ಈ ಫಲಿತಾಂಶ ನನಗೆ ಮಹತ್ವದ್ದಾಗಿತ್ತು - ನನ್ನ ಹಣಿಯಲು ಯತ್ನಿಸಿದವರಿಗೆ ಮತದಾರರೇ ಉತ್ತರ ನೀಡಿದ್ದಾರೆ: ಸಿಎಂ

| Published : Nov 24 2024, 09:38 AM IST

CM Siddaramaiah Muda Site
ಈ ಫಲಿತಾಂಶ ನನಗೆ ಮಹತ್ವದ್ದಾಗಿತ್ತು - ನನ್ನ ಹಣಿಯಲು ಯತ್ನಿಸಿದವರಿಗೆ ಮತದಾರರೇ ಉತ್ತರ ನೀಡಿದ್ದಾರೆ: ಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

‘ಈ  ಫಲಿತಾಂಶ ನನ್ನ ಪಾಲಿಗೆ ಮಹತ್ವದ್ದಾಗಿತ್ತು. ದ್ವೇಷ ಸಾಧನೆಗಾಗಿ ಸುಳ್ಳು ಪ್ರಕರಣ, ಅಪಪ್ರಚಾರದಿಂದ ನನ್ನ ಹಾಗೂ ನನ್ನ ಕುಟುಂಬವನ್ನು ಕಟ್ಟಿಹಾಕಲು ರಾಜಭವನದಿಂದ ಕೇಂದ್ರ ತನಿಖಾ ಸಂಸ್ಥೆಗಳವರೆಗೆ ಎಲ್ಲವನ್ನೂ ದುರ್ಬಳಕೆ ಮಾಡಿಕೊಂಡ ಬಿಜೆಪಿ, ಜೆಡಿಎಸ್‌ನವರಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ.’

ಬೆಂಗಳೂರು :  ‘ಈ ಉಪ ಚುನಾವಣೆ ಫಲಿತಾಂಶ ನನ್ನ ಪಾಲಿಗೆ ಮಹತ್ವದ್ದಾಗಿತ್ತು. ದ್ವೇಷ ಸಾಧನೆಗಾಗಿ ಸುಳ್ಳು ಪ್ರಕರಣ, ಅಪಪ್ರಚಾರದಿಂದ ನನ್ನ ಹಾಗೂ ನನ್ನ ಕುಟುಂಬವನ್ನು ಕಟ್ಟಿಹಾಕಲು ರಾಜಭವನದಿಂದ ಕೇಂದ್ರ ತನಿಖಾ ಸಂಸ್ಥೆಗಳವರೆಗೆ ಎಲ್ಲವನ್ನೂ ದುರ್ಬಳಕೆ ಮಾಡಿಕೊಂಡ ಬಿಜೆಪಿ, ಜೆಡಿಎಸ್‌ನವರಿಗೆ ಮತದಾರರು ಫಲಿತಾಂಶದ ಮೂಲಕ ತಕ್ಕ ಉತ್ತರ ನೀಡಿದ್ದಾರೆ.’

ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಚುನಾವಣೆ ಫಲಿತಾಂಶವನ್ನು ವ್ಯಾಖ್ಯಾನಿಸಿದ್ದಾರೆ.

ನಾನು 2ನೇ ಬಾರಿಗೆ ಸಿಎಂ ಆದ ಬಳಿಕ ಬಿಜೆಪಿ, ಜೆಡಿಎಸ್‌ನವರು ನನ್ನ ಹಾಗೂ ನನ್ನ ಪತ್ನಿಯನ್ನು ಸುಳ್ಳುಗಳಿಂದ ಹಣಿಯಲು ಯತ್ನಿಸಿದರು. ನಾಲ್ಕು ದಶಕಗಳಿಂದ ನನ್ನ ರಾಜಕೀಯ ಜೀವನ ನೋಡಿರುವ ಜನರು ಬಿಜೆಪಿಯ ಸುಳ್ಳುಗಳ ವಿರುದ್ಧ ಸತ್ಯವನ್ನು ಗೆಲ್ಲಿಸಿದ್ದಾರೆ ಎಂದರು.

ಉಪ ಚುನಾವಣೆ ವೇಳೆ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲ ನ್ಯಾಯಾಲಯಗಳಿಗಿಂತ ಶ್ರೇಷ್ಠ ನ್ಯಾಯಾಲಯ ಜನತಾ ನ್ಯಾಯಾಲಯ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಜನತಾ ನ್ಯಾಯಾಲಯದಲ್ಲಿ ನಮ್ಮ ಪರ ತೀರ್ಪು ಬಂದಿದೆ. ಈ ತೀರ್ಪಿನಿಂದ ನಮ್ಮ ಸರ್ಕಾರಕ್ಕೆ ಬಲ ಬಂದಿದೆ ಎಂದರು.

ನಿಮ್ಮ ಗೆಲುವಿಗೆ ಹಣದ ಹೊಳೆ ಕಾರಣ ಎಂದು ಬಿಜೆಪಿಯವರು ಹೇಳಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಹಾಗಾದರೆ ಮಹಾರಾಷ್ಟ್ರದಲ್ಲಿ ಬಿಜೆಪಿಯು 149 ಸ್ಥಾನಗಳಲ್ಲಿ 125 ಸ್ಥಾನ ಗೆದ್ದಿದೆ. 24ರಲ್ಲಿ ಮಾತ್ರ ಸೋತಿದೆ. ಅದನ್ನು ಏನೆಂದು ಹೇಳುತ್ತೀರಿ. ಹಣದ ಹೊಳೆ ಎಂದರೆ ಚುನಾವಣಾ ಆಯೋಗ ಸರಿ ಇಲ್ಲ ಎಂಬುದು ಬೊಮ್ಮಾಯಿ ಮಾತಿನ ಅರ್ಥವೇ’ ಎಂದು ಪ್ರಶ್ನಿಸಿದರು.

ನಾನು ಯಾವತ್ತೂ ಸೊಕ್ಕು ತೋರಿಸಿಲ್ಲ

ಸಿದ್ದರಾಮಯ್ಯ ಸೊಕ್ಕು ಮುರಿತೀನಿ ಎಂದಿದ್ದ ದೇವೇಗೌಡರ ಮಾತು ಬೇಸರ ತರಿಸಿತ್ತು. ನಾನು ಮಂತ್ರಿ ಆಗಿ 40 ವರ್ಷ ಆಗಿದೆ. ನಾನು ಯಾವತ್ತೂ ಸೊಕ್ಕು, ಅಹಂಕಾರ ಮಾಡಿಲ್ಲ. ಈ ಮಾತುಗಳಿಗೆ ಜನರೇ ಉತ್ತರ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಹಾಸನ ಪ್ರಕರಣಕ್ಕೆ ಹೃದಯ ಕರಗಲಿಲ್ಲವೇ?

ಚುನಾವಣೆ ವೇಳೆ ದೇವೇಗೌಡ, ಅವರ ಮಗ (ಕುಮಾರಸ್ವಾಮಿ), ಮೊಮ್ಮಗ (ನಿಖಿಲ್) ಎಲ್ಲರೂ ಅಳೋದೇ ಮಾಡಿದ್ದಾರೆ. ಹೃದಯ, ಭಾವನೆಗಳು ಇರುವವರಿಗೆ ಅಳು ಬರುತ್ತದೆ ಎನ್ನುತ್ತಾರೆ. ಇವರ ಮೊಮ್ಮಗ ಪ್ರಜ್ವಲ್‌ ಕಾರಣಕ್ಕೆ ಹಾಸನದಲ್ಲಿ ಹೆಣ್ಣುಮಕ್ಕಳು ಕಣ್ಣೀರು ಹಾಕಿದ್ರಲ್ಲ. ಆಗ ಹೃದಯ ಕರಗಲಿಲ್ಲವೇ?

- ಸಿದ್ದರಾಮಯ್ಯ, ಮುಖ್ಯಮಂತ್ರಿ

ನಾನು ದಂತಗೋಪುರದಲ್ಲಿ ಕೂತವನಲ್ಲ, ನಿರಂತರವಾಗಿ ಜನರ ಜೊತೆ ಒಡನಾಟ ಇಟ್ಟುಕೊಂಡವನು. ಸಾಕ್ಷಾತ್ ಪ್ರಧಾನಿಯವರೇ ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಹೇಳಿದರೂ ನಮ್ಮ ಗ್ಯಾರಂಟಿಗಳಿಂದ ಖುಷಿಯಾಗಿರುವ ಜನರು ಅದನ್ನು ನಂಬಿಲ್ಲ. 136 ಸ್ಥಾನದಿಂದ ಗೆಲ್ಲಿಸಿರುವ ಜನಾದೇಶದ ವಿರುದ್ಧವಾಗಿ ಸರ್ಕಾರ ಉರುಳಿಸುವ ಪ್ರಯತ್ನ ಮಾಡಿದರು. ಸಾವಿರಾರು ಕೋಟಿ ರು. ಸುರಿದು ನಮ್ಮ ಶಾಸಕರನ್ನು ಖರೀದಿಸುವ ದುಷ್ಟ ಪ್ರಯತ್ನ‌ ಮಾಡಿದ್ದರು. ಈ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ರಾಜ್ಯದ ಜನತೆ ಸಹಿಸಿಲ್ಲ ಎನ್ನುವುದನ್ನು ಕೂಡಾ ಈ ಫಲಿತಾಂಶ ಹೇಳಿದೆ. ಇನ್ನಾದರೂ ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಈ ಬಾರಿ ಬಿಜೆಪಿ, ಜೆಡಿಎಸ್ ಇಬ್ಬರೂ ಸೇರಿ ಅಪಪ್ರಚಾರ ಮಾಡಿದರು. ಇಬ್ಬರೂ ಒಟ್ಟಾಗಿ ಚುನಾವಣೆ, ಪಾದಯಾತ್ರೆ ಎಲ್ಲವನ್ನೂ ಮಾಡಿದರು. ಎಲ್ಲಾ ಸುಳ್ಳು, ಅಪಪ್ರಚಾರಗಳಿಗೂ ರಾಜ್ಯದ ಜನತೆ ತಕ್ಕ ಉತ್ತರ ನೀಡಿದ್ದಾರೆ. ಇನ್ನಾದರೂ ಬಿಜೆಪಿಯವರು ಮತದಾರರನ್ನು ಪೆದ್ದರು ಎಂದು ಭಾವಿಸುವುದನ್ನು ನಿಲ್ಲಿಸಬೇಕು. ಪ್ರತೀ ಬಾರಿ ಮತದಾರರನ್ನು ಬಕ್ರಾ ಮಾಡಿ ಗೆಲ್ತೀವಿ ಎನ್ನುವ ಬುದ್ಧಿಯನ್ನು ಬಿಡಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಮತ್ತು ಜೆಡಿಎಸ್ ನಾಯಕರ ಸುಳ್ಳುಗಳನ್ನು ಯಾರೂ ನಂಬಿಲ್ಲ. ಶಿಗ್ಗಾಂವ್‌ನಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ನೀಡಿದರೂ ಗೆದ್ದಿದ್ದೇವೆ. ಇದು ಬಿಜೆಪಿಯವರ ಕೋಮುವಾದಿ ರಾಜಕಾರಣಕ್ಕೆ ಜನ ನೀಡಿದ ಉತ್ತರ. ಈ ಗೆಲುವು ನಮ್ಮ ಸರ್ಕಾರದ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಜನರಿಗಾಗಿ ದುಡಿಯುವ ನಮ್ಮ ಸಂಕಲ್ಪಕ್ಕೆ ಚುನಾವಣಾ ಫಲಿತಾಂಶ ಇನ್ನಷ್ಟು ಬಲ ತುಂಬಿದೆ ಎಂದು ಹೇಳಿದರು.

ಮುಸ್ಲಿಮರ ಗುತ್ತಿಗೆ ಮೀಸಲಾತಿ ಬಗ್ಗೆ ಸರ್ಕಾರ ನಿರ್ಣಯಿಸಿಲ್ಲ:

ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ಹಿಂಪಡೆದಿದ್ದೀರಲ್ಲ ಈಗೇನು ಮಾಡುತ್ತೀರಿ ಎಂಬ ಪ್ರಶ್ನೆಗೆ, ‘ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ನಿರ್ಣಯವನ್ನು ಹಿಂಪಡೆದಿದ್ದೇವೆ ಎಂದು ಯಾರು ಹೇಳಿದರು? ಈ ಬಗ್ಗೆ ಕೆಲವರು ಜನಸಂಖ್ಯೆ ಆಧಾರದ ಮೇಲೆ 4% ಮೀಸಲಾತಿ ನೀಡುವಂತೆ ಮನವಿ ಮಾಡಿದ್ದಾರೆ. ಅದರ ಬಗ್ಗೆ ಸಚಿವ ಸಂಪುಟ ಮುಂದೆ ಪ್ರಸ್ತಾವನೆ ಬಂದಿಲ್ಲ. ಹೀಗಾಗಿ ಸರ್ಕಾರ ಯಾವುದೇ ನಿರ್ಣಯ ಮಾಡಿಲ್ಲ’ ಎಂದರು.