ಸಾರಾಂಶ
ಚಿಕ್ಕಬಳ್ಳಾಪುರ : ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದ್ದು ಈ ಸರ್ಕಾರ ನೀಡಿದ ಐದು ಗ್ಯಾರಂಟಿಗಳಲ್ಲಿ ರೈತರ ಪರವಾಗಿ ಒಂದು ಗ್ಯಾರಂಟಿ ಇಲ್ಲದಿರುವುದು ಈ ಸರ್ಕಾರದ ರೈತ ವಿರೋಧಿ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಮಾಜಿ ಸಚಿವ ಬಂಡೆಪ್ಪ ಕಾಷಪ್ಪನವರ್ ತಿಳಿಸಿದರು.
ಶುಕ್ರವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾ ಜೆಡಿಎಸ್ ಮತ್ತು ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಸಿಸಿ ಮಾತನಾಡಿ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿರುವ ಎನ್‌ಡಿಎ ಅಭ್ಯರ್ಥಿಗಳಾದ ಡಾಕ್ಟರ್ ಕೆ ಸುಧಾಕರ್ ಮತ್ತು ಮಲ್ಲೇಶ್ ಬಾಬು ರವರನ್ನು ಈ ಭಾಗದ ಜನತೆ ಹೆಚ್ಚಿನ ಬಹುಮತದಿಂದ ಆರಿಸಿ ಲೋಕಸಭೆಗೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದರು. ಸಮರ್ಥರಾಗಿರಬೇಕು: ಈ ಲೋಕಸಭಾ ಚುನಾವಣೆಯಲ್ಲಿ ಜನರ ಒಂದೊಂದು ಮತ ದೇಶವನ್ನು ರಕ್ಷಿಸುತ್ತದೆ. ದೇಶವನ್ನು ಆಳುವವರು ಸಮರ್ಥರಾಗಿರಬೇಕು.
ಇಲ್ಲವಾದರೆ ಕರ್ನಾಟಕದಲ್ಲಿ ಆಳಲು ಬಂದವರು ಹಾಳು ಮಾಡಿದಂತೆಯೇ ಆಗುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಿಂದ ಮೋಸ ಮಾಡಿ ಗೆದ್ದಿದೆ. ಈ ಲೋಕಸಭೆ ಚುನಾವಣೆಯಲ್ಲಿ ಮೋಸಕ್ಕೆ ಅವಕಾಶ ಮಾಡಿಕೊಡದೆ ನರೇಂದ್ರ ಮೋದಿಯವರನ್ನು ಗೆಲ್ಲಿಸಬೇಕು. ಈ ಬಾರಿಯೂ ನರೇಂದ್ರ ಮೋದಿಯವರನ್ನೇ ಹ್ಯಾಟ್ರಿಕ್ ಆಗಿ ಗೆಲ್ಲಿಸಬೇಕೆಂದು ಜನರು ನಿರ್ಧರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಮಣ್ಣಿನ ಮಗ ಎಚ್.ಡಿ.ದೇವೇಗೌಡರ ಸಮಾಗಮವಾಗಿದ್ದು, ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಕಂಡುಬಂದಿದೆ ಎಂದರು.
ರಾಜ್ಯದಲ್ಲಿ ಬೊಕ್ಕಸ ಖಾಲಿಯಾಗಿದೆ. ಗ್ಯಾರಂಟಿಗಳಿಗೆ 35 ರಿಂದ 50 ಸಾವಿರ ಕೋಟಿ ಖರ್ಚಾದರೆ 1ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಯಾವುದೇ ಯೋಜನೆಗಳು ನೀಡುತ್ತಿಲ್ಲಾ. ಯಾವೋಂದು ವಿಧಾನ ಸಭಾ ಕ್ಷೇತ್ರಕ್ಕೂ ಐದು ಲಕ್ಷರೂಗಳ ಅಭಿವೃದ್ದಿ ಕಾಮಗಾರಿಗಳನ್ನು ಸಹ ಮಂಜೂರು ಮಾಡಿಲ್ಲ. ರಾಜ್ಯದ ರೈತರ ಸಾಲ ಮನ್ನಾಮಾಡಲು ಆಗಲಿಲ್ಲಾ ಎಂದರು.
ಬೌದ್ಧಿಕ ದಿವಾಳಿತನ
ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಕೋಲಾರದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಅಲ್ಲಿನ ಜಿಲ್ಲಾ ಸಚಿವ ಭೈರತಿ ಸುರೇಶ್ ರವರು ಕುರುಬರು ಕಾಂಗ್ರೆಸ್ ಪಕ್ಷಕ್ಕೆ ಓಟು ಕೊಡದಿದ್ದರೆ ಸಿದ್ದರಾಮಯ್ಯನ ಕುರ್ಚಿ ಅಲ್ಲಾಡುತ್ತದೆ ಎಂದು ಹೇಳಿರುವುದು ಇವರ ಬೌದ್ಧಿಕ ದಿವಾಳಿತನವನ್ನು ಸೂಚಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮುಕ್ತ ಮುನಿಯಪ್ಪ,,ಜೆಡಿಎಸ್ ವಕ್ತಾರ ಆರ್.ಮಟಮಪ್ಪ,ಬಿಜೆಪಿ ಮುಖಂಡರಾದ ದೇವಸ್ಥಾನದ ಹೊಸಹಳ್ಳಿ ರಾಮಣ್ಣ,ರಂಗಪ್ಪ,ಜೆಡಿಎಸ್ ಮುಖಂಡರಾದ ಮಲ್ಲೇಶ್, ನಾಗರಾಜ, ಶ್ರೀಧರ್, ಸ್ಟುಡಿಯೋ ಮಂಜು ಮತ್ತಿತರರು ಇದ್ದರು.