ಕಾಂಗ್ರೆಸ್‌ ಗೆಲುವಿಗೆ ಜನಪರ ಯೋಜನೆಗಳೇ ಕಾರಣ : ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ

| Published : Nov 25 2024, 01:02 AM IST / Updated: Nov 25 2024, 04:12 AM IST

ಸಾರಾಂಶ

ಕೋಲಾರ, ಬೆಂಗಳೂರು ಗ್ರಾಮಾಂತರ ಪ್ರದೇಶದ ನೇತೃತ್ವವನ್ನು ಸಚಿವ ಕೆ.ಎಚ್.ಮುನಿಯಪ್ಪ ವಹಿಸಿದ್ದು ಅಭೂತಪೂರ್ವ ಯಶಸ್ವಿಗೆ ಕಾರಣರಾದರು, ವಿಪಕ್ಷಗಳು ವಾಲ್ಮೀಕಿ, ಮುಡಾ ಸೇರಿದಂತೆ ಅನೇಕ ಅಪಾಧನೆಗಳು ಮಾಡಿದರೂ, ಅವಹೇಳನಾ ಮಾಡದರೂ ಸಹ ಎಲ್ಲವನ್ನು ತಿರಸ್ಕರಿಸಿ ತಕ್ಕ ಪಾಠ ಕಲಿಸಿದ್ದಾರೆ.

 ಕೋಲಾರ  : ರಾಜ್ಯದಲ್ಲಿ ವಿಧಾನಸಭೆಗೆ ನಡೆದ ಮೂರು ಉಪಚುನಾವಣೆಯಲ್ಲಿ ಜನರ ಮತ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡುವ ಮೂಲಕ ಮುಂಬರಲಿರುವ 2028ರ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಮಾತನಾಡಿ, ರಾಜ್ಯದ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಶಕ್ತಿಯಾಗಿದೆ ಎಂದರು.

ಹ್ಯಾಟ್ರಿಕ್‌ ಸೋಲೇ ಸಾಧನೆ

ಒಬ್ಬ ಮಾಜಿ ಪ್ರಧಾನಿ ಹಾಗೂ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವರಿಗೆ ತಮ್ಮ ಕುಟುಂಬದ ಕುಡಿಯನ್ನು ಗೆಲ್ಲಿಸಿಕೊಳ್ಳಲಾಗದೆ ಮುಖಭಂಗದ ಹ್ಯಾಟ್ರಿಕ್ ಸಾಧನೆ ಮಾಡಿರುವುದು ನಾಚಿಗೆಗೇಡಿನ ಸಂಗತಿ. ಪ್ರಧಾನಿ ಮೊಮ್ಮಗನ ವಿರುದ್ದ ಒಬ್ಬ ಸಾಧಾರಣ ಶಿಕ್ಷಕನ ಮಗ ಸಿ.ಪಿ.ಯೋಗೇಶ್ವರ್, ಶಿಗ್ಗಾವಿಯ ಕ್ಷೇತ್ರದಲ್ಲಿ ಯೂಸೂಫ್ ಅಹ್ಮದ್ ಪಠಾಣ್ ನಿರೀಕ್ಷೆ ಮೀರಿ ಗೆಲುವು ಸಾಧಿಸಿದ್ದಾರೆ. ಚುನಾವಣೆ ವೇಳೆ ಯಾವುದೇ ಜಾತಿ, ಮತ, ಧರ್ಮ, ಹಣ ಕೆಲಸ ಮಾಡಲು ಅವಕಾಶ ನೀಡದೆ ಮತದಾರ ಪ್ರಭು ನ್ಯಾಯ ಸಮ್ಮತವಾದ ಮತವನ್ನು ಚಲಾಯಿಸಿ ಕಾಂಗ್ರೆಸ್ ಪಕ್ಷದ ಭವಿಷ್ಯ ರೂಪಿಸಿಕೊಟ್ಟಿದ್ದಾರೆಂದು ಶ್ಲಾಘಿಸಿದರು.

ಶಾಸಕರಾದ ಕೆ.ವೈ.ನಂಜೇಗೌಡ, ಕೊತ್ತೂರು ಮಜುನಾಥ್, ಎಸ್.ಎನ್.ನಾರಾಯಣಸ್ವಾಮಿ, ಅನಿಲ್ ಕುಮಾರ್ ಸೇರಿದಂತೆ ಎಲ್ಲ ಪದಾಧಿಕಾರಿಗಳು ಚುನಾವಣೆಯಲ್ಲಿ ಶ್ರಮವಹಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿ ಚುನಾವಣೆಯ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ ಗೆಲವು ಸಾಧಿಸುವಂತಾಗಿದೆ ಎಂದರು

.ಸಚಿವ ಮುನಿಯಪ್ಪ ನೇತೃತ್ವ

ಪ್ರಮುಖವಾಗಿ ಕೋಲಾರ, ಬೆಂಗಳೂರು ಗ್ರಾಮಾಂತರ ಪ್ರದೇಶದ ನೇತೃತ್ವವನ್ನು ಸಚಿವ ಕೆ.ಎಚ್.ಮುನಿಯಪ್ಪ ವಹಿಸಿದ್ದು ಅಭೂತಪೂರ್ವ ಯಶಸ್ವಿಗೆ ಕಾರಣರಾದರು, ವಿಪಕ್ಷಗಳು ವಾಲ್ಮೀಕಿ, ಮುಡಾ ಸೇರಿದಂತೆ ಅನೇಕ ಅಪಾಧನೆಗಳು ಮಾಡಿದರೂ, ಅವಹೇಳನಾ ಮಾಡದರೂ ಸಹ ಎಲ್ಲವನ್ನು ತಿರಸ್ಕರಿಸಿ ತಕ್ಕ ಪಾಠ ಕಲಿತಿದ್ದಾರೆ ಎಂದರು.ಜಿಲ್ಲಾ ಕಾರ್ಯಾಧ್ಯಕ್ಷ ಊರುಬಾಗಿಲು ವಿ.ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿ ನಡೆದ ಮೂರು ಉಪಚುನಾವಣೆಯು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರಿನಲ್ಲಿ ನಂಜೇಗೌಡ, ನಸೀರ್ ಅಹ್ಮದ್, ಅನಿಲ್ ಕುಮಾರ್, ಕೆ.ಎಚ್.ಮುನಿಯಪ್ಪ, ಕೊತ್ತೂರು ಮಂಜುನಾಥ್ ಕಳೆದ ಮೂರು ದಿನದಿಂದಲೂ ರಾತ್ರಿ ಹಗಲು ಚುನಾವಣೆಯಲ್ಲಿ ಶ್ರಮಿಸಿದ ಹಿನ್ನಲೆಯಲ್ಲಿ ಬಹುಮತ ಬರಲು ಸಾಧ್ಯವಾಗಿದೆ ಎಂದರು.

ಮತದಾರನಿಗೆ ಅಭಿನಂದನೆ

ವಿಪಕ್ಷಗಳಾದ ಜೆ.ಡಿ.ಎಸ್ ಮತ್ತು ಬಿಜೆಪಿ ಏನೇ ಅಪಪ್ರಚಾರ ಮಾಡಿದರೂ ಮತದಾರ ಅವುಗಳನ್ನು ತಿರಸ್ಕರಿಸಿ ಜನ ಪರ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸಿದ ಕಾಂಗ್ರೆಸ್‌ ಗೆಲ್ಲಿಸಿದ ಮತದಾರ ಅಭಿನಂದನಾರ್ಹ. ಇಂದಿರಾಗಾಂಧಿ ನಂತರ ಪ್ರಿಯಾಂಕ ಗಾಂಧಿರಿಗೆ ರಾಜಕಾರಣದಲ್ಲಿ ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ, ೪ ಲಕ್ಷ ಬಹುಮತ ನೀಡಿರುವುದು ಸುಲಭದ ಮಾತಲ್ಲ, ಹೊಸ ಮನ್ವಂತರಕ್ಕೆ ನಾಂದಿ ಹಾಡಿದ್ದಾರೆ, ಜಾರ್ಖಂಡ್‌ನಲ್ಲಿ ಇಂಡಿಯಾ ಮೈತ್ರಿ ಬಹುಮತ ಪಡೆದು ಅಡಳಿತ ಚುಕ್ಕಾಣಿ ಹಿಡಿಯುತ್ತಿರುವುದು ಅಭಿನಂದನಾರ್ಹ ಎಂದರು.

ವಿಜಯೋತ್ಸವದಲ್ಲಿ ಜಿಲ್ಲಾ ಎಸ್.ಸಿ ಘಟಕದ ಅಧ್ಯಕ್ಷ ಕೆ.ಜಯದೇವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು, ಓಬಿಸಿ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ವೆಂಕಟಪತಪ್ಪ, ಮುಖಂಡರಾದ ಲಾಲ್‌ಬಹುದ್ದೂರು ಶಾಸ್ತ್ರಿ, ಅತಾವುಲ್ಲಾ, ಪ್ಯಾರೇಜಾನ್, ಬೀದಿ ವ್ಯಾಪಾರ ಸಂಘಟನೆ ಅಧ್ಯಕ್ಷ ಮಂಜುನಾಥ್, ಮುನಿವೆಂಕಟಪ್ಪ, ನಾಗರಾಜ್, ಶಂಕರಪ್ಪ, ನವೀನ್ ಗೌಡ, ರತ್ನಮ್ಮ, ಪ್ರಿಯಾಂಕ ಇದ್ದರು.