ಸಾರಾಂಶ
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನ್ ಟ್ಯಾಪಿಂಗ್ ಕುರಿತು ದಾಖಲೆಗಳಿವೆ. ಸೂಕ್ತ ಸಮಯದಲ್ಲಿ ದಾಖಲೆ ಸಮೇತ ಮಾತನಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ; ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನ್ ಟ್ಯಾಪಿಂಗ್ ಕುರಿತು ದಾಖಲೆಗಳಿವೆ. ಸೂಕ್ತ ಸಮಯದಲ್ಲಿ ದಾಖಲೆ ಸಮೇತ ಮಾತನಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಫೋನ್ ಕದ್ದಾಲಿಕೆ ಕುರಿತು ಸಚಿವ ಚಲುವರಾಯಸ್ವಾಮಿ ಅವರ ಆರೋಪ ಹಾಗೂ ಅದಕ್ಕೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರ ಪ್ರತಿಕ್ರಿಯೆಗೆ ತಿರುಗೇಟು ನೀಡಿದ ಅವರು, ಸ್ವಾಮೀಜಿಯವರ ಫೋನ್ ಟ್ಯಾಪಿಂಗ್ ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ಮಾತನಾಡಲು ತುಂಬಾ ನೋವಾಗುತ್ತದೆ. ಫೋನ್ ಕದ್ದಾಲಿಕೆ ಬಗ್ಗೆ ಎಲ್ಲಾ ದಾಖಲೆಗಳು ಇವೆ. ಆದರೂ ಈ ವಿಚಾರವನ್ನು ಈಗ ಮಾತನಾಡುವುದು ಸೂಕ್ತವಲ್ಲ, ಸಮಯ ಬಂದಾಗ ಮಾತನಾಡುತ್ತೇನೆ ಎಂದರು.
ಕುಮಾರಸ್ವಾಮಿ ಅವರು ಆದಿಚುಂಚನಗಿರಿ ಸ್ವಾಮೀಜಿ ಅವರನ್ನು ಭೇಟಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, ಕುಮಾರಸ್ವಾಮಿ, ಮಂಜುನಾಥ್ ಅವರು ಸ್ವಾಮೀಜಿಗಳ ಆಶೀರ್ವಾದ ಕೇಳಿದ್ದರಲ್ಲಿ ತಪ್ಪೇನಿಲ್ಲ. ಆದರೆ ಒಕ್ಕಲಿಗ ವ್ಯಕ್ತಿ ಮುಖ್ಯಮಂತ್ರಿಯಾಗಿದ್ದಾಗ ಸಮ್ಮಿಶ್ರ ಸರ್ಕಾರವನ್ನೇ ಕೆಡವಿದವರನ್ನು ಜತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ. ಇದರಿಂದ ಸಮಾಜಕ್ಕೆ ಅವರೇನು ಉತ್ತರ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ? ಜೆಡಿಎಸ್‌ಗೆ ಅವರೇ ಮುಕ್ತಿ ಕೊಟ್ಟಿದ್ದಾರೆ. ಜೆಡಿಎಸ್ ಇರಬೇಕು ಎಂಬ ಆಸೆ ನನಗಿದೆ. ಆದರೆ ಅಳಿಯನನ್ನೇ ಬಿಜೆಪಿಗೆ ಕಳುಹಿಸಿ ಜೆಡಿಎಸ್ ವಿಸರ್ಜನೆ ಮಾಡುವ ಸ್ಥಿತಿಗೆ ಹೋಗಿದ್ದಾರೆ. ನಾವು ಹಿಂದೆ ಒಂದು ತಪ್ಪು ಮಾಡಿದ್ದೆವು. ಆದರೆ ಈಗ ಅದಕ್ಕಿಂತ ದೊಡ್ಡ ತಪ್ಪು ಜೆಡಿಎಸ್‌ನವರು ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ಎಸ್‌ಟಿಎಸ್, ಹೆಬ್ಬಾರ್ ಅವರನ್ನೇ ಕೇಳಿ!
ಎಸ್‌ಟಿಎಸ್ ಮತ್ತು ಹೆಬ್ಬಾರ್ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಅವರಿಬ್ಬರು ಬಿಜೆಪಿಯ ಅಧಿಕೃತ ಶಾಸಕರು. ಅವರು ತಮ್ಮ ಕ್ಷೇತ್ರದ ವಿಚಾರವಾಗಿ ನಮ್ಮ ಜತೆ ಚರ್ಚೆ ಮಾಡಿದ್ದಾರೆ. ಅವರು ತಮ್ಮದೇ ಆದ ಲೆಕ್ಕಾಚಾರ, ನಂಬಿಕೆ ಮೇಲೆ ಯಾವ ಪಕ್ಷಕ್ಕೆ ಸಹಾಯ ಮಾಡುತ್ತಿದ್ದಾರೋ ನನಗೆ ಗೊತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳಿ ಎಂದು ಹೇಳಿದರು.
ದಿಂಗಾಲೇಶ್ವರ ಶ್ರೀಗೆ ಕಾಂಗ್ರೆಸ್ ಬೆಂಬಲವಿಲ್ಲ
ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ಬೆಂಬಲಿಸುವುದಾದರೆ, ನೇರವಾಗಿಯೇ ಬೆಂಬಲಿಸುತ್ತೇವೆ. ಗೌಪ್ಯವಾಗಿ ಏಕೆ ಬೆಂಬಲ ನೀಡಬೇಕು? ಸ್ವಾಮೀಜಿ ಅವರಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಧಾರವಾಡ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಘೋಷಿಸಿ ಬಿ-ಫಾರಂ ಸಹ ನೀಡಲಾಗಿದೆ. ಸ್ವಾಮೀಜಿ ಮೊದಲೇ ಈ ತೀರ್ಮಾನ ಕೈಗೊಂಡಿದ್ದರೆ, ಪರಿಸ್ಥಿತಿಯೇ ಭಿನ್ನವಾಗಿರುತ್ತಿತ್ತು. ಕಾಂಗ್ರೆಸ್ ಅಭ್ಯರ್ಥಿ ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಜಾತ್ಯತೀತ ತತ್ವಗಳ ಉಳಿವಿಗಾಗಿ ಶ್ರಮಿಸುತ್ತಿರುವ ಸ್ವಾಮೀಜಿಯ ಬಗ್ಗೆ ನಮಗೆ ಅಪಾರವಾದ ಗೌರವವಿದೆ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಪಪಡಿಸಿದರು.
;Resize=(690,390))
)
;Resize=(128,128))
;Resize=(128,128))
;Resize=(128,128))
;Resize=(128,128))