ಸಾರಾಂಶ
ಕೋಲಾರ : ರಾಜ್ಯದ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಲಾಭವನ್ನು ಪ್ರತಿಯೊಬ್ಬರಿಗೂ ಸಿಗುವಂತೆ ಮಾಡುವುದು ಸಮಿತಿಯ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಹೇಳಿದರು.
ನಗರದ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ನೂತನ ಕಚೇರಿ ಉದ್ಘಾಟನೆ ಹಾಗೂ ಸಮಿತಿ ಅಧ್ಯಕ್ಷ ವೈ ಶಿವಕುಮಾರ್ ಸೇರಿದಂತೆ ಉಪಾಧ್ಯಕ್ಷರು ಹಾಗೂ ಸದಸ್ಯರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಫಲಾನುಭವಿಗಳನ್ನು ಗುರುತಿಸಿ
ಸಮಿತಿ ಸದಸ್ಯರಿಗೆ ಎಸಿ ಕಚೇರಿಯಲ್ಲಿ ಕಾಲಕಳೆಯಲು ಅಧಿಕಾರ ಕೊಟ್ಟಿಲ್ಲ. ಜಿಲ್ಲೆಯಲ್ಲಿರುವ ಬಡವರಿಗೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿದ್ದಾರೆ ಅವರನ್ನು ಗ್ರಾಮ ಮಟ್ಟದಲ್ಲಿ ಗುರುತಿಸಿ ಅವರಿಗೆ ಆಗಿರುವ ತೊಂದರೆಗಳನ್ನು ಸರಿಪಡಿಸಿ ಯೋಜನೆಗಳ ಫಲಾನುಭವಿಗಳಾಗಿ ಮಾಡಬೇಕು ಎಂದರು.ರಾಜ್ಯದಲ್ಲಿ ಹಸಿದವರಿಗೆ ಗ್ಯಾರಂಟಿ ಯೋಜನೆಗಳ ಬೆಲೆ ಗೊತ್ತಾಗುತ್ತದೆ ವಿರೋಧ ಪಕ್ಷದವರಿಗೆ ಏನು ಗೊತ್ತಿದೆ ರಾಜ್ಯದಲ್ಲಿ ವಿರೋಧ ಪಕ್ಷವು ಬರೀ ಜಾತಿ ಜನಾಂಗಗಳ ನಡುವೆ ಗಲಾಟೆ ಮಾಡಿ ರಾಜಕಾರಣ ಮಾಡಲು ಹೊರಟಿದ್ದಾರೆ. ಆಡಳಿತ ಪಕ್ಷದವರಿಂದ ಜನತೆಗೆ ಯಾವುದೇ ಯೋಜನೆಗಳಿಲ್ಲ ಅನುದಾನ ಕೊಡಲು ಹಣ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಬಡವರಿಗೆ ಜನಪರ ಯೋಜನೆಗಳನ್ನು ಕೊಡಲು ಅವರಿಗೆ ಯೋಗ್ಯತೆ ಇಲ್ಲ ಬರಿ ಆಡಳಿತ ಪಕ್ಷದ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಗ್ಯಾರಂಟಿಗೆ ₹ 56 ಸಾವಿರ ಕೋಟಿ
ರಾಜ್ಯ ಸರಕಾರವು ಗ್ಯಾರಂಟಿ ಯೋಜನೆಗಳಿಗಾಗಿ ವರ್ಷಕ್ಕೆ ೫೬ ಸಾವಿರ ಕೋಟಿ ಹಣ ಮೀಸಲಿಟ್ಟಿದೆ. ಸರಕಾರವು ಪಕ್ಷಾತೀತವಾಗಿ ಕೆಲಸ ನಿರ್ವಹಿಸುತ್ತಾ ಸರ್ಕಾರದ ಎಲ್ಲಾ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ದೊರೆಯುವಂತೆ ಮಾಡಿದ್ದಾರೆ ಇದರಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿಯಿಲ್ಲ. ಸಮಾಜಮುಖಿಯಾಗಿ ಬಡವರಿಗೆ ನೆರವಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿದ್ದರಿದ್ದಾರೆ ಎಂದರು.
ಅಧಿಕಾರ ಸ್ವೀಕರಿಸಿದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್ ಮಾತನಾಡಿ ಸರಕಾರವು ಜನಪರ ಯೋಜನೆಗಳ ಅನುಷ್ಠಾನ ಮಾಡಲು ಸಮಿತಿಯನ್ನು ನೇಮಿಸಿದ್ದು ಕೂಡಲೇ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಸಭೆ ಕರೆದು ಅಂಕಿಅಂಶಗಳನ್ನು ಸಂಗ್ರಹಿಸಿ ಪ್ರತಿಯೊಬ್ಬರನ್ನೂ ಯೋಜನೆಯ ಫಲಾನುಭವಿಗಳಾಗಿ ಮಾಡಲು ಕ್ರಮ ವಹಿಸಲಾಗುತ್ತದೆ ಎಂದರು.ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಜಿಲ್ಲಾಧಿಕಾರಿ ಅಕ್ರಂ ಪಾಷ ಅಪರ ಜಿಲ್ಲಾಧಿಕಾರಿ ಮಂಗಳ, ತಹಶಿಲ್ದಾರ್ ಎಂ.ನಯನ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಮುಖಂಡರಾದ ಕೆ.ವಿ ಗೌತಮ್, ನಾಗನಾಳ ಸೋಮಣ್ಣ, ಸಮಿತಿ ಉಪಾಧ್ಯಕ್ಷರು, ಸದಸ್ಯರು ಇದ್ದರು.