ಸಾರಾಂಶ
ಗ್ಯಾರಂಟಿ ನೀಡಿ ರಾಜ್ಯವನ್ನು ಯಾರಿಗೆ ಅಡವಿಡುತ್ತೀರಿ. ಗ್ಯಾರಂಟಿಗಳು ಎಲ್ಲರಿಗೂ ತಲುಪುತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಠಾನದ ಕುರಿತು ಶ್ವೇತ ಪತ್ರ ಹೊರಡಿಸಬೇಕು. ಆಗ ಮಾತ್ರ ಎಷ್ಟು ಜನರಿಗೆ ಯೋಜನೆ ತಲುಪಿದೆ ಎಂದು ತಿಳಿಯುತ್ತದೆ.
ಮೈಸೂರು : ಈಗ ಒಕ್ಕಲಿಗರ ಬಗ್ಗೆ ಕನಿಕರದಿಂದ, ಪರವಾಗಿ ಮಾತನಾಡುವ ಸಿದ್ದರಾಮಯ್ಯ ಅವರಿಗೆ 2019ರ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಯಾಕೆ ಮೈಸೂರಿನಿಂದ ಸ್ಪರ್ಧಿಸಲು ಅವಕಾಶ ನೀಡಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಪ್ರಶ್ನಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಆಗ ದೇವೇಗೌಡರು ಮೈಸೂರಿನಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆಗ ಸಿದ್ದರಾಮಯ್ಯ ಮೈಸೂರು ಕ್ಷೇತ್ರ ಬಿಟ್ಟುಕೊಡಲು ಸಾಧ್ಯವಿಲ್ಲ. ಇಲ್ಲಿ ವಿಜಯಶಂಕರ್‌ಗೆ ಟಿಕೆಟ್ ನೀಡುವುದಾಗಿ ಹೇಳಿದರು. ಯಾಕೆ ಆಗ ಒಕ್ಕಲಿಗರು ನೆನಪಾಗಲಿಲ್ಲವಾ?, ಅಥವಾ ಒಕ್ಕಲಿಗರು ಇರಲಿಲ್ಲವೆ? ಎಂದು ಖಾರವಾಗಿ ಪ್ರಶ್ನಿಸಿದರು.
ಜಾತ್ಯತೀತ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಇಂದು ಜಾತಿಯ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಒಕ್ಕಲಿಗರ ಪರ ಇದ್ದೇನೆ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಆದರೆ, 2019 ರಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ದೇವೇಗೌಡರು ಮೈಸೂರಿನಿಂದ ಟಿಕೆಟ್ ಕೇಳಿದ್ದರು. ಟಿಕೆಟ್ ಕೊಟ್ಟಿದ್ದರೆ ಗೆಲ್ಲುತ್ತಿದ್ದರು. ಆದರೆ ಸಿದ್ದರಾಮಯ್ಯ ಅವಕಾಶ ನೀಡಲಿಲ್ಲ. ಪರಿಣಾಮ ದೇವೇಗೌಡರು ತುಮಕೂರಿನಲ್ಲಿ ಸ್ಪರ್ಧಿಸಿ ಸೋತರು. ದೇವೇಗೌಡರ ಸೋಲಿಗೆ ಕಾಂಗ್ರೆಸ್ ನಾಯಕರು ಕಾರಣ ಎಂದು ಅವರು ಆರೋಪಿಸಿದರು.
ಆಗ ಮೈಸೂರು-ಕೊಡಗು ಕ್ಷೇತ್ರದಿಂದ ಕುರುಬ ಸಮುದಾಯದ ವಿಜಯಶಂಕರ್ ಅವರನ್ನು ಸಿದ್ದರಾಮಯ್ಯ ಕಣಕ್ಕಿಳಿಸಿದರು. ಆಗ ಒಕ್ಕಲಿಗರ ಮೇಲೆ ಇಲ್ಲದ ಪ್ರೀತಿ ಈಗ ಯಾಕೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ವಚನ ಭ್ರಷ್ಟ:
ಸಿದ್ದರಾಮಯ್ಯಗೆ ಕೃತಜ್ಞತೆ ಎಂಬುದಿಲ್ಲ. ವಚನಭ್ರಷ್ಟ ನಾಯಕ. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಕಲೀಂ ಉಲ್ಲಾ ಖಾನ್ ಪಕ್ಷೇತರವಾಗಿ ಸ್ಪರ್ಧಿಸಿದ್ದರು. ಅವರಿಗಿರುವ ಪ್ರಭಾವಕ್ಕೆ ಕನಿಷ್ಠ 10 ಸಾವಿರ ಮತ ಪಡೆಯುವ ಸಾಧ್ಯತೆ ಇತ್ತು. ಆಗ ಕುಮಾರಸ್ವಾಮಿ ಯಾವುದೇ ಕಾರಣಕ್ಕೆ ನಾಮಪತ್ರ ಹಿಂದಕ್ಕೆ ಪಡೆಯದಂತೆ ಹೇಳಿದ್ದರು. ಆದರೆ ಸಿದ್ದರಾಮಯ್ಯ ಈಗ ಕಲೀಂ ಅವರ ಮನೆಗೆ ತೆರಳಿ ನಾಮಪತ್ರ ಹಿಂದಕ್ಕೆ ಪಡೆಯಿರಿ, ಅಧಿಕಾರಕ್ಕೆ ಬಂದಾಗ ನಿಗಮ, ಮಂಡಳಿ ಸ್ಥಾನ ಕೊಡುವುದಾಗಿ ಹೇಳಿ, ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಿದರು. ಆದರೆ ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆದರೂ ಈವರೆಗೂ ಅವರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳದ ವಚನಭ್ರಷ್ಟ ಎಂದು ಅವರು ದೂರಿದರು.
ಒಂದು ವೇಳೆ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಗೆಲ್ಲದಿದ್ದರೆ ಸಿದ್ದರಾಮಯ್ಯಗೆ ರಾಜಕೀಯ ಪುನರ್ಜನ್ಮ ಸಿಗುತ್ತಿರಲಿಲ್ಲ. ಸಿದ್ದರಾಮಯ್ಯ ಕೃತಜ್ಞತೆ ಇಲ್ಲದ, ಹತ್ತಿದ ಏಣಿಯನ್ನೇ ಒದೆಯುವ ಗುಂಪಿಗೆ ಸೇರಿದವರು ದೂರಿದರು.
ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಆರೋಗ್ಯ ಹದಗೆಡಿಸಲು ಸಿಎಂ ಸಿದ್ದರಾಮಯ್ಯ ಅವರ ಮನೆಗೆ ಭೇಟಿ ನೀಡಿದ್ದಾರೆ? ಚುನಾವಣಾ ರಾಜಕೀಯದಿಂದ ದೂರಾಗಿ, ನಾನು ಯಾವುದೇ ಪಕ್ಷ ಬೆಂಬಲಿಸುವುದಿಲ್ಲ ಎಂದು ಶ್ರೀನಿವಾಸಪ್ರಸಾದ್ ಹೇಳಿದ್ದಾರೆ. ಆದರೂ ನೀವು ಅವರ ಮನೆಗೆ ಹೋಗಿದ್ದೀರಿ, ನೀವೇನು ಅವರ ವಿಶ್ವಾಸಿಯೇ? ಎಂದು ಅವರು ಕಿಡಿಕಾರಿದರು.
ಗ್ಯಾರಂಟಿ ಜಾರಿಯಾದಾಗ ನಾನು ಅದನ್ನು ಹೊಗಳಿದ್ದೆ. ಆದರೆ, ಆರ್ಥಿಕ ವ್ಯವಸ್ಥೆ ಸುಭಿಕ್ಷವಾಗಿದ್ದಾಗ ನೀಡಬೇಕು. ಇಂದು ಒಬ್ಬರಿಗೆ ನೀಡಿ ಇನ್ನೊಬ್ಬರಿಂದ ಕಿತ್ತು ಕೊಳ್ಳಲಾಗುತ್ತಿದೆ. ಗಂಡನಿಂದ ಕಿತ್ತು ಹೆಂಡತಿಗೆ ನೀಡುತ್ತಿದ್ದಾರೆ. ಇದರಿಂದ ಮನೆಯಲ್ಲಿ ಗಂಡ ಹೆಂಡಿರ ಜಗಳ ಗ್ಯಾರಂಟಿಯಾಗಿದೆ. ಸಾಮಾಜಿಕ ವ್ಯವಸ್ಥೆ ಬುಡಮೇಲಾಗುತ್ತಿದೆ. ಬಿಯರ್, ವಿದ್ಯುತ್, ಬಸ್ ದರ ಸೇರಿದಂತೆ ಅಗತ್ಯ ವಸ್ತುಗಳ ದರ ಹೆಚ್ಚಳವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಶ್ವನಾಥ್ಕಿಡಿಕಾರಿದರು.
ರಾಜ್ಯವನ್ನು ಯಾರಿಗೆ ಅಡವಿಡುತ್ತೀರಿ?
ನಿಮಗೆ ಸಂಪನ್ಮೂಲವೇ ಇಲ್ಲ. ಇಂತಹ ಸಂದರ್ಭದಲ್ಲಿ ಗ್ಯಾರಂಟಿ ನೀಡಿ ರಾಜ್ಯವನ್ನು ಯಾರಿಗೆ ಅಡವಿಡುತ್ತೀರಿ. ಜನರ ಕಣ್ಣಿಗೆ ಪಟ್ಟಿಕಟ್ಟುವುದು ಬೇಡ. ಅವರಿಗೆ ವಾಸ್ತವ ಸ್ಥಿತಿ ತಿಳಿಸಿ. ಜನರ ಕಷ್ಟ ಸುಖ ಕೇಳುತ್ತಿಲ್ಲ. ಅಲ್ಲದೆ ಗ್ಯಾರಂಟಿಗಳು ಎಲ್ಲರಿಗೂ ತಲುಪುತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಠಾನದ ಕುರಿತು ಶ್ವೇತ ಪತ್ರ ಹೊರಡಿಸಬೇಕು. ಆಗ ಮಾತ್ರ ಎಷ್ಟು ಜನರಿಗೆ ಯೋಜನೆ ತಲುಪಿದೆ ಎಂದು ತಿಳಿಯುತ್ತದೆ. ಸಂಪನ್ಮೂಲ ಎಲ್ಲಿಂದ ತರುತ್ತೀರಿ? ಗ್ಯಾರಂಟಿ ಜಾರಿಯಾದ ಬಳಿಕ ಎಷ್ಟು ಸಂಪನ್ಮೂಲ ಹೆಚ್ಚಳವಾಗಿದೆ? ಜನರಿಗೆ ಎಷ್ಟು ಹೊರೆಯಾಗಿದೆ ಎಂಬುದನ್ನು ತಿಳಿಸಲಿ ಎಂದು ಅವರು ಒತ್ತಾಯಿಸಿದರು.
ಮೋದಿ ಪ್ರಧಾನಿ ಆಗುವುದು ತಡೆಯಲಾಗದು:
ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಆಗದು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತಗಳಿಸಿ ಅಧಿಕಾರಕ್ಕೆ ಬರಲಿದೆ. ಮೋದಿ ಮೂರನೇ ಬಾರಿ ಪ್ರಧಾನಿ ಆಗಲಿದ್ದಾರೆ. ದೇಶದ ದೊಡ್ಡ ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದ್ದು, ಈ ಬಾರಿ ಅತ್ಯಂತ ಕಡಿಮೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಿದೆ. ಇನ್ನು ಅಧಿಕಾರಕ್ಕೆ ಬರಲು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ಫಿಫ್ಟಿ ಫಿಫ್ಟಿ ಸರ್ಕಾರ:
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಫಿಫ್ಟಿ ಫಿಫ್ಟಿ ಸರ್ಕಾರ. ಎರಡೂವರೆ ವರ್ಷ ಮುಗಿಯುತ್ತಿದ್ದಂತೆಯೇ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಬೇಕು. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲೇಬೇಕು. ಇದು ಪಕ್ಷದಲ್ಲಿ ನಿಶ್ಚಯವಾಗಿದೆ ಎಂದರು.
ಸೆರೆಗು ಎಳೆದಿದ್ದು ಮರೆತು ಹೋಯಿತೆ...?
ಕುಮಾರಸ್ವಾಮಿ ಅವರು ಗ್ಯಾರಂಟಿಗಳಿಂದ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ದಾರಿ ತಪ್ಪುತ್ತಾರೆ ಎಂದು ಹೇಳಿಕೆ ನೀಡಿದ್ದರು. ತಮ್ಮ ಹೇಳಿಕೆಗೆ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ. ಆದರೂ ಏಕೆ ಅದೇ ವಿಚಾರವನ್ನು ಮುಂದಿಟ್ಟುಕೊಂಡು ದೊಡ್ಡ ವಿವಾದ ಮಾಡುತ್ತಿದ್ದೀರಾ. ಈ ಹಿಂದೆ ಸಿದ್ದರಾಮಯ್ಯ ಅವರು ಗರ್ಗೇಶ್ವರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯ ಸೆರಗು ಎಳೆದಿದ್ದು ಮರೆತು ಹೋಯಿತೇ? ಆಗ ನೀವು ಮಾಡಿದ್ದು ಸರಿಯೇ? ಚುನಾವಣಾ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಮಾ ಮಾಲಿನಿಯವರ ಬಗ್ಗೆ ಮಾತನಾಡಿದ್ದು ಸರಿಯೇ? ಈ ಬಗ್ಗೆ ಕಾಂಗ್ರೆಸ್ ನಾಯಕರು ಉತ್ತರಿಸಬೇಕಲ್ಲವೇ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ಅವರಿಗೆ ಉಪಚುನಾವಣೆಯಲ್ಲಿ ನೆರವು ನೀಡಿದ್ದೆ. ಆದರೆ, ಅವರು ನನಗೆ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷ ಬೆಂಬಲಿಸಬೇಕು ಎಂಬುದನ್ನು ಬೆಂಬಲಿಗರ ಸಭೆ ಕರೆದು ತೀರ್ಮಾನಿಸುತ್ತೇನೆ.
- ಕಲೀಂ ಉಲ್ಲಾ ಖಾನ್, ಕಾಂಗ್ರೆಸ್ ಮುಖಂಡರು