ಸಾರಾಂಶ
ಮಹೇಂದ್ರಗಢ (ಹರ್ಯಾಣ): ನಾನು ಬದುಕಿರುವವರೆಗೆ ಸಂವಿಧಾನದತ್ತವಾಗಿ ದಲಿತರು ಮತ್ತು ಬುಡಕಟ್ಟು ಸಮುದಾಯದವರಿಗೆ ಒದಗಿಸಲಾಗಿರುವ ಮೀಸಲಾತಿಯನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಅಬ್ಬರಿಸಿದ್ದಾರೆ.
ಗುರುವಾರ ಇಲ್ಲಿ ಬಿಜೆಪಿ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ, ‘ಇಂಡಿಯಾ ಕೂಟದಲ್ಲಿ ಹಸು ಹಾಲು ಕೊಡುವ ಮುನ್ನವೇ ತುಪ್ಪಕ್ಕೆ ಮಾಲೀಕರು ಬಡಿದಾಡುವಂತೆ ಫಲಿತಾಂಶಕ್ಕೆ ಮುನ್ನವೇ ಪ್ರಧಾನಿ ಪಟ್ಟಕ್ಕಾಗಿ ಅಂತರ್ಯುದ್ಧ ಪ್ರಾರಂಭವಾಗಿದೆ. ಅವರು ಈಗಾಗಲೇ ಸೋಲಿನ ಹಣೆಪಟ್ಟಿಯನ್ನು ಯಾರ ತಲೆಗೆ ಕಟ್ಟಬೇಕು ಎಂಬ ಚಿಂತನೆಯಲ್ಲಿ ತೊಡಗಿದ್ದಾರೆ. ನಿಮ್ಮ ಬಳಿ ಎರಡು ಆಯ್ಕೆಯಿದ್ದು, ಒಂದೆಡೆ ಸೇವಕನಾಗಿ ನಾನು (ನರೇಂದ್ರ ಮೋದಿ) ಇದ್ದರೆ ಮತ್ತೊಂದೆಡೆ ಇರುವವರನ್ನು ನೀವೇ ನಿರ್ಧರಿಸಬೇಕು’ ಎಂದು ಪರೋಕ್ಷವಾಗಿ ಪ್ರಬಲ ಪ್ರತಿಪಕ್ಷ ಇಲ್ಲದಿರುವ ಕುರಿತು ಟೀಕಿಸಿದರು.
ರಾಮಮಂದಿರ ಕಟ್ಟಲಿಲ್ಲ: ಇದೇ ವೇಳೆ ಸಿದ್ಧಾಂತದ ಕುರಿತು ಟೀಕಿಸುತ್ತಾ, ‘ಇಂಡಿಯಾ ಕೂಟದ ಪಕ್ಷಗಳು, ಕೋಮುವಾದ, ಜಾತಿವಾದ ಮತ್ತು ಸ್ವಜನಪಕ್ಷಪಾತದಿಂದ ಮುಳುಗಿವೆ. ಅವರ ಕಾಲದಲ್ಲಿ ಅಯೋಧ್ಯೆ ರಾಮಮಂದಿರ ಕಟ್ಟಲು ಆಗಲಿಲ್ಲ ಅದನ್ನು ನಾವು ಮಾಡಿ ತೋರಿಸಿದ್ದೇವೆ. ಈಗಲೂ ಸಂವಿಧಾನದಲ್ಲಿ ದಲಿತರು ಮತ್ತು ಬುಡಕಟ್ಟು ಸಮುದಾಯಕ್ಕೆ ಇರುವ ಮೀಸಲಾತಿಯನ್ನು ಕಿತ್ತೊಗೆದು ಬೇರೊಬ್ಬರಿಗೆ ರೂಪಿಸಲು ಹುನ್ನಾರ ನಡೆಸಿದ್ದಾರೆ. ಆದರೆ ನಾನು (ನರೇಂದ್ರ ಮೋದಿ) ಇರುವವರೆಗೂ ದಲಿತರು ಮತ್ತು ಎಸ್‌ಟಿ ಸಮುದಾಯದ ಮೀಸಲಾತಿಯನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ವಾಗ್ದಾಳಿ ನಡೆಸಿದರು.