ಕೇಂದ್ರದ ಮಧ್ಯಪ್ರವೇಶದಿಂದ ಮಣಿಪುರ ಬಚಾವ್‌ : ಮೋದಿ

| Published : Apr 09 2024, 12:55 AM IST / Updated: Apr 09 2024, 03:30 AM IST

ಸಾರಾಂಶ

ಲೋಕಸಬೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಪ್ರಧಾನಿ ನರೇಂದ್ರ ಮೋದಿ 200ಕ್ಕೂ ಹೆಚ್ಚು ಜನರ ಬಲಿಪಡೆದ ಮಣಿಪುರ ಗಲಭೆ ಬಗ್ಗೆ ಬಹುದಿನಗಳ ನಂತರ ಮತ್ತೆ ಮಾತನಾಡಿದ್ದಾರೆ.

ನವದೆಹಲಿ: ಲೋಕಸಬೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಪ್ರಧಾನಿ ನರೇಂದ್ರ ಮೋದಿ 200ಕ್ಕೂ ಹೆಚ್ಚು ಜನರ ಬಲಿಪಡೆದ ಮಣಿಪುರ ಗಲಭೆ ಬಗ್ಗೆ ಬಹುದಿನಗಳ ನಂತರ ಮತ್ತೆ ಮಾತನಾಡಿದ್ದಾರೆ. ‘ಕೇಂದ್ರ ಸರ್ಕಾರ ಸರಿಯಾದ ಸಮಯದಲ್ಲಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದ ಕಾರಣ ರಾಜ್ಯದಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ’ ಎಂದು ತಿಳಿಸಿದ್ದಾರೆ.

ಅಸ್ಸಾಂ ಟ್ರಿಬ್ಯೂನ್‌ ಪತ್ರಿಕೆಗೆ ಸಂದರ್ಶನ ನೀಡದ ಅವರು, ‘ಕೇಂದ್ರ ಸರ್ಕಾರವು ಮಣಿಪುರದಲ್ಲಿ ಪರಿಸ್ಥಿತಿ ಕೈ ಮೀರಿದ ಕೂಡಲೇ ಸೈನ್ಯವೂ ಸೇರಿದಂತೆ ಹಲವು ಸಂಪನ್ಮೂಲಗಳನ್ನು ರಾಜ್ಯಕ್ಕೆ ಕಳುಹಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು. ಈ ಸಮಯಲ್ಲಿ ಅಮಿತ್ ಶಾ ಕೂಡ ಕೆಲವು ದಿನಗಳ ಕಾಲ ಮಣಿಪುರದಲ್ಲಿ ವಾಸ್ತವ್ಯ ಹೂಡಿ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿದರು. ನಂತರ ಗಲಭೆಯಿಂದ ನಿರಾಶ್ರಿತರಾದವರ ಪುನರುಜ್ಜೀವನಕ್ಕಾಗಿ ಕೇಂದ್ರ ಸರ್ಕಾರದಿಂದ ವಿಶೇಷ ಆರ್ಥಿಕ ಪ್ಯಾಕೇಜ್‌ ಕೂಡ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ಕಳೆದ ವರ್ಷ ಮಣಿಪುರದಲ್ಲಿ ಮೈತೇಯಿ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕಲ್ಪಿಸುವುದನ್ನು ವಿರೋಧಿಸಿ ರಾಜ್ಯದಲ್ಲಿ ತಿಂಗಳಿಗೂ ಹೆಚ್ಚು ಕಾಲ ಗಲಭೆ ನಡೆದು ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿತ್ತು. ಈ ಗಲಭೆಯಲ್ಲಿ 200ಕ್ಕೂ ಹೆಚ್ಚು ಮಂದಿ ಪ್ರಾಣ ತೆತ್ತಿದ್ದರು. ಈ ಕುರಿತು ಪ್ರಧಾನಿ ಒಮ್ಮೆಯೂ ಪ್ರತಿಕ್ರಿಯಿಸಿಲ್ಲ. ಮಣಿಪುರ ಜನರ ಸಂತೈಕೆಗೆ ಅವರು ಹೋಗಲೇ ಇಲ್ಲ ಎಂದು ಪ್ರತಿಪಕ್ಷಗಳು ಸದಾಕಾಲ ಟೀಕಿಸುತ್ತಿದ್ದವು.