗಿದ್ದಾರೆ. ಎಲ್ಲ ಕಾಂಗ್ರೆಸ್‌ ಶಾಸಕರು ಮತ್ತು ಹೈಕಮಾಂಡ್ ಅವರ ಬೆನ್ನಿಗೆ ನಿಂತಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್ ತಿಳಿಸಿದರು.ನಗರದ ಕಾಂಗ್ರೆಸ್ ಭವನದಿಂದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಸಂಘಟಿತರಾಗಿ ಪಾದಯಾತ್ರೆ ಮೂಲಕ ಮೆಕ್ಕೆವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿದ ನಂತರ ಮಾತನಾಡಿದರು.

ಗ್ಯಾರಂಟಿ ಜನಪ್ರಿಯತೆ:

ಸಿದ್ದರಾಮಯ್ಯರ ಚುನಾವಣೆಗೆ ಮುನ್ನ ಬಡಜನತೆಯ ಪರವಾಗಿ ಘೋಷಿಸಿದ ೫ ಗ್ಯಾರಂಟಿಗಳ ಜನಪ್ರಿಯತೆ ಸಹಿಸಲಾಗದೆ ಮುಂಬರಲಿರುವ ಪಂಚಾತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉಂಟಾಗಲಿರುವ ಮುಖಭಂಗದಿಂದ ಜಾರಿಕೊಳ್ಳಲು ಸಿದ್ದರಾಮಯ್ಯರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಜನತೆಯ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ, ಆದರೆ ಜನತೆಗೆ ಸಿದ್ದರಾಮಯ್ಯರ ಆಡಳಿತದ ಮೇಲೆ ವಿಶ್ವಾಸವಿದೆ ಎಂದರು. ಸಿದ್ದರಾಮಯ್ಯ ಕಳೆದ ೪೫ ವರ್ಷಗಳ ಆಡಳಿತದಲ್ಲಿ ಎಂದೂ ಸಹ ಒಂದು ಕಪ್ಪು ಚುಕ್ಕೆ ಬಾರದಂತೆ ಜವಾಬ್ದಾರಿಯಿಂದ ಭ್ರಷ್ಟಚಾರ ಮುಕ್ತ ಆಡಳಿತ ನೀಡಿದ್ದಾರೆ. ಆದರೆ ಬಿಜೆಪಿ-ಜೆಡಿಎಸ್ ಪಕ್ಷವು ರಾಜ್ಯಪಾಲರ ಮೇಲೆ ಕೇಂದ್ರದಿಂದ ಒತ್ತಡ ಹೇರಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿಗೆ ನೀಡಿದ್ದಾರೆ, ಆದರೆ ಹೈಕೋರ್ಟ್‌ನಲ್ಲಿ ನ್ಯಾಯಧೀಶರು ಸಿದ್ದರಾಮಯ್ಯರ ಪರ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ. ಯಾರೋ ಆರ್.ಟಿ.ಐ ಕಾರ್ಯಕರ್ತ ಟಿ.ಬಿ.ಅಬ್ರಾಹಿಂ ನೀಡಿದ್ದ ಅರ್ಜಿ ಪರಾರಿಮಾರ್ಶೆ ಮಾಡದೆ, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ರಾಜ್ಯಪಾಲರ ತಾರತಮ್ಯ ಸ್ಪಷ್ಟವಾಗಲಿದೆ ಎಂದರು.

ಸಿಎಂ ವಿರುದ್ಧ ಸುಳ್ಳು ಆರೋಪ

ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಸಿದ್ದರಾಮಣ್ಣರ ಕಳೆದ ೪೫ ವರ್ಷಗಳ ಆಡಳಿತದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಪ್ರಾಮಾಣಿಕವಾಗಿ ಆಡಳಿತ ನಡೆಸಿದ್ದಾರೆ, ಇವರ ಜನಪರ ಆಡಳಿತವನ್ನು ಎದುರಿಸಲಾಗದೆ ಬಿಜೆಪಿ ಮತ್ತು ಜೆ.ಡಿ.ಎಸ್ ಪಕ್ಷವು ಕಳೆದ ೨೦-೨೫ ವರ್ಷಗಳ ಹಿಂದಿನ ಪ್ರಕರಣಗಳಿಗೆ ಬಣ್ಣಕಟ್ಟಿ ಸಿದ್ದರಾಮಯ್ಯರ ಮೇಲೆ ಸುಳ್ಳು ಆರೋಪಗಳ ಕುತಂತ್ರಗಳನ್ನು ಹೂಡಿ ಜನತೆಯನ್ನು ದಿಕ್ಕು ತಪ್ಪಿಸುವಂತ ಹೀನಾಯ ಕೃತ್ಯಕ್ಕೆ ಮುಂದಾಗಿರುವುದನ್ನು ರಾಜ್ಯದ ಜನತೆ ಖಂಡಿಸಿ ಇಡೀ ರಾಜ್ಯದಲ್ಲಿ ಪ್ರತಿಭಟನೆಗಳು ನಡೆಸಲಾಗುತ್ತಿದೆ ಎಂದರು.

ನ್ಯಾಯ ಕೇಳಲು ಬಂದಿದ್ದೇವೆ

ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ನಾವು ನ್ಯಾಯ ಕೇಳಲು ಬಂದಿದ್ದೇವೆ, ಪವಿತ್ರವಾದ ರಾಜಭವನವು ಇಂದು ಕೇಂದ್ರ ಸರ್ಕಾರದ ಒತ್ತಡದ ಪರಿಣಾಮವಾಗಿ ಬಿಜೆಪಿ ಭವನವಾಗಿ ಪರಿವರ್ತನೆಯಾಗಿದೆ. ರಾಜ್ಯಪಾಲರ ಭವನದ ಫಲಕ ಬದಲಾಯಿಸಿ ಬಿಜೆಪಿ ಭವನವೆಂದು ಹಾಕಿದರೆ ಅರ್ಥಪೂರ್ಣವಾಗಿರುತ್ತೆ ಎಂದು ವ್ಯಂಗವಾಡಿದರು.

ಎಂಎಲ್ಸಿ ಎಂ.ಎಲ್.ಅನಿಲ್‌ಕುಮಾರ್, ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ, ವಕ್ತಾರ ದಯಾನಂದ್, ನಗರಸಭೆ ಸದಸ್ಯ ಅಂಬರೀಷ್, ಮಾಜಿ ಸದಸ್ಯ ಸಿ.ಸೋಮಶೇಖರ್, ವಕ್ಕಲೇರಿ ರಾಜಪ್ಪ, ವರದೇನಹಳ್ಳಿ ವೆಂಕಟೇಶ್, ಕುಡಾ ಅಧ್ಯಕ್ಷ ಮಹ್ಮದ್ ಅನಿಫ್ ಮಾಡಿ ಅಧ್ಯಕ್ಷ ಅಬ್ದುಲ್ ಖಯ್ಯೊಂ,ಜಫ್ರುಲ್ಲಾ, ಷಂಶುದ್ದೀನ್ ಬಾಬು, ಮುಳಬಾಗಿಲಿನ ಅದಿನಾರಾಯಣ, ಆಲಂಗೂರು ಶಿವಣ್ಣ, ನೀಲಕಂಠೇಗೌಡ, ಮಾಲೂರು ಅಂಜನಿ ಸೋಮಣ್ಣ, ಶ್ರೀನಿವಾಸಪುರ ಬೈಚಪ್ಪ. ಕೋಲಾರದ ಮುಖಂಡರಾದ ಊರುಬಾಗಿಲು ಶ್ರೀನಿವಾಸ್, ,ವೈ ಶಿವಕುಮಾರ್, ಪ್ರಸಾದ್ ಬಾಬು, ಜಯದೇವ, ಹಾರೋಹಳ್ಳಿ ಬಾಬು, ಸುದೀರ್, ಮಮತಾರೆಡ್ಡಿ, ಕೀಲುಕೋಟೆ ಜಯಕೃಷ್ಣ(ಜೆ.ಕೆ.) ಯುವಕಾಂಗ್ರೇಸ್ ಭರತ್‌ರಾಯ್, ಬಾಲು, ಅಮರನಾಥ್, ವಿಶ್ವನಾಥ್, ತರುಣ್ ಇದ್ದರು.