ಸಾರಾಂಶ
ಕೋಲಾರ : ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಿದೆ ಎಂದು ನಾನು ಹೇಳುವುದಿಲ್ಲ, ಬದಲಿಗೆ ಆರ್ಥಿಕ ಅದಕ್ಷತೆ, ಅಸಮರ್ಪಕ ನಿರ್ವಹಣೆಯಿಂದ ಖಜಾನೆ ಬರಿದಾಗಿ ರಾಜ್ಯವು ಸಾಲದ ದವಡೆಗೆ ಸಿಲುಕಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.ನಗರದ ಹೊರವಲಯದ ಸಂಗೊಂಡ್ಲಹಳ್ಳಿಯ ರವಿ ಹೊಮ್ ಅಪ್ಲಯನ್ಸಸ್ ಮಳಿಗೆ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ತೆರಿಗೆ ಹಣ ಎಲ್ಲಿ ಹೋಯ್ತು?
ರಾಜ್ಯ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ತೆರಿಗೆ, ಶುಲ್ಕ ಹೆಚ್ಚಿಸುತ್ತಾ ಬಂದಿದೆ. ಗ್ಯಾರಂಟಿಗಳಿಗೆ ವರ್ಷಕ್ಕೆ ೫೨,೦೦೦ ರಿಂದ ೬೦,೦೦೦ ಕೋಟಿ ಆಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಸಂಗ್ರಹ ಆಗುತ್ತಿರುವ ಜನರ ತೆರಿಗೆ ದುಡ್ಡು ಎಲ್ಲಿ ಹೋಗುತ್ತಿದೆ. ಈಗ ರಾಜ್ಯ ಸರ್ಕಾರ ೧.೫ ಲಕ್ಷ ಕೋಟಿ ಸಾಲ ಮಾಡುತ್ತಿದೆ. ಆ ಸಾಲ ತೀರಿಸುವವರು ಯಾರು, ಬಡ್ಡಿ ಕಟ್ಟುವವರು ಯಾರು, ಮತ್ತೆ ಮತ್ತೆ ಸರ್ಕಾರ ಜನರ ಮೇಲೆಯೇ ಹೊರೆ ಹೊರೆಸುತ್ತದೆ ಎಂದು ಎಚ್ಡಿಕೆ ಕಿಡಿಕಾರಿದರು.
11 ಲಕ್ಷ ಕುಟುಂಬಗಳ ಅನ್ನಕ್ಕೆ ಕುತ್ತು
11 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಕಾರ್ಡುಗಳನ್ನಾಗಿ ಮಾಡಲಾಗುತ್ತಿದೆ. ಅಂದರೆ 11 ಲಕ್ಷ ಕುಟುಂಬಗಳ ಅನ್ನವನ್ನು ಸರ್ಕಾರ ಕಿತ್ತುಕೊಳ್ಳುತ್ತಿದೆ. ಈ ಬದಲಾವಣೆಗೆ ಕೈ ಹಾಕಿರುವ ಸರ್ಕಾರದ ಬಗ್ಗೆ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ಎಲ್ಲೂ ರಾಜ್ಯಕ್ಕೆ ಕೊಡುತ್ತಿರುವ ಅಕ್ಕಿ ಕಡಿತ ಮಾಡಿಲ್ಲ.
ಇವರು ಮಾಡಿರುವ ತಪ್ಪಿನಿಂದ ಎಪಿಎಲ್ ಕಾರ್ಡುದಾರರು ಇನ್ನೂ ಮೇಲೆ ಹಣ ಕೊಟ್ಟು ಅಕ್ಕಿ ಖರೀದಿ ಮಾಡಬೇಕು, ಅಲ್ಲವೇ ಎಂದು ಅವರು ಖಾರವಾಗಿ ಪ್ರಶ್ನಿಸಿದರು.ಕರ್ನಾಟಕದ ಗ್ಯಾರಂಟಿಗಳ ಅನುಷ್ಠಾನ ಅರಿಯಲು ಪ್ರಧಾನಿ ಮೋದಿ ರಾಜ್ಯಕ್ಕೆ ಬರುವಂತೆ ಸಿಎಂ ಸಿದ್ದರಾಮಯ್ಯ ಆಹ್ವಾನಿಸಿದ್ದಾರೆ. ಪ್ರಧಾನಿಗಳನ್ನು ಕರೆದು ಇವರು ಏನು ಮಾಡುತ್ತಾರೆ, ಇಲ್ಲಿನ ದುಸ್ಥಿತಿಯನ್ನು ನಾವೇ ನೋಡುತ್ತಿದ್ದೇವೆ. ಮೊದಲು ರಾಜ್ಯದ ಸ್ಥಿತಿಯನ್ನು ಸಿಎಂ ಸರಿ ಮಾಡಲಿ ಎಂದರು.
ವಕ್ಫ್ ವಿವಾದಕ್ಕೆ ತೆರೆ ಎಳೆಯಲಿರೈತರ ಆಸ್ತಿ, ದೇವಾಲಯಗಳು ವಕ್ಫ್ ಆಸ್ತಿ ಎಂದು ದಾಖಲಾಗುತ್ತಿರುವ ವಿವಾದಕ್ಕೆ ಸರ್ಕಾರವೇ ತೆರೆ ಎಳೆಯಬೇಕು. ಸ್ವತಃ ಮುಖ್ಯಮಂತ್ರಿಯೇ ಈ ಗೊಂದಲವನ್ನು ಸರಿ ಮಾಡಬೇಕು. ಉಳ್ಳವರು ವಕ್ಫ್ ಆಸ್ತಿ ವಶಕ್ಕೆ ಪಡೆದಿರುವ ಬಗ್ಗೆ ಏನೂ ಕ್ರಮ ಆಗಿಲ್ಲ. ರೈತರಲ್ಲಿ ಅಶಾಂತಿ ಉಂಟಾಗಲು ಸರ್ಕಾರ ಮಾಡಿರುವ ಮಹಾ ಅಪರಾಧವೇ ಕಾರಣ ಎಂದರು.
ಮಾಜಿ ಸ್ಪೀಕರ್ ಕಂಡರೆ ಭಯವೇ?
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಂದ ಅರಣ್ಯ ಒತ್ತುವರಿ ಬಗ್ಗೆ ಎಲ್ಲಾ ಕಡೆ ಚರ್ಚೆ ನಡೆಯುತ್ತಿದೆ. ಅವರ ಒತ್ತುವರಿ ಕುರಿತ ಸರ್ವೇ ಸ್ಥಗಿತವಾಗಿದೆ. ಕೋಲಾರ ಜಿಲ್ಲೆಯಲ್ಲಿ ಅಮಾಯಕ ರೈತರ ಭೂಮಿಯನ್ನು ಅರಣ್ಯ ಹಾಗೂ ಕಂದಾಯ ಅಧಿಕಾರಿಗಳು ವೀರಾವೇಶದಲ್ಲಿ ತೆರವು ಮಾಡಿದ್ದಾರೆ. ಆದರೆ, ಮಾಜಿ ಸ್ಪೀಕರ್ ಬಗ್ಗೆ ಅರಣ್ಯ ಇಲಾಖೆ ಸುಮ್ಮನಿದೆ. ಅವರನ್ನು ಕಂಡರೆ ಸರ್ಕಾರಕ್ಕೆ, ಅರಣ್ಯ ಇಲಾಖೆಗೆ ಭಯವೇ ಎಂದು ಪ್ರಶ್ನಿಸಿದರು.
ಈ ವಿಷಯವನ್ನು ಬಿಟ್ಟು ಅರಣ್ಯ ಸಚಿವರು ಎಚ್‌ಎಂಟಿ ಹಿಂದೆ ಬಿದ್ದಿದ್ದಾರೆ. ಇಷ್ಟಕ್ಕೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ಏನು ಮಾಡುತ್ತಿದ್ದಾರೆ, ಇಡೀ ದೇಶಕ್ಕೆ ಬುದ್ಧಿ ಹೇಳುವ ಇವರು. ಯಾಕೆ ಮಾಜಿ ಸ್ಪೀಕರ್‌ಗೆ ಬುದ್ಧಿ ಹೇಳುತ್ತಿಲ್ಲ, ಅವರ ಒತ್ತುವರಿ ತೆರವು ಮಾಡಿಸುತ್ತಿಲ್ಲ ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.
ಸಂಸದ ಮಲ್ಲೇಶ್ ಬಾಬು, ಶಾಸಕರಾದ ವೆಂಕಟ ಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ಮಾಜಿ ಸಂಸದ ಎಸ್.ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮಾಜಿ ಎಂಎಲ್ಸಿ ಚೌಡರೆಡ್ಡಿ ತೂಪಲ್ಲಿ, ಮುಖಂಡರಾದ ಸಿ.ಎಂ.ಆರ್.ಶ್ರೀನಾಥ್, ವಕ್ಕಲೇರಿ ರಾಮು ಇದ್ದರು.
ಎಚ್ಡಿಕೆಗೆ ಅದ್ದೂರಿ ಸ್ವಾಗತ
ಕೋಲಾರದ ಹೊರವಲಯದ ಸಂಗೊಂಡ್ಲಹಳ್ಳಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿರನ್ನು ಜೆಡಿಎಸ್ ಕಾರ್ಯಕರ್ತರು ನಗರದ ಬಂಗಾರಪೇಟೆ ವೃತ್ತದಲ್ಲಿ ಕ್ರೇನ್ ಮೂಲಕ ಬೃಹತ್ ಹಾರ ಹಾಕುವ ಮೂಲಕ ಸ್ವಾಗತಿಸಿದರು.