ಕಲಾಮಂದಿರದ ಅನುದಾನ ವಾಪಸಾತಿಗೆ ಕ್ಷೇತ್ರದ ಜನರೇ ಕಾರಣ

| Published : Dec 02 2023, 12:45 AM IST

ಕಲಾಮಂದಿರದ ಅನುದಾನ ವಾಪಸಾತಿಗೆ ಕ್ಷೇತ್ರದ ಜನರೇ ಕಾರಣ
Share this Article
  • FB
  • TW
  • Linkdin
  • Email

ಸಾರಾಂಶ

ಸುಸಜ್ಜಿತ ಕಲಾಮಂದಿರ ನಿರ್ಮಿಸಲು ಈ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದ ಅನುದಾನ ವಾಪಸ್ ಹೋಗಲು ತಾಲೂಕಿನ ಜನರೇ ಕಾರಣ ಹೊರತು ನಾನು ಹೊಣೆಯಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.ಪಟ್ಟಣದ ಕನ್ನಡ ಸಂಘವು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಳೆದ 7 ದಿನಗಳಿಂದ ನಡೆಸುತ್ತಿರುವ 15ನೇ ನಾಗರಂಗ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾಗಮಂಗಲದಲ್ಲಿ 15ನೇ ನಾಗರಂಗ ನಾಟಕೋತ್ಸವ ಸಮಾರೋಪ । ಸಚಿವ ಚಲುವನಾರಾಯಸ್ವಾಮಿ ಬೇಸರ

ಕನ್ನಡಪ್ರಭ ವಾರ್ತೆ ನಾಗಮಂಗಲ

ಸುಸಜ್ಜಿತ ಕಲಾಮಂದಿರ ನಿರ್ಮಿಸಲು ಈ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದ ಅನುದಾನ ವಾಪಸ್ ಹೋಗಲು ತಾಲೂಕಿನ ಜನರೇ ಕಾರಣ ಹೊರತು ನಾನು ಹೊಣೆಯಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಕನ್ನಡ ಸಂಘವು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಳೆದ 7 ದಿನಗಳಿಂದ ನಡೆಸುತ್ತಿರುವ 15ನೇ ನಾಗರಂಗ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಂಗಭೂಮಿ, ಜಾನಪದ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ತಾಲೂಕಿನ ಅನೇಕ ಮಹನೀಯರ ಕೊಡುಗೆ ಅಪಾರ. ಅಲ್ಲದೆ ಕಳೆದ 5 ದಶಕಗಳ ಹಿಂದೆ ಪಟ್ಟಣದಲ್ಲಿ ಸ್ಥಾಪಿತಗೊಂಡಿರುವ ಕನ್ನಡ ಸಂಘವು ಸಾಹಿತ್ಯಿಕವಾಗಿ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹಲವು ಸಂಘ,ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.

ಹಿಂದೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಪಟ್ಟಣದಲ್ಲಿ ಸುಸಜ್ಜಿತ ಕಲಾ ಮಂದಿರ ನಿರ್ಮಿಸಲು 50 ಲಕ್ಷ ರು. ಅನುದಾನ ಬಿಡುಗಡೆ ಮಾಡಿಸಲಾಗಿತ್ತು. ನಂತರದ ಚುನಾವಣೆಯಲ್ಲಿ ನಾನು ಸೋಲನುಭವಿಸಿದ್ದರಿಂದ ಆ ಯೋಜನೆ ಅಷ್ಟಕ್ಕೇ ನಿಂತುಹೋಗಿದೆ ಎಂದು ಹೇಳಿದರು.

ಪಟ್ಟಣದಲ್ಲಿ ಕಲಾ ಮಂದಿರ ನಿರ್ಮಾಣವಾಗಿಲ್ಲವೆಂದರೆ ಅದಕ್ಕೆ ತಾಲೂಕಿನ ಜನರು ಉತ್ತರಿಸಬೇಕೇ ಹೊರತು ಈ ಚಲುವರಾಯಸ್ವಾಮಿ ಉತ್ತರಿಸುವ ಅಗತ್ಯವಿಲ್ಲ. ನಾನು ಮಂಜೂರು ಮಾಡಿಸಿದ್ದ ಕಲಾ ಮಂದಿರಕ್ಕೆ ಐದು ವರ್ಷದಲ್ಲಿ ಜಾಗ ಗುರುತಿಸಲು ಸಾಧ್ಯವಾಗಿಲ್ಲ ಎಂದರೆ ಅದು ನನ್ನ ತಪ್ಪಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್‌ಗೌಡರನ್ನು ಜರಿದರು.

ಸಂಘದ ಪದಾಧಿಕಾರಿಗಳು ಸೂಚಿಸುತ್ತಿರುವ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಜಾಗ ಸೂಕ್ತವಲ್ಲ. ಅದು ಕೇಂದ್ರ ಸರ್ಕಾರಕ್ಕೆ ಸೇರಿದ ಜಾಗವಾಗಿದ್ದು, ಕೇಂದ್ರದಿಂದ ಸ್ಥಳಾಂತರಿಸಿಕೊಳ್ಳುವುದು ಕಷ್ಟವಾಗುತ್ತದೆ. ಹಾಗಾಗಿ ಪಟ್ಟಣದ ವ್ಯಾಪ್ತಿಯಲ್ಲಿಯೇ ಸೂಕ್ತ ಜಾಗ ಗುರುತಿಸಿ ಮುಂದಿನ ಎರಡು ವರ್ಷದಲ್ಲಿ ಸುಸಜ್ಜಿತ ಕಲಾ ಮಂದಿರ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಸ್ಥಾಪನೆಯಾಗಿ 50 ವರ್ಷ ಕಳೆದಿದೆ. ಈ ಕಟ್ಟಡವನ್ನು ಅತ್ಯಾಧುನಿಕ ರೀತಿಯಲ್ಲಿ ನವೀಕರಿಸಲು ಈಗಾಗಲೇ ರೂಪುರೇಷೆ ಸಿದ್ದಪಡಿಸಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಪಟ್ಟಣದಲ್ಲಿ ಸುಸಜ್ಜಿತ ಕಲಾ ಮಂದಿರ ನಿರ್ಮಾಣಗೊಳ್ಳುವವರೆಗೂ ರಂಗ ಚಟುವಟಿಕೆಗಳ ಅನುಕೂಲಕ್ಕಾಗಿ ಇದೇ ರಂಗಮಂದಿರವನ್ನು ದೊಡ್ಡದಾಗಿ ವಿಸ್ತರಿಸಲು ಕ್ರಮವಹಿಸಲಾಗುವುದು ಎಂದರು.

ಕಳೆದ 15ವರ್ಷಗಳಿಂದ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವ ಆಯೋಜಿಸುವ ಮೂಲಕ ನಾಡಿನ ಹಿರಿಯ ಸಾಹಿತಿಗಳು ಮತ್ತು ಕಲಾ ಪ್ರೇಕ್ಷಕರ ಗಮನ ಸೆಳೆದು ಅನೇಕ ರಂಗಕರ್ಮಿಗಳಿಗೆ ಗೌರವ ಸಲ್ಲಿಸುತ್ತಿರುವ ಕಾರ್ಯ ನಿಜಕ್ಕೂ ಅರ್ಥಪೂರ್ಣ. ಹಲವಾರು ಯುವ ಪ್ರತಿಭೆಗಳನ್ನು ಸಂಘದೆಡೆಗೆ ಸೆಳೆದು ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಕಲೆ, ಸಾಹಿತ್ಯ ಹಾಗೂ ನಾಡಿನ ಸಂಸ್ಕೃತಿಯನ್ನು ಎಲ್ಲೆಡೆ ಬಿತ್ತರಿಸುವಂತೆ ಮಾಡಲಾಗುತ್ತಿದೆ ಎಂದರು.

ಬಳಿಕ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಗೌರವಾರ್ಪಣೆ ಸಲ್ಲಿಸಿದ ಸಂಘದ ಪದಾಧಿಕಾರಿಗಳು ಶೀಘ್ರದಲ್ಲಿ ಕಲಾ ಮಂದಿರ ನಿರ್ಮಾಣಕ್ಕೆ ಕ್ರಮವಹಿಸುವಂತೆ ಮನವಿ ಪತ್ರ ಸಲ್ಲಿಸಿದರು.

-------