ಕೆಲಸ ಮಾಡಲಾಗದವರು ಹುದ್ದೆ ಬಿಡಿ: ಖರ್ಗೆ ತಾಕೀತು

| Published : Apr 10 2025, 02:03 AM IST

ಸಾರಾಂಶ

‘ಪಕ್ಷದ ಕೆಲಸಗಳಲ್ಲಿ ಸಹಾಯ ಮಾಡದವರಿಗೆ ವಿಶ್ರಾಂತಿಯ ಅಗತ್ಯವಿದೆ. ಅಂತೆಯೇ, ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸದವರು ನಿವೃತ್ತರಾಗಬೇಕು’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ನಾಯಕರಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

- ಪಕ್ಷದಲ್ಲಿ ಸಂಘಟನೆ ಇಲ್ಲದಿದ್ದರೆ ಎಷ್ಟು ಜನ ಇದ್ದರೂ ವ್ಯರ್ಥ- ಇವಿಎಂ ಮಹಾ ಮೋಸ, ಮತಪತ್ರ ಬೇಕು: ಎಐಸಿಸಿ ಅಧ್ಯಕ್ಷ

ಪಿಟಿಐ ಅಹಮದಾಬಾದ್‌

‘ಪಕ್ಷದ ಕೆಲಸಗಳಲ್ಲಿ ಸಹಾಯ ಮಾಡದವರಿಗೆ ವಿಶ್ರಾಂತಿಯ ಅಗತ್ಯವಿದೆ. ಅಂತೆಯೇ, ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸದವರು ನಿವೃತ್ತರಾಗಬೇಕು’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ನಾಯಕರಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಬಿಜೆಪಿ ಹಾಗೂ ವಿದ್ಯುನ್ಮಾನ ಮತಯಂತ್ರ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ‘ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಆಡಳಿತ ಪಕ್ಷದ ಪರವಾಗಿವೆ. ಇವಿಎಂ ಒಂದು ಮಹಾ ಮೋಸ. ಅವುಗಳ ಬದಲು ಮತ್ತೆ ಮತಪತ್ರಗಳನ್ನು ಬಳಕೆಗೆ ತರಬೇಕು’ ಎಂದು ಆಗ್ರಹಿಸಿದ್ದಾರೆ.

ಬುಧವಾರ ಎಐಸಿಸಿ ಅಧಿವೇಶನದಲ್ಲಿ ಮಾತನಾಡಿದ ಖರ್ಗೆ ಈ ಮಾತು ಹೇಳಿದ್ದಾರೆ.

ಕೆಲಸ ಮಾಡದಿದ್ದರೆ ನಿವೃತ್ತಿ ಹೊಂದಿ:

ಪಕ್ಷ ಸಂಘಟನೆಯ ಮಹತ್ವವನ್ನು ವಿವರಿಸಿದ ‘ಸಂಘಟನೆ ಇಲ್ಲದಿದ್ದರೆ ಎಷ್ಟು ಜನ ಇದ್ದರೂ ವ್ಯರ್ಥ. ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸದವರು ನಿವೃತ್ತರಾಗಬೇಕು’ ಎಂದರು.

‘ಪಕ್ಷ ಸಂಘಟನೆಯಲ್ಲಿ ಜಿಲ್ಲಾಧ್ಯಕ್ಷರ ಪಾತ್ರ ಬಹುಮುಖ್ಯವಾಗಲಿದೆ. ಹಾಗಾಗಿ ಅವರ ನೇಮಕ ಎಐಸಿಸಿ ಮಾರ್ಗಸೂಚಿಗಳ ಪ್ರಕಾರ ಕಟ್ಟುನಿಟ್ಟಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಯಬೇಕು. ನೇಮಕಾತಿಯ 1 ವರ್ಷದ ಒಳಗಾಗಿ ಅವರು ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡು ಬೂತ್‌ ಸಮಿತಿ, ಮಂಡಲ್‌ ಸಮಿತಿ, ಬ್ಲಾಕ್ ಸಮಿತಿ, ಜಿಲ್ಲಾ ಸಮಿತಿಗಳನ್ನು ರಚಿಸಬೇಕು’ ಎಂದು ಸೂಚಿಸಿದರು.

‘ದೇಶಾದ್ಯಂತವಿರುವ ಪಕ್ಷದ ಜಿಲ್ಲಾಧ್ಯಕ್ಷರ 3 ಸಭೆ ಕರೆದು, ನಾನು ಹಾಗೂ ರಾಹುಲ್‌ ಗಾಂಧಿಯವರು ಅವರಿಂದ ಮಾಹಿತಿ ಪಡೆದೆವು. ಭವಿಷ್ಯದಲ್ಲಿ, ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿನ ಜಿಲ್ಲಾಧ್ಯಕ್ಷರೂ ಪಾಲ್ಗೊಳ್ಳುವಂತೆ ಮಾಡುತ್ತೇವೆ’ ಎಂದು ಖರ್ಗೆ ತಿಳಿಸಿದರು.

ಇವಿಎಂ ಮಹಾ ಮೋಸ, ಮತಪತ್ರ ಬೇಕು:ಇದೇ ವೇಳೆ, ‘ಜಗತ್ತು ಮತಪತ್ರಗಳತ್ತ ಮರಳುತ್ತಿದ್ದರೆ, ನಾವು ಮಾತ್ರ ಇನ್ನೂ ಇವಿಎಂಗಳನ್ನೇ ಬಳಸುತ್ತಿದ್ದೇವೆ. ಆಡಳಿತ ಪಕ್ಷಕ್ಕೆ (ಬಿಜೆಪಿ) ಅನುಕೂಲವಾಗುವ ಮತ್ತು ವಿಪಕ್ಷಗಳಿಗೆ ಅನಾನುಕೂಲವಾಗುವಂತಹ ತಂತ್ರಗಳನ್ನು ಅನುಸರಿಸಲಾಗುತ್ತಿದೆ. ಇವಿಎಂ ಮಹಾ ಮೋಸ’ ಎಂದು ಕಿಡಿ ಕಾರಿದರು. ಜೊತೆಗೆ, ‘ಇದನ್ನು ಪತ್ತೆ ಮಾಡಲು ನಮ್ಮ ವಕೀಲರು ಮತ್ತು ನಾಯಕರು ಕೆಲಸ ಮಾಡುತ್ತಿದ್ದಾರೆ. ಕಳ್ಳರು ಸಿಕ್ಕಿಬೀಳುತ್ತಾರೆ’ ಎಂದರು.ಇದೇ ವೇಳೆ, ‘ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಮೋಸದಿಂದ ಗೆದ್ದಿತು. ಅಲ್ಲಿ ಮತದಾರರ ಪಟ್ಟಿಯನ್ನೇ ತಿರುಚಲಾಗಿತ್ತು. ಹರ್ಯಾಣದಲ್ಲೂ ಇದೇ ಆಯಿತು. ಇದು ಪ್ರಜಾಪ್ರಭುತ್ವವನ್ನು ನಾಶಪಡಿಸುವ ಯತ್ನವಾಗಿದೆ. ಇದರ ವಿರುದ್ಧ ಪಕ್ಷ ಹಾಗೂ ರಾಹುಲ್‌ ಗಾಂಧಿ ದನಿಯೆತ್ತಿದರು’ ಎಂದು ಖರ್ಗೆ ಹೇಳಿದರು. ಅಂತೆಯೇ, ‘ದೇಶದ ಯುವಜನತೆ ಮತಪತ್ರಗಳ ಬಳಕೆಯನ್ನು ಪ್ರತಿಪಾದಿಸಲಿದೆ’ ಎಂದೂ ಅವರು ಹೇಳಿದರು.